ಕುಟ್ಟದಲ್ಲಿ ಶ್ರೀ ಕೃಷ್ಣ ದೇವಸ್ಥಾನದಲ್ಲಿ ನಡೆದ ಶ್ರೀಕೃಷ್ಣ ಜಯಂತಿ ಉತ್ಸವವನ್ನು ಗಣ್ಯರು ಉದ್ಘಾಟಿಸಿದರು.
- ಶ್ರದ್ಧಾಭಕ್ತಿಯಿಂದ ನಡೆದ ಶ್ರೀಕೃಷ್ಣ ಜಯಂತಿ ಉತ್ಸವ
ಪೊನ್ನಂಪೇಟೆ: ಶ್ರೀ ಕೃಷ್ಣ ದೇವಸ್ಥಾನ ಟ್ರಸ್ಟ್ ಹಾಗೂ ಶ್ರೀ ಕೃಷ್ಣ ಜಯಂತಿ ಉತ್ಸವ ಸಮಿತಿ, ಕುಟ್ಟ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀಕೃಷ್ಣ ಜಯಂತಿ ಉತ್ಸವವನ್ನು ಶುಕ್ರವಾರದಂದು ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.
ಉತ್ಸವದ ಅಂಗವಾಗಿ ೨ರಿಂದ ೧೫ ವರ್ಷದೊಳಗಿನ ಮಕ್ಕಳು ಶ್ರೀಕೃಷ್ಣ ಹಾಗೂ ರಾಧೆಯ ವೇಷಧರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಬೆಳಿಗ್ಗೆ ೧೦ ಗಂಟೆಗೆ ಶ್ರೀಕೃಷ್ಣ ದೇವಸ್ಥಾನದ ಆವರಣದಲ್ಲಿ ವೇಷಧಾರಿ ಮಕ್ಕಳ ಆಯ್ಕೆ ನಡೆಯಿತು. ಬಳಿಕ ಬೆಳಿಗ್ಗೆ ೧೧ ಗಂಟೆಗೆ ಶ್ರೀಕೃಷ್ಣ ದೇವಸ್ಥಾನದಿಂದ ಕುಟ್ಟ ಬಸ್ ನಿಲ್ದಾಣದವರೆಗೆ ಮಕ್ಕಳ ಮೆರವಣಿಗೆ ನಡೆಯಿತು. ನಂತರ ದೇವಸ್ಥಾನದ ಮೆಟ್ಟಿಲುಗಳ ಮೂಲಕ ಮೆರವಣಿಗೆ ದೇವಸ್ಥಾನಕ್ಕೆ ಮರಳಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ ದೇವರ ದರ್ಶನ ಪಡೆದು, ಪೂಜೆ ಸಲ್ಲಿಸಿದರು. ನಂತರ ಮಾತನಾಡಿದ ಅವರು, ಐತಿಹಾಸಿಕ ಹಿನ್ನೆಲೆ ಇರುವ ಪುಣ್ಯ ಸ್ಥಳದಲ್ಲಿ ಶ್ರೀಕೃಷ್ಣ ದೇವಸ್ಥಾನ ಟ್ರಸ್ಟ್ ನವರು ದೇವಸ್ಥಾನದ ಪುನಶ್ಚೇತನ ಕಾರ್ಯ ನಡೆಸಿ, ಭಕ್ತಿಪೂರ್ವಕ ವಾತಾವರಣವನ್ನು ನಿರ್ಮಾಣ ಮಾಡಿರುವುದು ಹೆಮ್ಮೆಯ ವಿಷಯ. ದೇವಸ್ಥಾನದ ಮತ್ತಷ್ಟು ಅಭಿವೃದ್ಧಿಗೆ ಈ ಹಿಂದೆಯೂ ಸಹಕಾರ ನೀಡಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಸಹಕಾರ ನೀಡಲಾಗುವುದು. ಕೃಷ್ಣ ಜನ್ಮಾಷ್ಟಮಿಯ ಈ ಶುಭ ಸಂದರ್ಭದಲ್ಲಿ ಭಗವಂತ ರಾಜ್ಯದ ಜನತೆಗೆ ನೆಮ್ಮದಿ, ಆರೋಗ್ಯ, ಭಾಗ್ಯ, ಆಯುಷ್ಯವನ್ನು ಕರುಣಿಸಲಿ ಎಂದು ಶುಭ ಹಾರೈಸಿದರು.
ದೇವಸ್ಥಾನ ಸಮಿತಿಯ ಅಧ್ಯಕ್ಷ ತಿತೀರಾ ನರೇನ್ ಬಾಲಕೃಷ್ಣ ಮಾತನಾಡಿ, ಕುಟ್ಟ ಗಡಿಭಾಗವಾದ ಕಾರಣ ಹಿಂದೂಗಳಿಗೆ ದೇವಸ್ಥಾನದ ಅವಶ್ಯಕತೆ ಇತ್ತು ಹಾಗೇ ದೇವಾಲಯದ ಪವಾಡವೆಂದರೆ ಪ್ರತಿ ದಿನ ಗರುಡ ದೇವಾಲಯದ ಸುತ್ತ ಮೂರು ಭಾರಿ ಪ್ರದಕ್ಷಿಣೆ ಹಾಕುವುದು ಬಹಳ ವಿಶಿಷ್ಟ ಅದಕ್ಕಾಗಿ ಗರುಡಾಗಿರಿ ಕೃಷ್ಣ ದೇವಸ್ಥಾನ ಎಂಬಾ ಹೆಸರು ಬಂದಿದೆ ಎಂದರು.
ಕಾರ್ಯಕ್ರಮದಲ್ಲಿ ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಚೋಡುಮಾಡ ಶರೀನ್ ಸುಬ್ಬಯ್ಯ ಮಾತನಾಡಿ, ಕುಟ್ಟದ ಗರುಡಗಿರಿ ಶ್ರೀ ಕೃಷ್ಣ ದೇವಸ್ಥಾನದಲ್ಲಿ ಇಂದಿನ ಮೂರನೇ ವರ್ಷದ ವಾರ್ಷಿಕೋತ್ಸವ ವಿಶೇಷವಾಗಿದೆ. ಇಲ್ಲಿ ನೂತನವಾಗಿ ಉತ್ಸವ ಸಮಿತಿಯನ್ನು ರಚಿಸಿದ್ದು ಅದರ ವತಿಯಿಂದ ಮಕ್ಕಳಿಗೆ ಚದ್ಮ ವೇಷ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಸಮಿತಿಯವರು ಗ್ರಾಮಸ್ಥರ ಮನೆ ಮನೆಗೆ ತೆರಳಿ ಉತ್ಸವಕ್ಕೆ ಆಮಂತ್ರಿಸಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇಣಿಗೆ ನೀಡಿ ಸಹಕರಿಸಿದ್ದಾರೆ ಎಂದರು. ಕಾರ್ಯಕ್ರಮವನ್ನು ಭಾರತದಾದ್ಯಂತ ವೀಕ್ಷಿಸಲು ಸಾಮಾಜಿಕ ಜಾಲತಾಣದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಕುಟ್ಟ ಭಾಗದಲ್ಲಿ ಹಿಂದುಗಳು ಒಟ್ಟಾಗಿ ಸೇರಲು ಈ ಹಿಂದೆ ವ್ಯವಸ್ಥೆ ಇರಲಿಲ್ಲ. ಶ್ರೀ ಕೃಷ್ಣ ದೇವಸ್ಥಾನ ನಿರ್ಮಿಸಿದ ಮೇಲೆ ಆ ಕೊರಗು ನೀಗಿದೆ ಎಂದು ಹೇಳಲು ಸಂತೋಷವಾಗಿದೆ ಎಂದು ಹೇಳಿದರು. ಇವತ್ತಿನ ವಿಶೇಷ ಪೂಜೆಗಳಾದ ಗಣಪತಿ ಹೋಮ ಸತ್ಯನಾರಾಯಣ ಪೂಜೆ ರಂಗ ಪೂಜೆಯ ವ್ಯವಸ್ಥೆ ಮಾಡಲಾಗಿದೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಉತ್ಸವ ಸಮಿತಿ ಸದಸ್ಯ ಶಿಬು ಮಾತನಾಡಿ, ಸಮಿತಿ ವತಿಯಿಂದ ೧೩ ವರ್ಷಗಳಿಂದ ಶ್ರೀ ಕೃಷ್ಣ ಜಯಂತಿ ಉತ್ಸವವನ್ನು ಕುಟ್ಟ ಭಾಗದಲ್ಲಿ ಆಚರಿಸಿಕೊಂಡು ಬರುತ್ತಿದ್ದೇವೆ. ಸಮಿತಿಯ ಸದಸ್ಯರು ಹಾಗೂ ಗ್ರಾಮಸ್ಥರು ತಮ್ಮ ಮನ ಧನವನ್ನು ನೀಡುತ್ತಿದ್ದು ಉತ್ಸವವನ್ನು ವಿಜೃಂಭಣೆಯಿಂದ ನಡೆಸಲು ಸಹಕಾರ ನೀಡುತ್ತಿದ್ದಾರೆ ಎಂದರು.
ಸಮಿತಿಯ ಉಪಾಧ್ಯಕ್ಷ ಮಚ್ಚಮಾಡ ಸುಬ್ರಮಣಿ ಮಾತನಾಡಿ, ಮೂರು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಉತ್ಸವಕ್ಕೆ ವರ್ಷದಿಂದ ವರ್ಷಕ್ಕೆ ಭಕ್ತಾದಿಗಳ ಸಂಖ್ಯೆ ಹೆಚ್ಚುತ್ತಾ ಬರುತ್ತಿದೆ. ಸ್ಥಳೀಯ ಭಕ್ತರಲ್ಲದೆ ಅಂತಾರಾಜ್ಯದಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಪ್ರಕೃತಿಯ ನಡುವೆ ಅತಿ ಎತ್ತರದಲ್ಲಿ ವಿಶಿಷ್ಟವಾಗಿ ಈ ದೇವಸ್ಥಾನವನ್ನು ನಿರ್ಮಿಸಿದ್ದು ಇಲ್ಲಿ ದೇವಸ್ಥಾನದ ಟ್ರಸ್ಟಿಗಳ ಮತ್ತು ದಾನಿಗಳ ಪರಿಶ್ರಮ ಎದ್ದು ಕಾಣುತ್ತಿದೆ ಎಂದು ಹೇಳಿದರು.
ಶ್ರೀಕೃಷ್ಣ ಹಾಗೂ ರಾಧೆಯ ವೇಷಧಾರಿ ಮಕ್ಕಳಿಗೆ ಪ್ರತ್ಯೇಕ ಬಹುಮಾನಗಳನ್ನು ನೀಡಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲ ವೇಷಧಾರಿ ಮಕ್ಕಳಿಗೂ ಸಮಾಧಾನಕರ ಬಹುಮಾನಗಳನ್ನು ವಿತರಿಸಲಾಯಿತು.
ಈ ಸಂದರ್ಭ ಶ್ರೀ ಕೃಷ್ಣ ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷ ವಿ.ಟಿ.ಗೋಪಾಲ್, ಉಪಾಧ್ಯಕ್ಷ ತಿತೀರಾ ಪ್ರತೀಶ್ ಗಣಪತಿ, ಉಪಾಧ್ಯಕ್ಷ ಮಚ್ಚಮಾಡ ಸುಬ್ರಮಣಿ, ಪದಾಧಿಕಾರಿಗಳು ಅಲಂಕೃತ ಮಂಟಪದ ಸದಸ್ಯ ಸತೀಶ್ ಹಾಗೂ ತಂಡ, ಉತ್ಸವ ಸಮಿತಿ ಸದಸ್ಯರು, ಅರ್ಚಕರು ಹಾಗೂ ಭಕ್ತರು ಉಪಸಿತರಿದ್ದರು.