ಶಿವಮೊಗ್ಗ: ಕೋಟೆ ರಸ್ತೆಯಲ್ಲಿರುವ ಆಚಾರ್ಯತ್ರಯರ ಭವನಕ್ಕೆ ಅ.8ರ ಮಧ್ಯಾಹ್ನ 12.30ಕ್ಕೆ ಶೃಂಗೇರಿ ಶಾರದಾ ಪೀಠದ ಕಿರಿಯ ಶ್ರೀಗಳಾದ ವಿಧುಶೇಖರ ಭಾರತೀ ಸ್ವಾಮೀಜಿ ಆಗಮಿಸಿ ಭಕ್ತರನ್ನು ಅನುಗ್ರಹಿಸಲಿದ್ದಾರೆ ಎಂದು ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಶಾಸಕನಾಗಿದ್ದ ಸಂದರ್ಭ ಆಚಾರ್ಯತ್ರಯರ ಭವನ ಮಂಜೂರು ಮಾಡಿಸಿದ್ದೆ. 2016ರಲ್ಲಿ ಭೂಮಿ ಪೂಜೆ ನೆರವೇರಿತ್ತು. 2023ರಲ್ಲಿ ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ ವರ್ಚುವಲ್ ಮೂಲಕ ಉದ್ಘಾಟನೆ ನೆರವೇರಿಸಿದ್ದರು. ಈ ಭವನಕ್ಕೆ ಯಾವುದೇ ಯತಿಗಳ ಪಾದಸ್ಪರ್ಶ ಇದುವರೆಗೂ ಆಗಿರಲಿಲ್ಲ. ಈಗ ಶೃಂಗೇರಿ ಶ್ರೀಗಳು ಆಗಮಿಸುತ್ತಿರುವುದು ಸಂತೃಪ್ತಿ ಮೂಡಿಸಿದೆ ಎಂದರು.
ವಿದ್ವಾನ್ ಶಂಕರಾನಂದ ಜೋಯ್ಸ ಮಾತನಾಡಿ, ವಿಧುಶೇಖರ ಶ್ರೀಗಳು 8ರ ಮಧ್ಯಾಹ್ನ 12ಕ್ಕೆ ಪುರ ಪ್ರವೇಶ ಮಾಡಲಿದ್ದಾರೆ. ಬೆಕ್ಕಿನ ಕಲ್ಮಠ ಎದುರು ಶ್ರೀಗಳನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಗುವುದು. ಅಲ್ಲಿಂದ ಶೋಭಾಯಾತ್ರೆ ಮೂಲಕ ಕೋಟೆ ರಸ್ತೆಯ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕರೆತರಲಾಗುವುದು. ಶ್ರೀಗಳು ಆಚಾರ್ಯತ್ರಯರ ಭವನಕ್ಕೆ ಆಗಮಿಸಿ ಭಕ್ತರನ್ನು ಅನುಗ್ರಹಿಸಲಿದ್ದಾರೆ ಎಂದು ತಿಳಿಸಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ಎಸ್.ದತ್ತಾತ್ರಿ, ಜಿಲ್ಲಾ ಪ್ರತಿನಿಧಿ ರಘುರಾಮ್, ಪ್ರಮುಖರಾದ ಎಂ.ಶಂಕರ್, ರಾಘವೇಂದ್ರ ಉಡುಪ, ಪ್ರಕಾಶ್ ಭಟ್, ರವಿಶಂಕರ್, ಜಿ.ಎಸ್.ಅನಂತ್, ಮಧುಮತಿ, ಶ್ರೀಕಾಂತ್ ಸುದ್ದಿಗೋಷ್ಠಿಯಲ್ಲಿದ್ದರು.