ನ್ಯೂಸ್

ಶ್ರೀಲಂಕಾ ಡಾನ್ ಅಂಗೋಡಾ ಲೊಕ್ಕ ಅನುಮಾನಾಸ್ಪದ ಸಾವು

ಚೆನ್ನೈ: ನಕಲಿ ಗುರುತಿನಡಿ ಕಳೆದ ಎರಡು ವರ್ಷಗಳಿಂದ ಭಾರತದಲ್ಲಿ ತಲೆಮರೆಸಿಕೊಂಡಿದ್ದ ಶ್ರೀಲಂಕಾದ ಡಾನ್ ಅಂಗೋಡಾ ಲೊಕ್ಕಾ ನಿಗೂಢವಾಗಿ ಸಾವನ್ನಪ್ಪಿದ್ದಾನೆ ಎಂದು ತಮಿಳುನಾಡು ಪೊಲೀಸರು ಖಚಿತಪಡಿಸಿದ್ದಾರೆ. ಜುಲೈ ಆರಂಭದಲ್ಲಿ ನಡೆದ ಈ ದರೋಡೆಕೋರನ ಸಾವಿನ ಕುರಿತು ಅಪರಾಧ ತನಿಖಾ ಇಲಾಖೆಯ ಅಪರಾಧ ವಿಭಾಗ (ಸಿಬಿಸಿಐಡಿ) ತನಿಖೆ ನಡೆಸಲಿದೆ.
ತಮಿಳುನಾಡು ಪೊಲೀಸ್ ಮಹಾನಿರ್ದೇಶಕ ಜೆ.ಕೆ. ತ್ರಿಪಾಠಿ ಪ್ರಕರಣವನ್ನು ಕೊಯಮತ್ತೂರು ಪೊಲೀಸರಿಂದ ಸಿಬಿಸಿಐಡಿಗೆ ವರ್ಗಾಯಿಸಿದ್ದಾರೆ. 

ಇಬ್ಬರು ಪುರುಷರು ಮತ್ತು ಮಹಿಳೆಯನ್ನು ಬಂಧಿಸಲಾಗಿದೆ. ಸಿಬಿಸಿಐಡಿ ಅಧಿಕಾರಿಯೊಬ್ಬರ ಪ್ರಕಾರ, ಮೊದಲೆರಡು ಎಫ್‌ಐಆರ್ ಗಳನ್ನು ಈಗಾಗಲೇ ನೋಂದಾಯಿಸಲಾಗಿದೆ. (ಒಂದು - ಅನುಮಾನಾಸ್ಪದ ಸಾವು ಮತ್ತು ಇನ್ನೊಂದು ಆಧಾರ್ ಕಾರ್ಡ್ ಪಡೆಯಲು ಸುಳ್ಳು ದಾಖಲೆಗಳನ್ನು ಸಲ್ಲಿಸಿದ್ದಕ್ಕೆ).
ಲೋಕ್ಕಾ 2017 ರಲ್ಲಿ ತಮಿಳುನಾಡಿಗೆ ಬಂದು 2018 ರಿಂದ ಪ್ರದೀಪ್ ಸಿಂಗ್ ಹೆಸರಿನಲ್ಲಿ ಕೊಯಮತ್ತೂರಿನಲ್ಲಿ ವಾಸಿಸುತ್ತಿದ್ದು, ಅಲ್ಲಿನ ಜಿಮ್‌ಗಳಿಗೆ ಪ್ರೋಟೀನ್ ಪೂರಕಗಳನ್ನು ಪೂರೈಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. 
ಮಧುರೈ ಮೂಲದ ವಕೀಲೆ ಟಿ.ಶಿವಕಾಮಿ ಸುಂದರಿ ಮತ್ತು ಆಕೆಯ ತಿರುಪುರ ಸ್ನೇಹಿತ ಎಸ್.ಧ್ಯಾನೇಶ್ವರನ್ ಅವರ ಸಹಾಯದಿಂದ ಲೊಕ್ಕ ಕೊಯಮತ್ತೂರಿನಲ್ಲಿ ಬಾಡಿಗೆಗೆ ಅಪಾರ್ಟ್​​ಮೆಂಟ್ ತೆಗೆದುಕೊಂಡಿದ್ದ. 


ಆತ ಶ್ರೀಲಂಕಾದ ಮಹಿಳೆ ಅಮಾನಿ ಧಂಜಿಯ ಪತಿಯನ್ನು ಬಹಳ ಹಿಂದೆಯೇ ಕೊಂದಿದ್ದು, ಈಗ ಆಕೆಯೊಂದಿಗೆ ವಾಸಿಸುತ್ತಿದ್ದ, ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿಂದೆ ಸುಂದರಿ ಮಧುರೈನಲ್ಲಿರುವ ತಮ್ಮ ನಿವಾಸದಲ್ಲಿ ಕೆಲವು ತಿಂಗಳು ಲೊಕ್ಕಾಗೆ ಆಶ್ರಯ ನೀಡಿದ್ದರು.
ಲೊಕ್ಕ ಜುಲೈ ಆರಂಭದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದಾನೆ. ಆತನ ಸಾವಿನ ನಂತರ ಧಂಜಿಯ ಕೋರಿಕೆಯ ಮೇರೆಗೆ ಸುಂದರಿ ಕೊಯಮತ್ತೂರಿಗೆ ತೆರಳಿದ್ದು, ದರೋಡೆಕೋರ ತನ್ನ ಸೋದರಸಂಬಂಧಿ ಹಾಗೂ ಆತ ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾನೆ ಎಂದು ನಗರ ಪೊಲೀಸರಿಗೆ ತಿಳಿಸಿದ್ದಾಳೆ. ಮರಣೋತ್ತರ ಪರೀಕ್ಷೆಯ ನಂತರ ಸುಂದರಿ ಲೋಕ್ಕಾ ನ ಶವವನ್ನು ಮಧುರೈಗೆ ತೆಗೆದುಕೊಂಡು ಹೋಗಿ ಅಲ್ಲಿ ಅಂತ್ಯಕ್ರಿಯೆ ನಡೆಸಿದ್ದಾರೆ. ಪೊಲೀಸರು ಇದುವರೆಗೆ ಸುಂದರಿ, ಧಂಜಿ ಮತ್ತು ಧ್ಯಾನೇಶ್ವರನ್ ಅವರನ್ನು ಬಂಧಿಸಿದ್ದಾರೆ.