ತುಮಕೂರು: ಬಹಳ ವರ್ಷಗಳ ನಂತರ ಜಯಪ್ರಕಾಶ ಹೆಗ್ಡೆ ಅವರು ಸಲ್ಲಿಸಿರುವ ವರದಿಯನ್ನು ತರಾತುರಿಯಲ್ಲಿ ಸ್ವೀಕಾರ ಮಾಡಿರುವ ಸರ್ಕಾರದ ಕ್ರಮ ಯೋಗ್ಯವಾದುದ್ದಲ್ಲ. ಅವೈಜ್ಞಾನಿಕವಾಗಿರುವ ಈ ವರದಿಯನ್ನು ಸರ್ಕಾರ ಅಂಗೀಕರಿಸಬಾರದು ಎಂದು ಬಾಳೆಹೊನ್ನೂರಿನ ಶ್ರೀರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಜಾತಿಜನಗಣತಿಯನ್ನು ನಾವ್ಯಾರೂ ವಿರೋಧಿಸುವುದಿಲ್ಲ. ಆದರೆ ವೀರಶೈವ ಲಿಂಗಾಯತ ಸಮುದಾಯವಾಗಲಿ, ಒಕ್ಕಲಿಗ ಸಮುದಾಯವನ್ನು ವೈಜ್ಞಾನಿಕವಾಗಿ ಜನಗಣತಿ ಮಾಡದೇ ಕೆಲವೇ ಕೆಲವು ಮಾಹಿತಿಗಳನ್ನು ಆದರಿಸಿ, ಕಾಂತರಾಜ ವರದಿ ಸಿದ್ದಪಡಿಸಿದ್ದ ಬಗ್ಗೆ ವಿರೋಧವಿದೆ. ಈಗಾಗಲೇ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯಾಗಲಿ, ಈ ನಾಡಿನ ಪೀಠ-ಮಠಗಳಾಗಲಿ, ವೈಜ್ಞಾನಿಕವಾಗಿ ಜಾತಿಜನಗಣತಿ ನಡೆಯಲಾರದೇ ಇರುವದಕ್ಕೆ ವಿರೋಧ ವ್ಯಕ್ತಪಡಿಸಿದ್ದರೂ ಸರ್ಕಾರ ವರದಿಯನ್ನು ಸ್ವೀಕರಿಸಿರುವುದು ಸರಿಯಾದ ಕ್ರಮವಲ್ಲ.
ಪ್ರತಿಯೊಂದು ಜಾತಿಜನಗಣತಿಯನ್ನು ಪ್ರಮಾಣಿಕವಾಗಿ, ಸತ್ಯವಾಗಿ ಗುರುತಿಸಿ, ಸಂಖ್ಯೆಗೆ ಅನುಗುಣವಾಗಿ ಸವಲತ್ತುಗಳನ್ನು ಒದಗಿಸಬೇಕೆಂಬ ಉದ್ದೇಶವೇ ಹೊರತು ಬೇರೇನೂ ಇಲ್ಲ. ಮುಂದಿನ ಚುನಾವಣೆ ದೃಷ್ಟಿಯಿಂದ ಅವಸರದಲ್ಲಿ ಈ ವರದಿಯನ್ನು ಸ್ವೀಕಾರ ಮಾಡಿ, ಕಾರ್ಯಗತಗೊಳಿಸಿದರೆ, ಇದರ ಪರಿಣಾಮವನ್ನು ಮುಂದಿನ ದಿನಗಳಲ್ಲಿ ಆಡಳಿತರೂಡ ಪಕ್ಷ ಅನುಭವಿಸಬೇಕಾಗುತ್ತದೆ ಎಂದು ಶ್ರೀರಂಭಾಪುರಿ ಜಗದ್ಗುರುಗಳು ಎಚ್ಚರಿಕೆ ನೀಡಿದ್ದಾರೆ