ಜಯಪುರ ಗ್ರಾಪಂ ವ್ಯಾಪ್ತಿಯ ಜಲದುರ್ಗ ಶ್ರೀ ನಾಗಸಾನ್ನಿಧ್ಯ, ಶ್ರೀ ವನದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ನಡೆದ ವಾರ್ಷಿಕ ಪೂಜಾ ಕಾರ್ಯಕ್ರಮದಲ್ಲಿ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಪಾಲ್ಗೊಂಡರು. 
ನ್ಯೂಸ್

ಕಾಯಕದಲ್ಲಿ ಕಾಣಬೇಕು ಭಗವಂತನ

ಜಯಪುರ: ಮಾಡುವ ಪ್ರತಿ ಕೆಲಸವನ್ನೂ ಭಗವಂತನ ಪೂಜೆ ಎಂದುಕೊಂಡು ಪ್ರೀತಿಯಿಂದ ಮಾಡಬೇಕು. ಅದು ಕೃಷಿ, ವ್ಯಾಪಾರ, ಅಡುಗೆ, ಪೌರೋಹಿತ್ಯ ಹೀಗೆ ಯಾವುದೇ ಆಗಿರಲಿ. ಆಗ ನಮ್ಮಲ್ಲಿ ಮೋಸದ ಆಲೋಚನೆಗಳು ಸುಳಿಯುವುದಿಲ್ಲ. ಪ್ರತಿಯೊಬ್ಬರೂ ಇದನ್ನು ಪಾಲಿಸಿದಲ್ಲಿ ಸಮಾಜದಲ್ಲಿ ಶಾಂತಿ, ನೆಮ್ಮದಿ, ಐಶ್ವರ್ಯ ಎಲ್ಲವೂ ದೊರಕುತ್ತದೆ ಎಂದು ಹರಿಹರಪುರ ಶ್ರೀ ಶಾರದಾ ಲಕ್ಷ್ಮೀನೃಸಿಂಹ ಪೀಠಾಧೀಶ್ವರ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಜಯಪುರ ಗ್ರಾಪಂ ವ್ಯಾಪ್ತಿಯ ಜಲದುರ್ಗ ಶ್ರೀ ನಾಗ ಸಾನ್ನಿಧ್ಯ, ಶ್ರೀ ವನದುರ್ಗಾ ಪರಮೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಭಾನುವಾರ ಏರ್ಪಡಿಸಿದ್ದ ವಾರ್ಷಿಕ ಪೂಜಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಕಾಯಕವೇ ಕೈಲಾಸ, ಕಾಯಕದಲ್ಲಿ ಭಗವಂತನನ್ನು ಕಾಣಬೇಕು. ಯಾವ ಮನುಷ್ಯನು ನನಗೆ ಎಲೆ, ಹೂವು, ಹಣ್ಣನ್ನಾಗಲಿ ಭಕ್ತಿಯಿಂದ ಸಮರ್ಪಣೆ ಮಾಡುತ್ತಾನೋ ಅದನ್ನು ನಾನು ಸಂತೋಷದಿಂದ ಸ್ವೀಕರಿಸಿ ಆಶೀರ್ವದಿಸುತ್ತೇನೆ ಎಂದು ಭಗವಾನ್ ಶ್ರೀಕೃಷ್ಣ ಹೇಳಿದ್ದಾನೆ. ಆತ ಎಲ್ಲೂ ಚಿನ್ನ, ಬೆಳ್ಳಿಯನ್ನು ಕೇಳಿಲ್ಲ. ನಿಷ್ಕಲ್ಮಶ ಭಕ್ತಿಯನ್ನು ಮಾತ್ರ ಕೇಳಿದ್ದಾನೆ. ಹಾಗಾಗಿ ಭಗವಂತನ ಕೃಪೆಗೆ ಪಾತ್ರರಾಗಬೇಕಾದರೆ ನಾವು ಸಮಾಜ, ಪ್ರಕೃತಿಗೆ, ನಮ್ಮ ವೃತ್ತಿಗೆ ಮೋಸ ಮಾಡದೆ ಬದುಕಿದರೆ ಸಾಕು ಎಂದರು.
ಪುರೋಹಿತ ಎಂದರೆ ಪುರದ ಹಿತ ಕಾಯುವವನು ಎಂದರ್ಥ. ಗ್ರಾಮದ ಒಳಿತಿಗಾಗಿ ಯಾವುದೇ ಸ್ವಾರ್ಥಪರ ಚಿಂತನೆಯಿಲ್ಲದೆ ಸಮಾಜದ ಉದ್ಧಾರಕ್ಕಾಗಿ ಚಿಂತಿಸುವವನು ಪುರೋಹಿತ. ಲೋಕ ಕಲ್ಯಾಣಾರ್ಥ ದೈವಿಕ ಕಾರ್ಯ ನಡೆಸುವವನು ಪುರೋಹಿತ. ಅದಕ್ಕಾಗಿ ಪುರೋಹಿತರಿಗೆ ಹಿಂದೆ ವಿಶೇಷ ಮಾನ್ಯತೆ ನೀಡಲಾಗಿದೆ. ಅದರಂತೆ ಬದುಕುವವರು ಮಾತ್ರ ಶ್ರೇಷ್ಠ ಪುರೋಹಿತರಾಗಲು ಸಾಧ್ಯ ಎಂದರು.
ವಾರ್ಷಿಕೋತ್ಸವ ಅಂಗವಾಗಿ ಬೆಳಗ್ಗೆ ಗಣಪತಿ ಪೂಜೆ, ಪುಣ್ಯಾಹ ವಾಚನ, ಮಹಾಸಂಕಲ್ಪ, ಭೂವರಾಹ ಹೋಮ, ವನದುರ್ಗಾ ಪರಮೇಶ್ವರಿ ಹೋಮ, ನಾಗದೇವರಿಗೆ ಪವಮಾನ ಅಭಿಷೇಕ, ದುರ್ಗಾಪೂಜೆ, ಕುಂಕುಮಾರ್ಚನೆ, ಮಹಾಮಂಗಳಾರತಿ, ಅನ್ನಸಂತರ್ಪಣೆ ನಡೆಯಿತು.
ಪುರೋಹಿತರಾದ ಡಾ. ಗಣೇಶ್ ಶಾಸ್ತ್ರಿ, ದೇವಸ್ಥಾನ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ, ಉಪಾಧ್ಯಕ್ಷೆ ಜಯಂತಿ ನಾಗರಾಜ್, ಕಾರ್ಯದರ್ಶಿ ಜಯಾ ಮುರುಗೇಶ್, ಖಜಾಂಚಿ ಸರೋಜಾ ವಸಂತ, ಸ್ಥಳೀಯರಾದ ಪ್ರದೀಪ್ ಹೆಬ್ಬಾರ್, ಸುಬ್ರಹ್ಮಣ್ಯ ಭಟ್ ಇತರರಿದ್ದರು.