ಈ ಅಭ್ಯಾಸಗಳಿಂದ ಹೊರಬರುವ ಮಾರ್ಗವೆಂದರೆ ವ್ರತವನ್ನು ಆಚರಿಸುವುದು. ಇದನ್ನೇ ಸಂಯಮ ಎನ್ನುತ್ತೇವೆ. ಯಾವುದೇ ವ್ರತ ಅಥವಾ ನಿಯಮವನ್ನು ಪಾಲಿಸುವ ಪ್ರಾರಂಭದಲ್ಲಿ, ‘ಇಂತಿಷ್ಟು ಕಾಲದವರೆಗೆ’ ಎಂಬ ಶಪಥವನ್ನು ನಿಮಗೆ ನೀವೇ ಮಾಡಿಕೊಳ್ಳಬೇಕು. ಇದು ನಿಮ್ಮ ಸನ್ನಡತೆಗೆ ಸಹಾಯ ಮಾಡಿ ನಿಯಮ ಪಾಲನೆಯಲ್ಲಿ ದಾರಿ ತಪ್ಪದಂತೆ ಕಾಪಾಡುತ್ತದೆ. ಹಾಗಾಗಿಯೇ ಯಾವ ಸ್ಥಳದಲ್ಲಿ ಇದ್ದೀರಿ ಮತ್ತು ಯಾವ ಸಮಯದಲ್ಲಿ ಈ ನಿರ್ಧಾರವನ್ನು ಕೈಗೊಳ್ಳುತ್ತಿದ್ದೀರಿ ಎನ್ನುವುದು ಅತಿ ಮುಖ್ಯವಾಗುತ್ತದೆ.
ಅಪ್ರಯೋಜಕವಾದ ಆಲೋಚನೆಗಳಲ್ಲಿ ಮನಸ್ಸು ಸಿಲುಕಿಕೊಂಡಿರುವಾಗ ಎರಡು ಸಂಗತಿಗಳು ಸಂಭವಿಸುತ್ತವೆ. ಮೊದಲನೆಯದಾಗಿ, ಹಳೆಯ ಸಂಸ್ಕಾರಗಳ ನೆನಪುಗಳು ಮೇಲೆದ್ದು ಬರುತ್ತವೆ. ನೀವಾಗ ಧೈರ್ಯಗುಂದುತ್ತೀರಿ. ಎರಡನೆಯದೆಂದರೆ, ಸಂಯಮ ಸಾಧಿಸಲು, ಅಭ್ಯಾಸಗಳನ್ನು ನಿಯಂತ್ರಿಸಲು ನಿಮಗೆ ಸಿಕ್ಕಿರುವ ಸದವಕಾಶವು ಇದೆಂದು ಭಾವಿಸಿ ಸಂತೋಷಗೊಳ್ಳುತ್ತೀರಿ. ಸಂಯಮವಿಲ್ಲದ ಜೀವನ ನಿಸ್ಸಾರ ಹಾಗೂ ಕಾಯಿಲೆಗಳಿಗೆ ಆಹ್ವಾನ. ಸಂಯಮದ ಸಹಾಯದಿಂದ ನೀವು ದುರಭ್ಯಾಸಗಳನ್ನು ಮೀರಿ ಮೇಲೇರಬಹುದು.
ದುರಭ್ಯಾಸಗಳನ್ನು ಮೀರಲು ನೀವು ಮಾಡುವ ವ್ರತಾಚರಣೆ ಅಥವಾ ತೆಗೆದುಕೊಳ್ಳುವ ನಿರ್ಧಾರಗಳನ್ನು ನೀವಿರುವ ಸ್ಥಳ ಹಾಗೂ ಸಮಯಕ್ಕನುಸಾರವಾಗಿ ಮಾಡಿರಿ. ಉದಾಹರಣೆಗೆ ಸಿಗರೇಟ್ ಸೇದುವ ಚಟ ಇರುವ ವ್ಯಕ್ತಿ ಅದನ್ನು ಬಿಟ್ಟುಬಿಡುತ್ತೇನೆ ಎಂದು ನಿರ್ಧರಿಸಿದಾಕ್ಷಣ ಸಾಧ್ಯವಾಗುವುದಿಲ್ಲ. ಆತ ಮೂರು ತಿಂಗಳ ಕಾಲ ಅಥವಾ ಇಂತಿಷ್ಟು ದಿನಗಳವರೆಗೆ ಸಿಗರೇಟ್ ಸೇದುವುದಿಲ್ಲ ಎಂದು ಕಾಲಾವಧಿಯನ್ನು ವಿಧಿಸಿಕೊಳ್ಳಬೇಕು. ಜೀವನ ಪೂರ್ತಿ ಪಾಲಿಸುತ್ತೇನೆ - ಎಂದು ಪ್ರಾರಂಭಿಸಿದರೆ ನೀವು ಆ ನಿರ್ಬಂಧವನ್ನು ಆ ಕೂಡಲೇ ಮುರಿಯುವ ಸಾಧ್ಯತೆಗಳೇ ಹೆಚ್ಚು. ಇಷ್ಟಾಗಿಯೂ ಪ್ರಯತ್ನದ ಮಧ್ಯದಲ್ಲಿ ನೀವು ಸೋತರೆ, ಧೈರ್ಯಗೆಡಬೇಕಿಲ್ಲ, ಚಿಂತಿಸಬೇಕಿಲ್ಲ. ಸುಮ್ಮನೆ ಪುನರಾರಂಭಿಸಿ. ನಿಧಾನವಾಗಿ ಅದು ನಿಮ್ಮ ಸ್ವಭಾವವೇ ಆಗುವವರೆಗೆ ನಿರ್ಧರಿತ ಸಮಯ ಮತ್ತು ಕಾಲವನ್ನು ವಿಸ್ತರಿಸುತ್ತ ಹೋಗಿರಿ.
ನೀವು ಜ್ಞಾನ ಸ್ವರೂಪರೇ ಆಗಿದ್ದೀರಿ. ನಿಮ್ಮ ದೇಹದ ಕಣಕಣವು ಜ್ಞಾನದಿಂದ ತುಂಬಿ ತುಳುಕುತ್ತಿದೆ. ಸಾಮಾನ್ಯವಾಗಿ, ಹರಟೆ ದೂರುವುದು ಮುಂತಾದ ಕೆಲಸಕ್ಕೆ ಬಾರದ ಮಾತು ಕಥೆಗಳಿಂದ ನೀವು ಸ್ನೇಹಿತರನ್ನು ಸಂಪಾದಿಸುತ್ತೀರಿ. ಜ್ಞಾನ ಮಾರ್ಗದ ಮೂಲಕ ಒಂದಾಗುವುದು ಬಹಳ ಅಪರೂಪ. ಜ್ಞಾನದಲ್ಲಿ ಬೇರೆಯವರನ್ನು ಔನ್ನತ್ಯಕ್ಕೇರಿಸಿ. ಹಗಲಿನಲ್ಲಿ ಕೆಲವು ನಿಮಿಷಗಳ ಕಾಲ ಕಣ್ಗಳನ್ನು ಮುಚ್ಚಿ ನಿಮ್ಮ ಹೃದಯಾಂತರಾಳದ ದೇಗುಲದೊಳಗೆ ಪ್ರವೇಶಿಸಿ, ಬಾಹ್ಯ ಪ್ರಪಂಚವನ್ನು ಒಂದು ಚೆಂಡನ್ನು ಒದೆಯುವಂತೆ ಝಾಡಿಸಿ ಸುಮ್ಮನೆ ಕುಳಿತುಕೊಳ್ಳಿರಿ. ಕಾಲಕಳೆದಂತೆ ಈ ಅಭ್ಯಾಸದಿಂದ ಒಂದೇ ಸಮಯಕ್ಕೆ ಪ್ರಾಪಂಚಿಕ ಕೆಲಸಗಳನ್ನು ನಿರ್ವಹಿಸಲು ಹೊರಮುಖರಾಗುವುದು ಮತ್ತು ಒಳಮುಖರಾಗಿ ಮುಕ್ತರಾಗುವುದು - ಇವೆರಡೂ ಸಹಜವಾಗಿ ಸಾಧ್ಯವಾಗುತ್ತದೆ. ಇದೇ ಜೀವಿಸುವ ಜಾಣ್ಮೆ; ಜೀವನ ಕಲೆ! ಜ್ಞಾನಿಯಾದವನು ಕೆಟ್ಟ ಸಮಯದಲ್ಲಿಯೂ ಸಂತೋಷದಿಂದಲೇ ಇರುತ್ತಾನೆ. ಮೂರ್ಖನಾದವನು ಒಳ್ಳೆಯ ಸಮಯದಲ್ಲಿಯೂ ದುಃಖಿಯಾಗಿರುತ್ತಾನೆ. ಹಾಗಾಗಿ ಸಮಯವನ್ನು ಕೆಟ್ಟದ್ದಾಗಿ ಅಥವಾ ಒಳ್ಳೆಯದಾಗಿ ಮಾಡಿಕೊಳ್ಳುವುದು ನಮ್ಮ ಕೈಯಲ್ಲಿಯೇ ಇದೆ. ನೀವು ಕಾಲಾತೀತರು ಎಂದು ಅರಿಯಿರಿ. ಆಗ ದೈವತ್ವದ ನಂಟಿನೊಂದಿಗೆ ನೀವು ಸಮಯದಲ್ಲಿ ಸುಗಮವಾಗಿ ಸಾಗಬಲ್ಲಿರಿ. ಮಾಸವು ಕಳೆದಂತೆ, ಕ್ಯಾಲೆಂಡರಿನ ಹಾಳೆಗಳನ್ನು ತಿರುವಿ ಹಾಕುವಂತೆ ನಾವು ನಮ್ಮ ಮನಸ್ಸಿನ ಹಾಳೆಗಳನ್ನು ತಿರುವಿ ಹಾಕಬೇಕಾದ ಅವಶ್ಯಕತೆ ಇದೆ. ಸಾಮಾನ್ಯವಾಗಿ ನಮ್ಮ ದಿನಚರಿಯ ಪುಸ್ತಕದಲ್ಲಿ ಹಳೆಯ ನೆನಪುಗಳೇ ತುಂಬಿರುತ್ತವೆ. ಭವಿಷ್ಯದ ದಿನಗಳು, ಭೂತಕಾಲದ ಘಟನೆಗಳ ರೀತಿಯಲ್ಲಿಯೇ ನಡೆಯುತ್ತವೆ ಎಂದು ಭಾವಿಸಬೇಡಿ. ಹೊಸತನದಿಂದ ಕೂಡಿ, ಸೃಜನಶೀಲತೆಯು ಹುಟ್ಟಿ ಬೆಳೆಯಲು ಒಂದು ಅವಕಾಶವನ್ನು ಮಾಡಿಕೊಡಿ.
ಭೂತಕಾಲದ ಘಟನೆಗಳಿಂದ ಏನು ಮಾಡಬೇಕು ಮತ್ತು ಏನು ಮಾಡಬಾರದು ಎರಡನ್ನೂ ಕಲಿಯಿರಿ. ಪ್ರಯತ್ನಶೀಲತೆಯು ನಿಮ್ಮಿಂದ ಉತ್ತಮವಾದದ್ದನ್ನೇ ಹೊರಹೊಮ್ಮಿಸುತ್ತದೆ. ಫಲಸಿಗುವ ಸಮಯ ಬಂದಾಗ ಪ್ರಪಂಚದಲ್ಲಿ ಉತ್ಕೃಷ್ಟವಾದದ್ದೇ ನಿಮಗೆ ದೊರೆಯುತ್ತದೆ. ಹೃದಯವು ಸದಾ ಕಾಲ ಹಳೆಯದಕ್ಕಾಗಿ ಹಂಬಲಿಸುತ್ತಿರುತ್ತದೆ. ಮನಸ್ಸು ಹೊಸತನಕ್ಕಾಗಿ ಹಾತೊರೆಯುತ್ತಿರುತ್ತದೆ. ಜೀವನವು ಇವೆರಡರ ಸಮ್ಮಿಲನವೇ ಆಗಿದೆ.