ಶಿವಮೊಗ್ಗ: ಜಗದ್ಗುರು ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಶ್ರೀಮದುತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರು ತಮ್ಮ 28ನೇ ಚಾತುರ್ಮಾಸ್ಯ ವ್ರತವನ್ನು ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಕ್ಷೇತ್ರದಲ್ಲಿ ಕೈಗೊಳ್ಳಲಿದ್ದಾರೆ.
ಈ ಹಿನ್ನೆಲೆಯಲ್ಲಿ ಶ್ರೀಗಳು ಜು.11ರ ಸಂಜೆ 5ಕ್ಕೆ ಹೊಳೆಹೊನ್ನೂರು ಪುರಪ್ರವೇಶ ಮಾಡಲಿದ್ದಾರೆ. ಹೊಳೆಹೊನ್ನೂರು ವೃತ್ತದಿಂದ ಮೂಲ ಸೀತಾರಾಮಚಂದ್ರ ದೇವರು ಹಾಗೂ ಶ್ರೀಗಳನ್ನು ಪೂರ್ಣಕುಂಭದೊಂದಿಗೆ ಅದ್ದೂರಿಯಾಗಿ ಬರ ಮಾಡಿಕೊಳ್ಳಲಾಗುವುದು. ಬಳಿಕ ಶ್ರೀಗಳು, ತಮ್ಮ ಪರಂಪರೆಯ ಪೂರ್ವಗುರುಗಳಾದ ಶ್ರೀ ಸತ್ಯಧರ್ಮ ತೀರ್ಥ ಶ್ರೀಪಾದಂಗಳವರ ಮೂಲ ಬೃಂದಾವನದ ದರ್ಶನಾಶೀರ್ವಾದ ಪಡೆಯಲಿದ್ದಾರೆ. ಆನಂತರ ವಿದ್ವತ್ ಸಭಾ ಕಾರ್ಯಕ್ರಮವಿದೆ. ಜು.12ರಂದು ಶ್ರೀ ಸತ್ಯಧರ್ಮ ತೀರ್ಥರ ಅನುಗ್ರಹದೊಂದಿಗೆ ಶ್ರೀ ಸತ್ಯಾತ್ಮ ತೀರ್ಥರು ಚಾತುರ್ಮಾಸ್ಯ ವ್ರತ ಸಂಕಲ್ಪ ಮಾಡಲಿದ್ದಾರೆ.
ಉತ್ತರಾದಿ ಮಠಾಧೀಶರ ಈ ಚಾತುರ್ಮಾಸ್ಯ ಕಾರ್ಯಕ್ರಮ ಜು.12ರಿಂದ ಸೆ.29ರವರೆಗೆ ಹೊಳೆಹೊನ್ನೂರಿನಲ್ಲಿ ನಡೆಯಲಿದೆ. 80 ದಿನಗಳ ಈ ಅದ್ದೂರಿ ಕಾರ್ಯಕ್ರಮದಲ್ಲಿ ನಾಡಿನ ವಿವಿಧೆಡೆಯಿಂದ ಸಹಸ್ರಾರು ಭಕ್ತರು ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರತಿ ದಿನ ಶ್ರೀಗಳಿಂದ ಸಂಸ್ಥಾನ ದೇವರ ಪೂಜೆ, ವಿವಿಧ ವಿದ್ವಾಂಸರಿಂದ ಪ್ರವಚನ, ಹಬ್ಬ ಹರಿದಿನಗಳಂದು ವಿಶೇಷ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಭಜನಾ ಮಂಡಳಿಗಳಿಂದ ಭಜನೆ, ಲೋಕಕಲ್ಯಾಣಾರ್ಥ ಹೋಮ ಹವನಾದಿಗಳು ನಡೆಯಲಿವೆ. ನಿತ್ಯವೂ ನಡೆಯುವ ವಿದ್ವತ್ ಸಭೆಯ ಕೊನೆಯಲ್ಲಿ ಶ್ರೀ ಸತ್ಯಾತ್ಮ ತೀರ್ಥರು ಅನುಗ್ರಹ ಸಂದೇಶ ನೀಡಲಿದ್ದಾರೆ.
ಚಾತುರ್ಮಾಸ್ಯ ಸಂಬಂಧ ಹೆಚ್ಚಿನ ಮಾಹಿತಿಗೆ(ಶ್ರೀನಿವಾಸಾಚಾರ್ಯ ನವರತ್ನ ಮೊ.94810 64750) ಸಂಪರ್ಕಿಸಬಹುದು.
ಈ ಬಾರಿ 80 ದಿನ ಚಾತುರ್ಮಾಸ್ಯ:ಈ ಸಂವತ್ಸರದಲ್ಲಿ ಶ್ರಾವಣ ಮಾಸ ಅಧಿಕವಾಗಿ ಬಂದಿರುವುದರಿಂದ ಚಾತುರ್ಮಾಸ್ಯದ ಅವಧಿಯೂ ವಿಸ್ತಾರವಾಗಿದೆ. ಸಾಮಾನ್ಯವಾಗಿ 52 ದಿನಗಳ ಕಾಲ ನಡೆಯುವ ಚಾತುರ್ಮಾಸ್ಯ ಅಧಿಕ ಮಾಸದ ಕಾರಣದಿಂದ 80 ದಿನಗಳ ಕಾಲ ನಡೆಯಲಿದೆ. ಅಧಿಕ ಮಾಸದಲ್ಲಿ ಮಾಡುವ ಧಾರ್ಮಿಕ ಕೆಲಸಗಳು ವಿಶೇಷ ಪುಣ್ಯ ನೀಡಲಿದೆ ಎಂಬ ನಂಬಿಕೆ ಇದೆ. ಹೀಗಾಗಿ ಅಧಿಕ ಮಾಸದ ಸಂದರ್ಭದಲ್ಲಿ ಶ್ರೀಗಳು ಈ ಭಾಗದಲ್ಲಿ ವ್ರತ ಕೈಗೊಂಡಿರುವುದು ಭಕ್ತರ ಸಂತಸವನ್ನು ಇಮ್ಮಡಿಗೊಳಿಸಿದೆ ಮತ್ತು ಗುರುಗಳ ಸೇವೆಗೆ ವಿಶೇಷ ಅವಕಾಶವೂ ದೊರಕಿದಂತಾಗಿದೆ.
ಶ್ರೀ ಸತ್ಯಧರ್ಮರು 28ನೇ ಯತಿ:ಹೊಳೆಹೊನ್ನೂರಿನಲ್ಲಿ ಉತ್ತರಾದಿ ಮಠದ ಪರಂಪರೆಯ 28ನೇ ಯತಿಗಳಾದ ಶ್ರೀ ಸತ್ಯಧರ್ಮ ತೀರ್ಥ ಶ್ರೀಪಾದಂಗಳವರ ಮೂಲ ಬೃಂದಾವನವಿದೆ. ಸತ್ಯಧರ್ಮರು ಶ್ರೀಮದ್ ಭಾಗವತ, ರಾಮಾಯಣ, ಮಹಾಭಾರತಗಳಿಗೆ ಅತ್ಯದ್ಭುತವಾಗಿ ಅಪರೂಪದ ಶೈಲಿಯಲ್ಲಿ ವ್ಯಾಖ್ಯಾನ ರಚಿಸಿ ವಿದ್ವತ್ ಪ್ರಪಂಚಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಹಾಗೂ ಅನೇಕ ರಸಭರಿತವಾದ ಸುಭಾಷಿತಗಳನ್ನು ರಚಿಸಿ ಜನಸಾಮಾನ್ಯರನ್ನೂ ಅನುಗ್ರಹಿಸಿದ್ದಾರೆ.
ಕಿರಿಯ ವಯಸ್ಸಿನಲ್ಲೇ ಸನ್ಯಾಸ:ಶ್ರೀ ಸತ್ಯಪ್ರಮೋದ ತೀರ್ಥ ಶ್ರೀಪಾದಂಗಳವರಿಂದ ಸನ್ಯಾಸಾಶ್ರಮ ಪಡೆದ ಶ್ರೀ ಸತ್ಯಾತ್ಮ ತೀರ್ಥರು ಉತ್ತರಾದಿ ಮಠದ 41ನೇ ಯತಿಗಳು. ಬಾಲಯತಿಗಳಾಗಿ ಸನ್ಯಾಸ ಸ್ವೀಕರಿಸಿದ ಶ್ರೀಗಳು ತಮ್ಮ ಅದ್ಭುತ ಪ್ರವಚನ, ಅಪರಿಮಿತ ಪಾಂಡಿತ್ಯ, ತಪಸ್ಸು ಮತ್ತು ಆಶ್ರಮ ಧರ್ಮದ ಪಾಲನೆಯ ವಿಷಯದಲ್ಲಿ ದೇಶ, ವಿದೇಶಗಳಲ್ಲಿ ಖ್ಯಾತರಾಗಿದ್ದಾರೆ. ಕೋಟ್ಯಂತರ ಅನುಯಾಯಿಗಳನ್ನೂ ಹೊಂದಿದ್ದಾರೆ. 22ನೇ ವಯಸ್ಸಿನಲ್ಲಿ ಸನ್ಯಾಸ ಪಡೆದು ವೈರಾಗ್ಯ ಶಿಖಾಮಣಿಗಳೆನಿಸಿದ್ದಾರೆ. ನಿತ್ಯ ಪೂಜೆ ಮತ್ತು ಪಾಠ, ಪ್ರವಚನವನ್ನು ಶ್ರೀಮಠದ ಆನೂಚಾನ ಪರಂಪರೆಯಂತೆ ಮುಂದುವರಿಸಿದ್ದಾರೆ. ಶ್ರೀಮನ್ನ್ಯಾಯಸುಧಾ ಪಾಠ ಮತ್ತು ಮಂಗಳ ಮಹೋತ್ಸವಕ್ಕೆ ಹೊಸ ದಿಕ್ಕನ್ನೇ ನೀಡಿದ್ದಾರೆ.