ನ್ಯೂಸ್

ಎಸಿಬಿ ಬಲೆಗೆ ಬಿದ್ದ ಭ್ರಷ್ಟ ಪಂಚಾಯಿತಿ ಅಧಿಕಾರಿ: ವಶಕ್ಕೆ ಪಡೆದ ಅಕ್ರಮ ಆಸ್ತಿ ಮೌಲ್ಯ ಕೇಳಿದ್ರೆ ಬೆರಗಾಗ್ತೀರಾ!

ವಿಶಾಖಪಟ್ಟಣಂ: ಆಂಧ್ರ ಪ್ರದೇಶದ ರಣಸ್ಥಳಂ ಮಂಡಲದ ಪಂಚಾಯಿತಿ ಅಧಿಕಾರಿಯೊಬ್ಬರ ಮನೆಯಲ್ಲಿ ಭಾರಿ ನಗದು, ಚಿನ್ನಾಭರಣ ಸೇರಿದಂತೆ ಬರೋಬ್ಬರಿ 1.38 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿಯನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಶನಿವಾರ ವಶಪಡಿಸಿಕೊಂಡಿದ್ದು, ಅಧಿಕಾರಿಯನ್ನು ಬಂಧಿಸಿದೆ.

ಬಂಧಿತ ಹಣದಾಹದ ಅಧಿಕಾರಿಯನ್ನು ಅಗುರು ವೆಂಕಟ ರಾವ್​ (52) ಎಂದು ಗುರುತಿಸಲಾಗಿದೆ. ಈತ ಶ್ರೀಕಾಕುಳಂನ ರಣಸ್ಥಳಂ ಮಂಡಲದ ಪಂಚಾಯಿತಿ ಅಧಿಕಾರಿ. ಸದ್ಯ ಅಧಿಕಾರಿನ್ನು ಬಂಧಿಸಿದ್ದು, ಎಸಿಬಿ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

ವಿಶಾಖಪಟ್ಟಣಂ ನಿವಾಸ ಮತ್ತು ಪೈದಿಭೀಮಾವರಂನಲ್ಲಿನ ಕಚೇರಿಯ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಪರಿಶೀಲಿಸಿದ್ದಾರೆ. ಇಷ್ಟೇ ಅಲ್ಲದೆ, ಬಂಧು ಬಳಗದ ಮನೆಯ ಮೇಲೂ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.

ವೆಂಕಟ್​ ರಾವ್​ 1995ರಲ್ಲಿ ಪಂಚಾಯಿತಿ ಕಾರ್ಯದರ್ಶಿಯಾಗಿ ನೇಮಕವಾದರು. ಇವರು ವಿಸ್ತರಣಾಧಿಕಾರಿ, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಹೆಚ್ಚುವರಿ ಅಧಿಕಾರವನ್ನು ಸಹ ಹೊಂದಿದ್ದರು.

ಕುಟುಂಬದ ಸದಸ್ಯರ ಹೆಸರಿನಲ್ಲಿರುವ ಅಕ್ರಮ ಆಸ್ತಿಯನ್ನು ಎಸಿಬಿ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಹಲವೆಡೆ ಫ್ಲ್ಯಾಟ್​ಗಳು, ಸೈಟ್​ ಸೇರಿದಂತೆ ಭಾರಿ ನಗದು ಮತ್ತು ಚಿನ್ನಾಭರಣಗಳನ್ನು ಅಧಿಕಾರಿಗಳು ದಾಳಿ ಪತ್ತೆಹಚ್ಚಿದ್ದಾರೆ. (ಏಜೆನ್ಸೀಸ್​)