ನ್ಯೂಸ್

ಸಾಲದ ಸುಳಿಯಲ್ಲಿ ಶ್ರೀಲಂಕಾ; ಆರ್ಥಿಕ ಸಂಕಷ್ಟದಿಂದ ಬಳಲುತ್ತಿದೆ ದ್ವೀಪರಾಷ್ಟ್ರ

Webdesk - Ravikanth

ವಿದೇಶಗಳಿಂದ ಪಡೆದುಕೊಂಡಿರುವ 51 ಶತಕೋಟಿ ಡಾಲರ್ ಸಾಲವನ್ನು ಮರುಪಾವತಿಸುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಶ್ರೀಲಂಕಾ ಮಂಗಳವಾರ ಘೋಷಿಸಿದೆ. ದ್ವೀಪರಾಷ್ಟ್ರ ಇದುವರೆಗೂ ಕಂಡು ಕೇಳರಿಯದಂಥ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು, ಇದರ ಮಾಹಿತಿ ಇಲ್ಲಿದೆ.

ವಿದೇಶಗಳಿಂದ ತೆಗೆದುಕೊಂಡ ಸಾಲವನ್ನು ಮರುಪಾವತಿಸಲು ಸಾಧ್ಯವಾಗುತ್ತಿಲ್ಲ ಎಂದು ದ್ವೀಪರಾಷ್ಟ್ರ ಶ್ರೀಲಂಕಾ ಮಂಗಳವಾರ ಸಾರ್ವಜನಿಕವಾಗಿ ಘೋಷಿಸಿದೆ. ಶ್ರೀಲಂಕಾ ವಿದೇಶಗಳಿಂದ ಒಟ್ಟು 51 ಶತಕೋಟಿ ಡಾಲರ್ ಸಾಲವನ್ನು ಪಡೆದುಕೊಂಡಿದೆ. ಕರೊನಾ ಸಂಕಷ್ಟದ ನಂತರದಲ್ಲಿ ಲಂಕಾದ ಪ್ರವಾಸೋದ್ಯಮಕ್ಕೆ ಹೊಡೆತ ಬಿದ್ದಿದೆ. ಇದರೊಂದಿಗೆ ಅರ್ಥವ್ಯವಸ್ಥೆಯೂ ಕುಸಿತ ಕಂಡಿದೆ. ಆಹಾರ ಮತ್ತು ಇಂಧನ ಕೊರತೆ ಕಾಡುತ್ತಿದೆ. ಸುದೀರ್ಘ ಅವಧಿಯ ಪವರ್ ಕಟ್ ಜನರನ್ನು ಕಂಗೆಡಿಸಿದೆ. ಆಹಾರ ಮತ್ತು ನಿತ್ಯೋಪಯೋಗಿ ವಸ್ತುಗಳ ಬೆಲೆ ಗಗನಕ್ಕೇರಿವೆ. 1948ರಲ್ಲಿ ದೇಶ ಸ್ವಾತಂತ್ರ್ಯ ಪಡೆದ ನಂತರದಲ್ಲಿ ಇದೇ ಮೊದಲ ಸಲ ಈ ಪ್ರಮಾಣದ ಬಿಕ್ಕಟ್ಟು ಲಂಕನ್ನರನ್ನು ಕಾಡಿದೆ.

ಬಿಕ್ಕಟ್ಟಿಗೇನು ಕಾರಣ?: ಸರ್ಕಾರ ಬಹಳ ವರ್ಷಗಳಿಂದ ವಿದೇಶಗಳಿಂದ ಸಾಲ ಪಡೆಯುತ್ತ ಬಂದಿದೆಯೇ ಹೊರತು, ಅದನ್ನು ಸರಿಯಾದ ಸಮಯಕ್ಕೆ ಮರುಪಾವತಿಸಲು ಮುಂದಾಗಿಲ್ಲ. ಆದಾಯದ ಮಿತಿಯನ್ನೂ ಗಮನಿಸಿಲ್ಲ. ಒಟ್ಟಾರೆಯಾಗಿ ಅಸಮರ್ಪಕ ಆರ್ಥಿಕ ನಿರ್ವಹಣೆ ಮತ್ತು ತೆರಿಗೆ ವಿನಾಯಿತಿ, ತೆರಿಗೆ ಸಂಗ್ರಹದ ಕೊರತೆಯ ಕಾರಣ ಶ್ರೀಲಂಕಾ ಇಂದು ಅತಿದೊಡ್ಡ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ.

ರೇಟಿಂಗ್ ಇಳಿಕೆ: ಅಂತಾರಾಷ್ಟ್ರೀಯ ರೇಟಿಂಗ್ ಏಜೆನ್ಸಿಗಳು ಶ್ರೀಲಂಕಾ ಅರ್ಥವ್ಯವಸ್ಥೆಯನ್ನು ಕಳೆದ ವರ್ಷವೇ ಡೌನ್​ಗ್ರೇಡ್ ಮಾಡಿದ್ದವು. ಹೀಗೆ ಮಾಡುವ ಮೂಲಕ ವಿದೇಶಿ ಕ್ಯಾಪಿಟಲ್ ಮಾರ್ಕೆಟ್​ನಿಂದ ಹೊಸ ಸಾಲ ಪಡೆಯದಂತೆ ಮತ್ತು ಆಹಾರ, ಇಂಧನ ಬೇಡಿಕೆ ಈಡೇರಿಸಿಕೊಳ್ಳದಂತೆ ಮಾಡಿದ್ದವು. ಹೀಗಾಗಿ ಭಾರತ ಮತ್ತು ಚೀನಾದಿಂದ ಸಾಲದ ಪರಿಹಾರವನ್ನು ಲಂಕಾ ಕೋರಿತ್ತು. ಆದರೆ, ಎರಡೂ ದೇಶಗಳು ಇನ್ನಷ್ಟು ಸಾಲವನ್ನು ತಮ್ಮಲ್ಲಿಂದ ಸರಕುಗಳನ್ನು ಖರೀದಿಸುವುದಕ್ಕಾಗಿ ನೀಡಿದವೇ ಹೊರತು, ಪರಿಹಾರವನ್ನಲ್ಲ.

ಸುಸ್ತಿದಾರ ಇತರ ದೇಶಗಳು: ಶ್ರೀಲಂಕಾದಂತೆ ಸುಸ್ತಿದಾರವಾದ ಇತರ ಕೆಲವು ದೇಶಗಳು ಪ್ರಪಂಚದಲ್ಲಿವೆ. ಲೆಬನಾನ್, ಅರ್ಜೆಂಟೀನಾ, ಬೆಲಿಜ್, ಝಾಂಬಿಯಾ, ಸುರಿನಾಮೆ ರಾಷ್ಟ್ರಗಳು 2020ರಲ್ಲಿ ಇದೇ ರೀತಿ ಸುಸ್ತಿಗಾರ ರಾಷ್ಟ್ರಗಳಾಗಿವೆ. ವೆನಿಜುವೆಲಾ 2017-18ರಲ್ಲಿ ಸುಸ್ತಿ ಘೋಷಿಸಿತ್ತು. ಗ್ರೀಸ್ 2015ರಲ್ಲಿ, ಈಕ್ವಿಡಾರ್ 2008 ಮತ್ತು 2020ರಲ್ಲಿ, ಮೆಕ್ಸಿಕೋ 1982ರಲ್ಲಿ ಸುಸ್ತಿ ಘೋಷಿಸಿತ್ತು.

ವಿದೇಶಿ ಸಾಲದ ಪ್ರಮಾಣ: ಅಧಿಕೃತ ದತ್ತಾಂಶಗಳ ಪ್ರಕಾರ ಚೀನಾ ಮತ್ತು ಜಪಾನ್​ಗಳಿಂದ ಶ್ರೀಲಂಕಾ ಹೆಚ್ಚಿನ ಸಾಲವನ್ನು ಪಡೆದಿದೆ. ಇದು ಶೇಕಡ 10ರಷ್ಟಿದೆ. ಭಾರತದಿಂದ ಪಡೆದ ಸಾಲದ ಪ್ರಮಾಣ ಶೇಕಡ 5ರ ಒಳಗಿದೆ. ಇದಲ್ಲದೆ, ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ, ಇಂಟರ್​ನ್ಯಾಷನಲ್ ಸಾವರಿನ್ ಬಾಂಡ್ಸ್ ಮತ್ತು ಇಂಥದ್ದೇ ಇತರ ಮೂಲಗಳಿಂದ ಸಾಲವನ್ನು ಪಡೆದುಕೊಂಡಿದೆ. ಅಂದಾಜಿನ ಪ್ರಕಾರ, ಶ್ರೀಲಂಕಾಕ್ಕೆ ಈ ವರ್ಷ ಸಾಲದ ಹೊರೆ ತಗ್ಗಿಸುವುದಕ್ಕೆ 700 ಕೋಟಿ ಡಾಲರ್ ಅಗತ್ಯವಿದೆ. ಆದರೆ, ಮಾರ್ಚ್​ಗೆ ಕೊನೆಗೊಂಡ ವರ್ಷದಲ್ಲಿ ಅದಕ್ಕೆ ಸಾಧ್ಯವಾಗಿದ್ದು 190 ಕೋಟಿ ಡಾಲರ್ ಮಾತ್ರ.

ರಷ್ಯಾ ಕೂಡ ಸುಸ್ತಿಯಾಗಿತ್ತು!: ರಷ್ಯಾ ಕೂಡ ವಿದೇಶಿ ಕರೆನ್ಸಿ ಆಧಾರಿತ ಸಾಲದಿಂದಾಗಿ 1918ರಲ್ಲಿ ಸುಸ್ತಿಯಾಗಿತ್ತು. 1998ರಲ್ಲಿ ವಿದೇಶಿ ಸಾಲ ತೀರಿಸುವುದಕ್ಕೆ ಆಗದ್ದರಿಂದ 90 ದಿನಗಳ ಮಾರಟೋರಿಯಂ ಬೇಕು ಎಂದು ರಷ್ಯಾ ಘೋಷಿಸಿತ್ತು.

ಜನರಿಂದ ತೀವ್ರ ಪ್ರತಿಭಟನೆ: ಸರ್ಕಾರದ ವಿರುದ್ಧ ಸಾರ್ವಜನಿಕರ ಆಕ್ರೋಶ ಹೆಚ್ಚಿದೆ. ನಿತ್ಯೋಪಯೋಗಿ ವಸ್ತುಗಳಿಗೆ, ಆಹಾರಕ್ಕೆ, ಇಂಧನಕ್ಕಾಗಿ ಜನರು ಸರದಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ. ಇಂಧನ ಮತ್ತು ಇತರ ನಿತ್ಯೋಪಯೋಗಿ ವಸ್ತುಗಳನ್ನು ಆಮದು ಮಾಡಿಕೊಳ್ಳುವುದಕ್ಕೂ ಆಗದ ಪರಿಸ್ಥಿತಿಗೆ ಶ್ರೀಲಂಕಾ ತಲುಪಿದೆ. ಅಧ್ಯಕ್ಷ ಗೋತಬಯಾ ರಾಜಪಕ್ಷ ಅವರ ಕಚೇರಿ ಎದುರು ಸಾವಿರಾರು ಸಾರ್ವಜನಿಕರು ಸತತ ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

ಪ್ರಧಾನಿ ಮಹಿಂದಾ ಮಾತಿನ ಸಾರ

ದೇಶ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಮಹಿಂದಾ ರಾಜಪಕ್ಸ ಇದೇ ಮೊದಲ ಸಲ ದೇಶದ ಜನರನ್ನು ಉದ್ದೇಶಿಸಿ ಸೋಮವಾರ ರಾತ್ರಿ ಮಾತನಾಡಿದರು.

  • ಲಂಕಾದ ಯುವಜನರು ಬೀದಿಗಿಳಿದು ಸರ್ಕಾರದ ರಾಜೀನಾಮೆ ಬಯಸಿದ್ದಾರೆ ಎಂದ ಮಾತ್ರಕ್ಕೆ ರಾಜಪಕ್ಸ ಕುಟುಂಬ ಅಧಿಕಾರ ಬಿಟ್ಟು ಕೆಳಗಿಳಿಯುವುದಿಲ್ಲ. ಎಲ್​ಟಿಟಿಇ ಸಮಸ್ಯೆ ಬಗೆಹರಿಸಿದ್ದು ತನ್ನದೇ ಸರ್ಕಾರ ಎಂಬುದನ್ನು ದೇಶ ಮರೆಯಬಾರದು.
  • ಜನತಾ ವಿಮುಕ್ತಿ ಪೆರಮುನ, ತಮಿಳು ಬಂಡಾಯಗಳಂತೆಯೇ ಈಗ ನಡೆಯುತ್ತಿರುವ ರಾಜಪಕ್ಸ ವಿರೋಧಿ ಪ್ರತಿಭಟನೆಗಳು ಕೂಡ ದೇಶವಿರೋಧಿಯೇ ಆಗಿವೆ. ಇಂಥ ಪ್ರತಿಭಟನೆಗಳಿಂದ ಜನರು ಮನೆಗಳನ್ನು ಕಳೆದುಕೊಳ್ಳಲಿದ್ದಾರೆ. ಮಕ್ಕಳು ಶಿಕ್ಷಣ ವಂಚಿತರಾಗಲಿದ್ದಾರೆ. ಹೀಗಾಗಿ ಪ್ರತಿಭಟನೆ ಮಾಡುವುದು ಸಮಂಜಸವಲ್ಲ.
  • ಪ್ರತಿಭಟನೆ ಮಾಡುವುದರಿಂದ ಪ್ರತಿಭಟನಾಕಾರರಿಗಷ್ಟೇ ಅಲ್ಲ, ದೇಶದ ಅರ್ಥವ್ಯವಸ್ಥೆಗೂ ಡಾಲರ್ ಲೆಕ್ಕದಲ್ಲಿ ಹಾನಿ ಆಗುತ್ತದೆ. ಸಂಕಷ್ಟದಲ್ಲಿರುವಾಗ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕೆ ಹೊರತು, ದೇಶವಿರೋಧಿಗಳಂತೆ ವರ್ತಿಸಬಾರದು.
  • ಪ್ರಜಾಪ್ರಭುತ್ವ ವಿರೋಧಿ ನಿಲುವನ್ನು ಸರ್ಕಾರ ತೆಗೆದು ಕೊಂಡಿಲ್ಲ. ತೆಗೆದುಕೊಳ್ಳುವುದೂ ಇಲ್ಲ. ಸದ್ಯ ದೇಶ ಎದುರಿ ಸುತ್ತಿರುವ ಪರಿಸ್ಥಿತಿಯಲ್ಲಿ ರಾಜಕೀಯ ಬೆರೆಸಬಾರದು.