ನ್ಯೂಸ್

ಶೃಂಗೇರಿ ಪೀಠದಿಂದ ಅಂಗವಿಕಲರಿಗೆ ವಿಶೇಷ ಸೌಲಭ್ಯ

ಶಿವಮೊಗ್ಗ: ಶೃಂಗೇರಿ ಸಂಸ್ಥಾನ ಸಾಮಾಜಿಕ, ಆರ್ಥಿಕ, ಆರೋಗ್ಯ, ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು ಅಂಗವಿಕಲರಿಗೆ ವಿಶೇಷ ಒತ್ತು ನೀಡುತ್ತಿದೆ ಎಂದು ಶೃಂಗೇರಿ ಶ್ರೀ ಶಾರದಾ ಪೀಠದ ಪ್ರತಿನಿಧಿ ಉಮೇಶ್ ಹೇಳಿದರು.

ಶಿವಮೊಗ್ಗದ ಸಕ್ಷಮದಿಂದ ಕಲ್ಲಹಳ್ಳಿಯ ಮಾಧವನೆಲೆಯಲ್ಲಿ ವಿಶ್ವ ಅಂಗವಿಲಕರ ದಿನಾಚರಣೆ ಅಂಗವಾಗಿ ಬುಧವಾರ ಶೃಂಗೇರಿ ಪೀಠದಿಂದ ಫಲಾನುಭವಿಗಳಿಗೆ 10 ತ್ರಿಚಕ್ರದ ಸೈಕಲ್ ವಿತರಿಸಿ ಮಾತನಾಡಿ, 1,200 ವರ್ಷಗಳ ಹಿಂದೆ ಧರ್ಮಕ್ಷೋಭೆ ಉಂಟಾದಾಗ ಭಗವಂತ ಶಂಕರಾಚಾರ್ಯರ ರೂಪದಲ್ಲಿ ಸನಾತನ ಧರ್ಮವನ್ನು ಕಾಪಾಡಿ ನಾಲ್ಕು ದಿಕ್ಕಿನಲ್ಲಿ ಆಮ್ನೇಯ ಪೀಠಗಳನ್ನು ಸ್ಥಾಪಿಸಿದರು. ದಕ್ಷಿಣಾಮ್ನಾಯ ಶೃಂಗೇರಿ ಪೀಠ ಇದುವರೆಗೆ 36 ಜಗದ್ಗುರುಗಳನ್ನು ಕಂಡಿದ್ದು ಎಲ್ಲರೂ ಸನಾತನ ಧರ್ಮದ ರಕ್ಷಣೆ ಮತ್ತು ಪೋಷಣೆ ಮಾಡಿಕೊಂಡು ಬಂದಿದ್ದಾರೆ. ಇದೇ ಈ ಪೀಠದ ಉದ್ದೇಶ ಎಂದರು.

ಈಗಿನ ಪೀಠಾಧಿಪತಿ ಶ್ರೀ ಭಾರತೀತೀರ್ಥರ ಅಧಿಕಾರದ ಅವಧಿಯಲ್ಲಿ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಮಾಡುತ್ತಿದೆ. ಶ್ರೀಮಠದಿಂದ ಬೆಂಗಳೂರು, ಹೈದರಾಬಾದ್ ಮತ್ತು ನೋಯ್ಡದಲ್ಲಿ ಅಂಗವಿಕಲರಿಗಾಗಿಯೇ ದೀಪಿಕಾ ಎಂಬ ಮೂರು ಶಾಲೆ ತೆರೆದು ಸೇವಾ ಚಟುವಟಿಕೆ ನಡೆಸುತ್ತಿದೆ. ಆ ಮಕ್ಕಳಿಗೆ ಯಾವುದಕ್ಕೂ ಕಡಿಮೆಯಾಗದಂತೆ ಎಲ್ಲ ಸೌಲಭ್ಯ ಕಲ್ಪಿಸಿ ಆರೋಗ್ಯವಂತ ವಾತಾವರಣ ನೀಡಲಾಗಿದೆ ಎಂದರು.

ಅನೇಕ ಆಸ್ಪತ್ರೆಗಳನ್ನು ತೆರೆದು ಉತ್ತಮ ಆರೋಗ್ಯ ಸೇವೆ ನೀಡುತ್ತಿದೆ. ಹೆಣ್ಣು ಮಕ್ಕಳಿಗೆ ಜಗದ್ಗುರುಗಳ ವರ್ಧಂತಿಯಂದು ಉಚಿತವಾಗಿ ಹೊಲಿಗೆ ಯಂತ್ರ ಮತ್ತು ಅಂಗವಿಕಲರಿಗೆ ತ್ರಿಚಕ್ರ ಸೈಕಲ್ ನೀಡುತ್ತಿದ್ದು ಈ ಮಕ್ಕಳಿಗೆ ವಿಶೇಷ ಗೌರವ ನೀಡುವಂತೆ ಅವರು ಸಲಹೆ ನೀಡಿದರು. ಜತೆಗೆ ಶ್ರೀಮಠದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಹೇಳಿದರು.

ಸಕ್ಷಮ ಸಂಸ್ಥೆ ಕಾರ್ಯದರ್ಶಿ ಕುಮಾರಶಾಸ್ತ್ರಿ ಪ್ರಾಸ್ತಾವಿಕ ಮಾತನಾಡಿ, ಅಂಗವಿಕಲರ ಸಂಕಷ್ಟ ಅರಿತು ಕರೊನಾ ಸಂದರ್ಭದಿಂದ ಇಲ್ಲಿವರೆಗೂ 120 ಜನರಿಗೆ ಪ್ರತಿತಿಂಗಳು ಆಹಾರದ ಕಿಟ್ ವಿತರಿಸಲಾಗುತ್ತಿದೆ. ಆರೋಗ್ಯ ಸೌಲಭ್ಯ ಮತ್ತು ಪುಸ್ತಕಗಳು, ಸ್ಟೇಷನರಿ ಸೇರಿದಂತೆ ಮಕ್ಕಳಿಗೆ ಅನೇಕ ಸಹಕಾರವನ್ನು ಸಂಸ್ಥೆ ನೀಡುತ್ತಿದೆ. ಬುದ್ಧಿಮಾಂದ್ಯ ಮಕ್ಕಳಿಗೆ ವಿಶೇಷ ಸಲಕರಣೆ ಒದಗಿಸಿದೆ ಎಂದರು.

ಸಾಗರದ ಅದಮ್ಯ ಚೇತನ ಶಾಲೆಯ 4 ವಿದ್ಯಾರ್ಥಿಗಳು ರಾಷ್ಟ್ರೀಯ ಕೋಚಿಂಗ್ ಕ್ಯಾಂಪ್‌ಗೆ ಆಯ್ಕೆಯಾಗಿದ್ದು ಅವರನ್ನು ಅಭಿನಂದಿಸಲಾಯಿತು. ಸಕ್ಷಮ ಸಂಸ್ಥೆ ಅಧ್ಯಕ್ಷ ಡಾ. ಪ್ರಶಾಂತ್ ಇಸ್ಲೂರ್, ರಮೇಶ್ ಪ್ರಭು, ಗಣೇಶ್ ಪ್ರಸಾದ್, ಉದಯ್ ಕುಮಾರ್, ಶಿವಕುಮಾರ್ ಇತರರಿದ್ದರು.