ಸಾಲಿಗ್ರಾಮ: ತಾಲೂಕಿನ ದೊಡ್ಡ ಹನಸೋಗೆ ಗ್ರಾಮದಲ್ಲಿ ಶ್ರೀ ಪಂಚಮ ಶನೈಶ್ಚರ ಸ್ವಾಮಿ ಪೂಜಾ ಕಾರ್ಯಕ್ರಮ, ಅಡ್ಡಪಲ್ಲಕ್ಕಿ ಉತ್ಸವ, ಸ್ವಾಮಿ ಮೆರವಣಿಗೆ ಸಹಸ್ರಾರು ಭಕ್ತರ ನಡುವೆ ವಿಜೃಂಭಣೆಯಿಂದ ಭಾನುವಾರ ಜರುಗಿತು.
ಗ್ರಾಮದ ಶ್ರೀ ಪಂಚಮ ಶನೈಶ್ಚರ ದೇವಸ್ಥಾನವನ್ನು ತಳಿರು ತೋರಣಗಳಿಂದ ಸಿಂಗಾರ ಮಾಡಲಾಗಿತ್ತು. ದೇವಾಲಯದಲ್ಲಿ ಹೋಮ, ಹವನ, ಅಭಿಷೇಕಗಳೊಂದಿಗೆ ವಿಶೇಷ ಪೂಜೆ ಸಲ್ಲಿಸಿ ಮಹಾಮಂಗಳಾರತಿಯನ್ನು ದೇವಸ್ಥಾನದ ಅರ್ಚಕರಾದ ಮಾದನಾಯಕ, ಸಹಾಯಕ ಅರ್ಚಕ ಸಂಪತ್ ಅವರ ನೇತೃತ್ವದಲ್ಲಿ ಮಾಡಲಾಯಿತು. ದೇವತಾ ಕಾರ್ಯದಲ್ಲಿ ಗ್ರಾಮ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ದೇವರಿಗೆ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿ ಪೂಜೆ ಸಲ್ಲಿಸಿದರು.
ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀ ಪಂಚಮ ಶನೈಶ್ಚರ ದೇವರ ಮೂರ್ತಿಯನ್ನು ಅಡ್ಡಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಮಂಗಳವಾದ್ಯ ಹಾಗೂ ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ಪೂಜಾ ಕಾರ್ಯಕ್ರಮದ ಅಂಗವಾಗಿ ಅನ್ನ ಸಂತರ್ಪಣೆ ಮಾಡಲಾಯಿತು. ಶ್ರೀ ಪಂಚಮ ಶನೈಶ್ಚರಸ್ವಾಮಿ ಯುವಕರ ಬಳಗ, ಮಹಿಳಾ ಸಂಘಟನೆಗಳು, ಜನಪ್ರತಿನಿಧಿಗಳು, ಮುಖಂಡರು ಪಾಲ್ಗೊಂಡಿದ್ದರು.
ಸಾಲಿಗ್ರಾಮ ತಾಲೂಕಿನ ದೊಡ್ಡ ಹನಸೋಗೆ ಗ್ರಾಮದಲ್ಲಿ ಶ್ರೀ ಪಂಚಮ ಶನೈಶ್ಚರಸ್ವಾಮಿ ಪೂಜಾ ಮಹೋತ್ಸವದ ಪ್ರಯುಕ್ತ ಗ್ರಾಮದಲ್ಲಿ ಕಲಾತಂಡಗಳ ಮೆರವಣಿಗೆ ನಡೆಯಿತು.