ಬೆಟ್ಟದಪುರ: ಬೆಟ್ಟದಪುರದ ಶಕ್ತಿ ದೇವತೆ ಎಂದೇ ಪ್ರಸಿದ್ಧಿ ಪಡೆದಿರುವ ಶ್ರೀ ಶಾಂತವೀರಮ್ಮ ಅವರ ಹಬ್ಬ ಶುಕ್ರವಾರ ವಿಜೃಂಭಣೆಯಿಂದ ಜರುಗಿತು.
ಬೆಟ್ಟದಪುರದ ಸಂತೆಮಾಳದಲ್ಲಿ ಈ ದೇವಾಲಯವಿದ್ದು, ಗ್ರಾಮದ ಎಲ್ಲ ಕೋಮಿನ ಜನರು ಒಗ್ಗೂಡಿ ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ಹಬ್ಬ ಆಚರಣೆ ಮಾಡುವುದು ಇಲ್ಲಿನ ವಿಶೇಷವಾಗಿದೆ.
ಹಬ್ಬದ ಪ್ರಯುಕ್ತ ಮುಂಜಾನೆಯಿಂದಲೇ ದೇವಿಗೆ ಹೋಮ, ಹವನ, ಅಭಿಷೇಕಗಳು ಜರುಗಿದವು. ಮಧ್ಯಾಹ್ನ ಮಹಾ ಮಂಗಳಾರತಿ ಬಳಿಕ ದೇವಿಯ ಬೆಳ್ಳಿಯ ಉತ್ಸವ ಮೂರ್ತಿಯನ್ನು ವಾದ್ಯಮೇಳಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಈ ವೇಳೆ ಗ್ರಾಮದ ಪ್ರತಿ ಮನೆಯವರೂ ಹಣ್ಣು, ಕಾಯಿ ಸಮರ್ಪಿಸಿದರು, ರಥ ಬೀದಿ, ಉಪ್ಪಾರಬೀದಿ ಹಾಗೂ ಸಂಕೇತಿ ಬೀದಿಗಳಲ್ಲಿ ಮೆರವಣಿಗೆ ನಡೆದ ನಂತರ ರಾತ್ರಿ ದೇವಸ್ಥಾನಕ್ಕೆ ಉತ್ಸವ ಮೂರ್ತಿಯನ್ನು ತರಲಾಯಿತು.
ಉತ್ಸವ ಮೂರ್ತಿಯೊಂದಿಗೆ ಮಹಿಳೆಯರು ತಂಬಿಟ್ಟು ಸೇವೆಯ ಎಡೆಯನ್ನು ಹೊತ್ತು ತಂದರು. ನಂತರ ರಾತ್ರಿ ವೇಳೆ ಮಹಿಳೆಯರು ತಂಬಿಟ್ಟಿನ ಆರತಿ ಸೇವೆ ಸಲ್ಲಿಸುವುದರೊಂದಿಗೆ ದೇವಾಲಯದ ಬಳಿ ಕೆಂಡದ ಹಾದಿಯನ್ನು ನಿರ್ಮಿಸಿ, ಕೊಂಡ ಹಾಯುವ ಮೂಲಕ ಗ್ರಾಮಸ್ಥರು ದೇವಿಗೆ ಹರಕೆ ಒಪ್ಪಿಸಿದರು.
ಹಬ್ಬದ ಪ್ರಯುಕ್ತ ದೇವಾಲಯಕ್ಕೆ ತಳಿರು-ತೋರಣಗಳಿಂದ ಸಿಂಗರಿಸಿ ವಿವಿಧ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಯುವಕರು ಕೇಸರಿ ಶಲ್ಯವನ್ನು ಧರಿಸಿ, ತಮಟೆ ಸದ್ದಿಗೆ ಹೆಜ್ಜೆ ಹಾಕುತ್ತಾ ಸಂಭ್ರಮಿಸಿದರು. ಭಕ್ತರಿಗೆ ದೇವಾಲಯದ ಆವರಣದಲ್ಲಿ ಪ್ರಸಾದ ವಿನಿಯೋಗ ಮಾಡಲಾಯಿತು.
ಬೆಟ್ಟದಪುರ, ಚನ್ನೇಗೌಡನಕೊಪ್ಪಲು, ಅರಳಿಮರದ ಕೊಪ್ಪಲು ಹಾಗೂ ಬಸವೇಶ್ವರ ಕಾಲನಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಹಬ್ಬದಲ್ಲಿ ಪಾಲ್ಗೊಂಡಿದ್ದರು.