ಮಲೆನಾಡು ನಾಗರಿಕರ ಹಕ್ಕುಗಳ ಹೋರಾಟ ಸಮಿತಿ ಶೃಂಗೇರಿಯ ಕನ್ನಡಭವನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ತಾಲೂಕಿನ ನಾಗರಿಕರು ಭಾಗವಹಿಸಿದ್ದರು. ಪ್ರವೀಣ್ ಪೂಜಾರಿ, ಅನಿರುದ್ಧ್, ಸಸಜಿ.ಎಂ.ಮೋಹನ್, ತ್ಯಾಗರಾಜ್, ರಮಾದೇವಿ, ನಾಗೇಂದ್ರ ಇದ್ದರು. 
ನ್ಯೂಸ್

ಅರಣ್ಯ ಇಲಾಖೆ ವಿರುದ್ಧ ಹೋರಾಟ

ಶೃಂಗೇರಿ: ತಾಲೂಕಿನಲ್ಲಿ ಮರಣ ಶಾಸನ ಬರೆಯಲು ಹೊರಟಿರುವ ಕಂದಾಯ ಇಲಾಖೆ ಹಾಗೂ ರೈತರಿಗೆ ತೊಂದರೆ ನೀಡುತ್ತಿರುವ ಅರಣ್ಯ ಇಲಾಖೆಯ ವಿರುದ್ಧ ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದು ಮಲೆನಾಡು ನಾಗರಿಕ ಹಕ್ಕುಗಳ ಹೋರಾಟ ಸಮಿತಿ ಗೌರವಾಧ್ಯಕ್ಷ ಕೆ.ಎಂ.ಶ್ರೀನಿವಾಸ್ ತಿಳಿಸಿದರು.
ಕನ್ನಡ ಭವನದಲ್ಲಿ ಬುಧವಾರ ಸಮಿತಿಯಿಂದ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು. ಕಾನೂನುಗಳನ್ನು ಅಸವಾಗಿರಿಸಿಕೊಂಡು ಇಲಾಖೆಗಳು ಹಲವು ವರ್ಷಗಳಿಂದ ರೈತರ ಹಾಗೂ ಜನಸಾಮಾನ್ಯರ ಬದುಕಿನಲ್ಲಿ ಚೆಲ್ಲಾಟವಾಡುತ್ತಿವೆ. ಸಣ್ಣಹಿಡುವಳಿದಾರರು ಜಮೀನಿನ ಸಮೀಪ ಒತ್ತುವರಿ ಮಾಡಿಕೊಂಡ ಜಾಗ ನಮ್ಮದು ಎಂದು ಹೇಳಿಕೊಳ್ಳುವ ಇಲಾಖೆ ಹತ್ತಾರು ಎಕರೆ ಒತ್ತುವರಿ ಮಾಡಿಕೊಂಡ ಪ್ರಭಾವಿಗಳ ಜಾಗದ ಕಡೆ ಹೋಗುವುದಿಲ್ಲ ಏಕೆ ಎಂದು ಪ್ರಶ್ನಿಸಿದರು. ಬಡವರಿಗೆ ನಿವೇಶನ ನೀಡಲು ಸ್ಥಳ ಹುಡುಕುವ ಮನೋಪ್ರವೃತ್ತಿ ಇಲ್ಲಿನ ಯಾವುದೇ ಅಧಿಕಾರಿಗಳಿಗೆ ಇಲ್ಲ ಎಂದರು.
ಅಧ್ಯಕ್ಷ ಅಂಬ್ಲೂರು ರಾಮಕೃಷ್ಣ ಮಾತನಾಡಿ, ತಾಲೂಕು ಕಚೇರಿ ಇದುವರೆಗೆ ಗೋಮಾಳ, ಹುಲ್ಲುಬನಿ ಭೂಮಿಗಳಿಗೆ ಒಂದೇ ಒಂದು ಹಕ್ಕುಪತ್ರ ನೀಡಿಲ್ಲ. ಸೊಪ್ಪಿನಬೆಟ್ಟದ 50ರಿಂದ 53ರ ಹಲವಾರು ಅರ್ಜಿಗಳನ್ನು ಸಕ್ರಮಗೊಳಿಸಿ ಇಲಾಖೆ ಪಹಣಿ ನೀಡಿದ ಜಾಗವನ್ನು ಕೂಡ ತೆರವುಗೊಳಿಸಬೇಕು ಎಂದು ರಾಜ್ಯ ಕಂದಾಯ ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕಟಾರಿಯಾ ಹೇಳಿಕೆ ಖಂಡನೀಯ. ಸರ್ಕಾರ ಎಂದಿಗೂ ರೈತಪರ ಎಂದು ಹೇಳುವ ಜನಪ್ರತಿನಿಧಿಗಳು ತಾಲೂಕಿನ ಸಮಸ್ಯೆಗಳ ಕುರಿತು ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ದೂರಿದರು.
ಇಲಾಖೆಗಳು ರೈತ ವಿರೋಧಿ ಕೆಲಸಕ್ಕೆ ಪ್ರಸ್ತುತ ಕೈ ಹಾಕಿದ್ದು. ಇಲಾಖೆಯ ಇಬ್ಬಗೆಯ ನೀತಿಯಿಂದ ತಾಲೂಕಿನ ನಾಗರಿಕರು ರೋಸಿ ಹೋಗಿದ್ದು ಸೆ.23ರಂದು ಸಮಿತಿಯಿಂದ ಹೋರಾಟ ಮಾಡಲು ತೀರ್ಮಾನಿಸಲಾಗಿದೆ ಎಂದರು.
ಸಮಿತಿ ಪದಾಧಿಕಾರಿಗಳಾದ ನಾಗೇಶ್, ಆಗುಂಬೆ ಗಣೇಶ್ ಹೆಗಡೆ, ದಿನೇಶ್ ಅಂಗುರ್ಡಿ, ಎಚ್.ಎಸ್.ಸುಬ್ರಹ್ಮಣ್ಯ, ತನಿಕೋಡು ಶ್ರೀನಿವಾಸ್ ನಾಯ್ಕ ಇದ್ದರು.