ಬಾಳೆಹೊನ್ನೂರಿನ ಆದರ್ಶನಗರ ಇಟ್ಟಿಗೆ ಸೀಗೋಡಿನಲ್ಲಿ ಆಯೋಜಿಸಿದ್ದ ಶ್ರೀರಾಮ ದೀಪಾರಾಧನೆಯನ್ನು ವಿದ್ಯಾಗಣಪತಿ ಸಮಿತಿ ಅಧ್ಯಕ್ಷ ರಾಘವೇಂದ್ರ ಮತ್ತಿತರರು ಉದ್ಘಾಟಿಸಿದರು. ಪ್ರಶಾಂತಕುಮಾರ್, ಕಾರ್ತಿಕ್, ಭಾಸ್ಕರ್, ಮಹೇಂದ್ರ, ಉಮೇಶ್, ಅರುಣೇಶ್ ಇತರರಿದ್ದರು.  
ನ್ಯೂಸ್

ಧರ್ಮ ರಕ್ಷಣೆಗಾಗಿ ಶ್ರೀರಾಮ ಮರು ಅವತಾರ

ಬಾಳೆಹೊನ್ನೂರು: ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕೆ ಜೋಡಿಸಿದವರಿಗೆ, ಪ್ರೇರಣೆಯಾದವರಿಗೆ ಭಗವಂತ ಉನ್ನತ ಸ್ಥಾನಮಾನ ಪ್ರಾಪ್ತಿ ಮಾಡಲಿದ್ದಾನೆ ಎಂದು ಮಾರ್ಕಾಂಡೇಶ್ವರ ದೇಗುಲದ ಅರ್ಚಕ ಕೆ.ಎಸ್.ಪ್ರಕಾಶ್ ಭಟ್ ಹೇಳಿದರು.

ಆದರ್ಶನಗರ ಇಟ್ಟಿಗೆ ಸೀಗೋಡು ಗ್ರಾಮದಲ್ಲಿ ವಿದ್ಯಾಗಣಪತಿ ಸೇವಾ ಸಮಿತಿ ಸೋಮವಾರ ಆಯೋಜಿಸಿದ್ದ ಶ್ರೀರಾಮ ದೀಪಾರಾಧನೆ ಹಾಗೂ ಶ್ರೀ ರಾಮೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾವಿರಾರು ವರ್ಷಗಳ ಹಿಂದೆ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠೆಯಾಗಿತ್ತು. ನಂತರ ದಿನಗಳಲ್ಲಿ ಕೆಲವು ತೊಡಕುಗಳಿಂದ ಅಲ್ಲಿ ಮಂದಿರವಿರಲಿಲ್ಲ. ಇದೀಗ ಬಾಲರಾಮನ ವಿಗ್ರಹ ಮರುಪ್ರತಿಷ್ಠೆಯಾಗುವ ಮೂಲಕ ದೇಶಕ್ಕೆ ಸುದಿನವಾಗಿದೆ. ಮಂದಿರ ಉದ್ಘಾಟನೆಯ ದಿನ ರಾಮನ ಆದರ್ಶವನ್ನು ಅಳವಡಿಸಿಕೊಳ್ಳುವ ದಿನವಾಗಿದೆ. ರಾಮ ನಾಮ ಜಪದಿಂದ ನಮ್ಮೆಲ್ಲ ಪಾಪಗಳು ಕಳೆದು ಹೋಗಲಿವೆ ಎಂದರು.
ಶ್ರೀರಾಮ ದೇಶದ ಸಂಪತ್ತು. ದೇಶದ ಎಲ್ಲವೂ ರಾಮನಲ್ಲಿಯೇ ಅಡಗಿದೆ. ಮಂದಿರ ನಿರ್ಮಾಣಕ್ಕೆ ರಾಮನೇ ಸ್ವತಃ ಅನುಗ್ರಹ ನೀಡಿದ್ದು, ನಾವು ಪ್ರೇರಣೆಯಾಗಿದ್ದೇವೆ ಅಷ್ಟೆ. ರಾಮನಾಮ ಸ್ಮರಣೆಯಿಂದ ಮನಸ್ಸಿಗೆ ನೆಮ್ಮದಿ ದೊರಕಲು ಸಾಧ್ಯವಿದ್ದು, ಮನುಷ್ಯನಿಗೆ ಉತ್ತಮ ಸಂಸ್ಕಾರ ನೀಡಿದರೆ ಮಾತ್ರ ಮನಸ್ಸು ಭಗವಂತನೆಡೆಗೆ ಪ್ರೇರಣೆಯಾಗಲಿದೆ ಎಂದು ತಿಳಿಸಿದರು.
ದೇಶದಲ್ಲಿ ಅಧರ್ಮ ತಾಂಡವವಾಡುತ್ತಿರುವ ಸಂದರ್ಭ ಭವ್ಯ ಮಂದಿರ ನಿರ್ಮಾಣಗೊಂಡಿದೆ. ಈ ಮೂಲಕ ಧರ್ಮ ರಕ್ಷಣೆಗೆ ಶ್ರೀರಾಮ ಪುನಃ ಅವತರಿಸಿ ಭೂಮಿಗೆ ಬಂದಿದ್ದಾನೆ. ಎಲ್ಲರೂ ಒಗ್ಗೂಡಿ ಅಂಧಕಾರ ಅಳಿಸುವ ರಾಮಜ್ಯೋತಿಯನ್ನು ಪ್ರಜ್ವಲನೆಗೊಳಿಸಿದ್ದು, ಸದಾ ನಮ್ಮೆಲ್ಲರ ಮನೆ, ಮನದಲ್ಲಿ ಇದು ಬೆಳಗುತ್ತಿರಲಿ ಎಂದು ಆಶಿಸಿದರು.
ವಿದ್ಯಾಗಣಪತಿ ಸೇವಾ ಸಮಿತಿ ಅಧ್ಯಕ್ಷ ರಾಘವೇಂದ್ರ, ಪದಾಧಿಕಾರಿಗಳಾದ ಕೆ.ಪ್ರಶಾಂತಕುಮಾರ್, ಕಾರ್ತಿಕ್, ಶಿವಕುಮಾರ್, ನಾಗಪ್ಪನಾಯ್ಕ, ಮಹೇಶ್, ಸಂತೋಷ್‌ಕುಮಾರ್, ಜಗದೀಶ್, ಚಂದ್ರಣ್ಣ, ವಿಹಿಂಪ ವಿಭಾಗ ಸಹ ಕಾರ್ಯದರ್ಶಿ ಆರ್.ಡಿ.ಮಹೇಂದ್ರ, ಪ್ರಮುಖರಾದ ಭಾಸ್ಕರ್ ವೆನಿಲ್ಲಾ, ಟಿ.ಎಂ.ಉಮೇಶ್ ಕಲ್ಮಕ್ಕಿ, ಎಂ.ಎಸ್.ಅರುಣೇಶ್, ಕೆ.ಟಿ.ವೆಂಕಟೇಶ್, ಪ್ರಭಾಕರ್ ಪ್ರಣಸ್ವಿ, ಕೆ.ಟಿ.ಗೋವಿಂದೇಗೌಡ ಇತರರಿದ್ದರು.