ನ್ಯೂಸ್

ಶ್ರೀ ಮರುಡೇಶ್ವರಸ್ವಾಮಿ ಅದ್ದೂರಿ ರಥೋತ್ಸವ

ತಿ.ನರಸೀಪುರ: ತಾಲೂಕಿನ ಮಾದಾಪುರ ಗ್ರಾಮದಲ್ಲಿ ಶ್ರೀ ಮರುಡೇಶ್ವರಸ್ವಾಮಿ ರಥೋತ್ಸವ ಬುಧವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.


ಗ್ರಾಮದ ಮರುಡೇಶ್ವರಸ್ವಾಮಿ, ಸುಬ್ರಹ್ಮಣ್ಯ ಹಾಗೂ ಗಣೇಶ ರಥೋತ್ಸವ ಭಕ್ತರ ಜೈಕಾರದೊಂದಿಗೆ ಅದ್ದೂರಿಯಾಗಿ ನೆರವೇರಿತು.
ಎರಡು ದಿನಗಳಿಂದ ಗ್ರಾಮದಲ್ಲಿ ವಿವಿಧ ಪೂಜಾ ಕೈಂಕರ್ಯ ಹಾಗೂ ಕೊಂಡೋತ್ಸವ ಜರುಗಿತ್ತು. ಬುಧವಾರ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ಪೂಜೆ, ಹೋಮ, ವಿವಿಧ ಅಭಿಷೇಕ ಹಾಗೂ ವಿವಿಧ ಪೂಜೆಗಳು ನೆರವೇರಿದವು. ನಂತರ ಗಣೇಶ, ಸುಬ್ರಹ್ಮಣ್ಯ ಹಾಗೂ ಮರುಡೇಶ್ವರಸ್ವಾಮಿ ಉತ್ಸವ ಮೂರ್ತಿಗಳನ್ನು ಹೂವಿನ ಮಂಟಪದಲ್ಲಿ ಕೂರಿಸಿ ದೇವಸ್ಥಾನದ ಸುತ್ತ ಮೆರವಣಿಗೆ ನಡೆಸಿ ನಂತರ ಅಲಂಕೃತ ತೇರಿನ ಮೇಲೆ ಕೂರಿಸಿ ಮಧ್ಯಾಹ್ನ 1.15ಕ್ಕೆ ತಾಲೂಕು ದಂಡಾಧಿಕಾರಿ ಸುರೇಶ್ ಆಚಾರಿ ರಥೋತ್ಸವಕ್ಕೆ ಚಾಲನೆ ನೀಡಿದರು.


ನಂತರ ದೇವಸ್ಥಾನದ ಮುಂಭಾಗದಿಂದ ಹೊರಟ ರಥೋತ್ಸವ ವೀರಗಾಸೆ ಕುಣಿತ, ವಾದ್ಯಮೇಳಗಳೊಂದಿಗೆ ದೇವಸ್ಥಾನದ ಸುತ್ತ ಪ್ರದಕ್ಷಿಣೆ ಬಂದು ನಂತರ ಸ್ವಸ್ಥಾನ ತಲುಪಿತು.
ರಥೋತ್ಸವವನ್ನು ಕಣ್ತುಂಬಿಕೊಳ್ಳಲು ಸುತ್ತಮುತ್ತ ಗ್ರಾಮದ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದರಲ್ಲದೆ, ರಥಕ್ಕೆ ಹಣ್ಣು-ದವನ ಎಸೆದು ಇಷ್ಟಾರ್ಥ ಕರುಣಿಸುವಂತೆ ಪ್ರಾರ್ಥಿಸಿದರು.


ನಂತರ ನೆರೆದಿದ್ದ ಭಕ್ತರಿಗೆ ದೇವಸ್ಥಾನದ ವತಿಯಿಂದ ಪ್ರಸಾದ ವಿನಿಯೋಗ ನಡೆಯಿತು. ಹರಕೆ ಹೊತ್ತ ಭಕ್ತರು ಮಜ್ಜಿಗೆ, ಪಾನಕ ಹಾಗೂ ಪ್ರಸಾದ ವಿತರಿಸಿದರು.
ತಲಕಾಡು ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ತಿರುಮಲೇಶ್ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಮಾಡಲಾಗಿತ್ತು .