ಚೌಳಹಿರಿಯೂರಿನಲ್ಲಿ ಉದ್ಘಾಟನೆಗೆ ಸಿದ್ದವಾಗಿರುವ ಮಹೇಶ್ವರ ಸ್ವಾಮಿ ದೇವಾಲಯ. 
ನ್ಯೂಸ್

8ರಿಂದ ಶ್ರೀ ಮಹೇಶ್ವರ ಸ್ವಾಮಿ ಜಾತ್ರೋತ್ಸವ

ಚೌಳಹಿರಿಯೂರು (ಕಡೂರು): ಕಡೂರು ತಾಲೂಕಿನ ಚೌಳಹಿರಿಯೂರಿನಲ್ಲಿ ಜ.8ರಿಂದ 10ರವರೆಗೆ ಶ್ರೀ ಮಹೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ, ನೂತನ ಗದ್ದುಗೆ ಮತ್ತು ದೇವಾಲಯ ಪ್ರವೇಶೋತ್ಸವದ ಅಂಗವಾಗಿ ಸರ್ವ ಶರಣ ಸಮ್ಮೇಳನ ಆಯೋಜಿಸಲಾಗಿದೆ ಎಂದು ಜಾತ್ರಾ ಸಮಿತಿ ಕಾರ್ಯದರ್ಶಿ ಕೆ.ಎನ್.ಮುದ್ದಪ್ಪ ತಿಳಿಸಿದ್ದಾರೆ.

8ರಂದು ಬೆಳಗ್ಗೆ 4 ಗಂಟೆಗೆ ಬ್ರಾಹ್ಮೀ ಲಗ್ನದಲ್ಲಿ ಗಂಗಾ ಪ್ರವೇಶ, ಗಣಪತಿ ಪೂಜೆ, ಪುಣ್ಯಾಹ, ವಾಸ್ತು, ನವಗ್ರಹ ಪೂಜೆ, ಮಹೇಶ್ವರಸ್ವಾಮಿ ಮಂಟಪಕ್ಕೆ ಈಶ್ವರಲಿಂಗು ಹಾಗೂ ಬಸವಣ್ಣನ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗುವುದು. ನಂತರ ಧ್ವಜಾರೋಹಣ, ಹುಣಸಘಟ್ಟ ಹಾಲುಸ್ವಾಮಿ ಮಠದ ಶ್ರೀ ಗುರುಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳಿಂದ ನೂತನ ಮಂಟಪ ಮತ್ತು ಗದ್ದುಗೆಗೆ ಅಭಿಷೇಕ, ಬಿಲ್ವಾರ್ಚನೆ ನೆರವೇರಲಿದೆ. ಬೆಳಗ್ಗೆ 11ಕ್ಕೆ ಸರ್ವಶರಣ ಸಮ್ಮೇಳನದಲ್ಲಿ ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಶ್ರೀ ಗುರುಮೂರ್ತಿ ಶಿವಾಚಾರ್ಯರು, ಬೀರೂರಿನ ಶ್ರೀ ರುದ್ರಮುನಿ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು. ಮಾಜಿ ಶಾಸಕರಾದ ಬೆಳ್ಳಿಪ್ರಕಾಶ್, ತರೀಕೆರೆ ಸುರೇಶ್ ಭಾಗವಹಿಸುವರು. ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ವಿರೂಪಾಕ್ಷಪ್ಪ, ವಿಶ್ವಸ್ಥ ಮಂಡಳಿ ಅಧ್ಯಕ್ಷ ಬಿ.ಎಸ್.ಯೋಗೀಶಪ್ಪ, ಜಾತ್ರಾ ಸಮಿತಿ ಅಧ್ಯಕ್ಷ ಶೇಖರಪ್ಪ ಭಾಗವಹಿಸುವರು, ಚಿಕ್ಕಮಗಳೂರು ಸಾಹಿತಿ ತಿಪ್ಪೇರುದ್ರಪ್ಪ ಉಪನ್ಯಾಸ ನೀಡುವರು ಎಂದು ಹೇಳಿಕೆ ನೀಡಿದ್ದಾರೆ.
ರಾತ್ರಿ 8ಕ್ಕೆ ಶ್ರೀ ಸೋಮೇಶ್ವರಸ್ವಾಮಿ ಮತ್ತು ಕುರುಬರಹಳ್ಳಿ ಬಸವೇಶ್ವರ ದೇವರ ನೇತೃತ್ವದಲ್ಲಿ ಶ್ರೀ ಕಲ್ಲತ್ತಿ ವೀರೇಶ್ವರ ಸ್ವಾಮಿ ದೇವಾಲಯದಿಂದ ಗುಗ್ಗಳ ಮಹೋತ್ಸವ ಹೊರಡಲಿದೆ. ನಂತರ ಎರಡೂ ದೇವರುಗಳು ಶ್ರೀ ಮಹೆಶ್ವರ ಸ್ವಾಮಿ ತೋಟಕ್ಕೆ ತೆರಳಲಿವೆ. 9ರಂದು ಬೆಳಗಿನ ಜಾವ 4.30ರಿಂದ ಶ್ರೀ ಶಾಂತಮರಿದೇವರಿಂದ ಶ್ರೀ ಮಹೇಶ್ವರಸ್ವಾಮಿ ಆಗಮನ, ಮಧ್ಯಾಹ್ನ 3 ಗಂಟೆಗೆ ವೀರಗಾಸೆ ನೃತ್ಯದೊಂದಿಗೆ ರಸ್ತು ಮಹೋತ್ಸವ ಜರುಗಲಿದೆ. 10ರಂದು ಮಧ್ಯಾಹ್ನ 3 ಗಂಟೆಗೆ ಶ್ರೀ ಸೋಮೇಶ್ವರ ಸ್ವಾಮಿ ಮತ್ತು ಬಸವೇಶ್ವರ ಸ್ವಾಮಿ ಅಡ್ಡಪಲ್ಲಕ್ಕಿ ಉತ್ಸವ, ರಾತ್ರಿ 8ಕ್ಕೆ ಅನ್ನಸಂತರ್ಪಣೆ ನೆರವೇರಲಿದೆ ಎಂದು ತಿಳಿಸಿದ್ದಾರೆ.