ಶಿವಮೊಗ್ಗದ ಚೌಕಿಮಠದಲ್ಲಿ ಆಯೋಜಿಸಿದ್ದ ವೀರಭದ್ರೇಶ್ವರ ಜಯಂತಿ ಹಾಗೂ ಜನಜಾಗೃತಿ ಧರ್ಮ ಸಮಾರಂಭದಲ್ಲಿ ಶ್ರೀ ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದರು ಆಶೀರ್ವಚನ ನೀಡಿದರು. ಶ್ರೀ ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಶ್ರೀ ರಾಚೋಟೇಶ್ವರ ಸ್ವಾಮೀಜಿ, ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಇದ್ದರು. 
ನ್ಯೂಸ್

ಶ್ರೀ ವೀರಭದ್ರೇಶ್ವರ ಕಲಿಯುಗದ ದೈವ: ಕಾಶಿ ಶ್ರೀ

ಶಿವಮೊಗ್ಗ: ದಕ್ಷಬ್ರಹ್ಮ ಕೈಗೊಂಡ ಯಜ್ಞದಲ್ಲಿ ತನ್ನ ಅಳಿಯ ಶಿವನಿಗೆ ಆಹ್ವಾನ ನೀಡದೆ ಅಪಮಾನ ಮಾಡುತ್ತಾನೆ. ಆಗ ಶಿವ ಕ್ರೋಧಕ್ಕೊಳಗಾದಾಗ ಶಿವನ ಜಠೆಯಿಂದ ಉದ್ಭವಿಸಿದವನೇ ವೀರಭದ್ರ. ಆತ ಜನ್ಮತಾಳಿದ ತಕ್ಷಣ ದುರಂಹಕಾರಿ ದಕ್ಷಬ್ರಹ್ಮನ ಸಂಹಾರ ಮಾಡುತ್ತಾನೆ. ಆ ವೀರಭದ್ರನೇ ಧರ್ಮದ ರಕ್ಷಣೆ ಮಾಡುತ್ತ ಕಲಿಯುಗದಲ್ಲಿ ಪ್ರತ್ಯಕ್ಷ ದೇವರಾಗಿ ಪ್ರಕಟವಾಗಿದ್ದಾನೆ ಎಂದು ಕಾಶಿ ಪೀಠದ ಶ್ರೀ ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ಚೌಕಿಮಠ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ವೀರಭದ್ರೇಶ್ವರ ಜಯಂತ್ಯುತ್ಸವ ಹಾಗೂ ಜನಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಧರ್ಮದ ರಕ್ಷಣೆ, ದುಷ್ಟರ ಸಂಹಾರ, ಶಿಷ್ಟರ ರಕ್ಷಣೆಗಾಗಿ ಜನ್ಮ ತಾಳಿದವನೇ ವೀರಭದ್ರ. ಕಲಿಯುಗದಲ್ಲಿ ಕಾಣುವ ಪ್ರತ್ಯಕ್ಷ ದೇವರಾದ ವೆಂಕಟರಮಣ ಕೂಡ ವೀರಭದ್ರನ ಅವತಾರ ಎಂದು ಆಂಧ್ರಪ್ರದೇಶ, ಮಹಾರಾಷ್ಟ್ರ ಭಾಗದ ಶೈವ ಬ್ರಾಹ್ಮಣರು ನಂಬಿದ್ದಾರೆ ಎಂದರು.

ಸಂಸಾರದಲ್ಲಿ ತಾಳ್ಮೆ ಬಹಳ ಮುಖ್ಯ. ತಾಳ್ಮೆ ಕಳೆದುಕೊಂಡರೆ ತಾಳಿಗೆ ಆಪತ್ತು. ತಾಳಿದವನು ಬಾಳಿಯಾನು ಎಂಬಂತೆ ನಡೆದುಕೊಳ್ಳಬೇಕು. ಹೆಣ್ಣಿಗೆ ತಾಳ್ಮೆ ಬಹಳ ಮುಖ್ಯ. ಆದರೆ ಇಂದು ತುಂಬು ಕುಟುಂಬ ಕಡಿಮೆಯಾಗಿರುವ ಕಾರಣ ಮಕ್ಕಳಿಗೆ ಉತ್ತಮ ಸಂಸ್ಕಾರ ಸಿಗುವ ಅವಕಾಶ ಕಡಿಮೆಯಾಗುತ್ತಿದೆ. ಇಂತಹ ಸನ್ನಿವೇಶವೇ ಮುಂದೆ ವೈವಾಹಿಕ ಜೀವನದಲ್ಲಿ ತೊಡಕು ಉಂಟಾಗಲು ಕಾರಣವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಗೃಹಸ್ಥಾಶ್ರಮ ಉಳಿದ ಮೂರು ಆಶ್ರಮಗಳನ್ನು ಪಾಲನೆ ಮಾಡುತ್ತವೆ. ಗೃಹಸ್ಥನಾಗಿ ಉತ್ತಮ ಜೀವನ ನಡೆಸಿದರೆ ಉಳಿದ ಆಶ್ರಮಗಳಿಗೂ ಶಕ್ತಿ ಬರುತ್ತದೆ. ಇದೇ ಕಾರಣದಿಂದ ಸುವರ್ಣ ದಾಂಪತ್ಯ ಪೂರೈಸಿದ ದಂಪತಿಯನ್ನು ಈ ವೇದಿಕೆಯಲ್ಲಿ ಗೌರವಿಸಲಾಯಿತು ಎಂದರು.

ಬಿಳಕಿ ಶ್ರೀ ರಾಚೋಟೇಶ್ವರ ಸ್ವಾಮೀಜಿ, ಪಂಚವಣ್ಣಿಗೆ ಮಠದ ಶ್ರೀ ಚನ್ನವೀರ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಕೋಣಂದೂರು ಬೃಹನ್ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.