ನ್ಯೂಸ್

ಸಮಾಜ ಪರಿವರ್ತನೆಯ ಮಹಾಪ್ರವರ್ತಕ ಶ್ರೀಜಗದ್ಗುರು ದಾರುಕಾಚಾರ್ಯರು

| ನಿರಂಜನ ದೇವರಮನೆ ಚಿತ್ರದುರ್ಗ

ಪಂಚಪೀಠಗಳಲ್ಲಿ ಒಂದಾದ ಶ್ರೀಮದ್ ಉಜ್ಜಯಿನಿ ಸದ್ಧರ್ಮ ಪೀಠದ ಶ್ರೀ ಜಗದ್ಗುರು ದಾರುಕಾಚಾರ್ಯರು ಮಧ್ಯಪ್ರದೇಶದ ಕ್ಷಿಪ್ರಾ ನದಿಯ ದಡದಲ್ಲಿರುವ ಮಹಾಕಾಲ ಉಜ್ಜಯಿನಿಯ ವಟಕ್ಷೇತ್ರದ ಪ್ರಸಿದ್ದವಾದ ಶ್ರೀ ಸಿದ್ದೇಶ್ವರ ಜ್ಯೋತಿರ್ಲಿಂಗ ಮುಖದಿಂದ ವೈಶಾಖ ಶುದ್ಧ ಪಂಚಮಿಯಂದು ದಿವ್ಯ ದೇಹಿಯಾಗಿ ಅವತರಿಸಿದವರು. ಅವರು ಶಿವಾದ್ವೈತ ಸಿದ್ಧಾಂತವನ್ನು ನೆಲೆಗೊಳಿಸಿ ಆತ್ಮ ಕಲ್ಯಾಣದೊಂದಿಗೆ ಲೋಕ ಕಲ್ಯಾಣ ಸಾಧಿಸುವ ಪರಿಯನ್ನು ತಿಳಿಸಿಕೊಟ್ಟವರು. ಅತ್ಯಂತ ಹಿಂದುಳಿದ ಜಾತಿಯವನಾದ ದಧೀಚಿಗೆ ಶಿವ ಸಿದ್ದಾಂತವನ್ನು ಉಪದೇಶಿಸಿ ವೀರಶೈವದ ಮಹತ್ವ, ಅಷ್ಟಾವರಣ, ಪಂಚಾಚಾರ ಹಾಗೂ ಷಟ್​ಸ್ಥಲ ಸಾರವನ್ನು ಭೋದಿಸಿದವರು.

ಉಜ್ಜಯಿನಿ ಪ್ರದೇಶದ ಅಂದಿನ ರಾಜ-ರಾಣಿಯರು ಹಾಗೂ ಮಂತ್ರಿವರ್ಯರಿಗೆ ಪ್ರಜಾಹಿತ ಕಾರ್ಯಗಳನ್ನು ಶಿವೋಹಂ ಭಾವದಿಂದ ನಿರ್ವಹಿಸುವಂತೆ ತಿಳಿಸಿದವರು. ಮಹಾರಾಣಿಗೆ ದೈವಭಕ್ತಿ ಪ್ರಜಾವಾತ್ಸಲ್ಯ, ಉದಾರಶೀಲತೆ ಶಾಂತಿಪ್ರಿಯತೆ, ತ್ಯಾಗಜೀವನ, ಕ್ಷಮಾಗುಣ, ಹಾಗೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಅವುಗಳನ್ನು ಕಾರ್ಯಗತಗೊಳಿಸಲು ಶಿವಾಚಾರಿಣಿಯರ ಸಂಘ ವನ್ನು ಸ್ಥಾಪಿಸಿ ಸ್ತ್ರೀ ಸ್ವಾತಂತ್ರ್ಯ ಕ್ರಾಂತಿಗೆ ನಾಂದಿ ಹಾಡಿದವರು. ಅವಂತಿ ಪಟ್ಟಣದ ಪ್ರಸಿದ್ದ ವೈದಿಕರಾದ ದೇವಪ್ರಿಯ, ವೇದಪ್ರಿಯ, ಸುಕೃತ, ಧರ್ಮವಾಹಿ, ಎಂಬುವವರಿಗೆ ಶಿವತತ್ವಾನುಸಂದಾನ ಮಾರ್ಗದ ಜ್ಞಾನವನ್ನು ಉಪದೇಶಿಸಿ ಇಷ್ಟಲಿಂಗ ಸಂಸ್ಕಾರವನ್ನು ಕರುಣಿಸಿ ಉದ್ಧರಿಸಿದವರು.

ಈ ಪ್ರಾಂತ್ಯದ ಮಹಾರಾಜ ಚಂದ್ರಸೇನನಿಗೆ ಸೃಷ್ಟಿಯ ರಹಸ್ಯವನ್ನು ತಿಳಿಸುತ್ತಾ, ಸತ್- ಚಿತ್- ಆನಂದ, ಇಚ್ಛಾ- ಜ್ಞಾನ- ಕ್ರಿಯಾಶಕ್ತಿಗಳ ಮಹತ್ವ, ಜೀವ-ಬ್ರಹ್ಮರ ಅಭೇದ ಹಾಗೂ ಶಕ್ತಿ ವಿಶಿಷ್ಟಾದ್ವೈತದ ಆಚರಣೆ ಹಾಗೂ ಸಮನ್ವಯ ಭಾವವನ್ನು ವಿವರಿಸಿದ್ದಲ್ಲದೆ ಅದಕ್ಕೆ ಭಾಷ್ಯವನ್ನು ರಚಿಸಿದರು. ಅದು ದಾರುಕಭಾಷ್ಯವೆಂದು ಹೆಸರಾಗಿದೆ.

ದಾರುಕರು ದೇಶ ಸಂಚಾರ ಹೊರಟು ಹಿಂಸಾಕರ್ಮಕಾಂಡವನ್ನು ಖಂಡಿಸಿ ಸದಾಚಾರಗಳನ್ನು ಬೋಧಿಸಿ ಜನ ಜೀವನದಲ್ಲಿ ತಾತ್ವಿಕ ಜಾಗೃತಿ ಉಂಟು ಮಾಡಿದರು. ಮಾನವ ಕುಲವೆಲ್ಲ ಒಂದೇ ಎನ್ನುತ್ತಾ, ಜಾತಿ ವರ್ಣ ಭೇದಗಳು ಮಾನವನ ಕಾಲ್ಪನಿಕ ಕೋಟೆ, ಅದರ ನಿಮೂಲನೆ ವೀರಶೈವಕ್ಕೆ ಮಾತ್ರ ಸಾಧ್ಯ ಎಂದು ತಿಳಿಸುತ್ತಾ ತಮಗೆ ಶರಣಾದ ಎಲ್ಲರಿಗೆ ಅವರ ಶಕ್ತಿಪಾತ ಹಾಗೂ ನೀತಿಯನ್ನು ಗುರುತಿಸಿ ಲಿಂಗದೀಕ್ಷಾ ಸಂಸ್ಕಾರವಿತ್ತು ಶಿವಸಿದ್ಧಾಂತವನ್ನು ಉಪದೇಶಿಸಿ ಅವರನ್ನೆಲ್ಲ ಮಹೇಶ್ವರರನ್ನಾಗಿ ಪರಿವರ್ತಿಸಿದ ಕ್ರಾಂತಿ ಪುರುಷರಾಗಿದ್ದವರು.

ಕಾಯಕ-ದಾಸೋಹದ ಮಹತ್ವವನ್ನು ಸಾರುತ್ತಾ ಸರ್ವರೂ ಕ್ರಿಯಾಶೀಲರಾಗಬೇಕು, ಪರಾವಲಂಬನ ಮಾನವೀಯ ಲಕ್ಷಣವಲ್ಲ, ಕಾಯಕಕ್ಕೆ ಯಾವುದೇ ಭೇದವಿಲ್ಲ. ಕಾಯಕದಿಂದ ಬಂದ ಫಲವನ್ನು ತಾವೂ ಸ್ವೀಕರಿಸುವುದರೊಂದಿಗೆ ಇತರರಿಗೆ ವಿನಿಯೋಗಿಸಬೇಕೆಂದು ತಿಳಿಸುತ್ತ ಅದನ್ನು ಜಾರಿಗೆ ತಂದ ಕೀರ್ತಿ ಶ್ರೀ ದಾರುಕರಿಗೆ ಸಲ್ಲುತ್ತದೆ.

ಸಮಾಜವನ್ನು ಸದೃಢಗೊಳಿಸಲು ಹಾಗೂ ಆಧ್ಯಾತ್ಮಿಕ- ಸಾಂಸ್ಕೃತಿಕ ಪರಂಪರೆಯನ್ನು ಪುನರುತ್ಥಾನಗೊಳಿಸಲು ದೇಶದಾದ್ಯಂತ ಭೂರುದ್ರಭಕ್ತ ಸಂಘಗಳನ್ನು ಸ್ಥಾಪಿಸಿ ಅವುಗಳ ಮುಖೇನ ಸತ್ವ ಪೂರ್ಣ ಸಾತ್ವಿಕ ಸಮಷ್ಠಿ ಸಮಾಜವನ್ನು ನಿರ್ವಿುಸುವಲ್ಲಿ ಯಶಸ್ವಿಯಾದರು. ವಿಶ್ವದಾದ್ಯಂತ ವೀರಮಹೇಶ್ವರನನ್ನೊಳಗೊಂಡ ಸಾವಿರಾರು ಶಾಖಾ ಮಠಗಳನ್ನು ಸ್ಥಾಪಿಸಿ ಅವುಗಳ ಮೂಲಕ ಅನ್ನದಾಸೋಹ, ಜ್ಞಾನಪ್ರಸಾರ, ಶಿವಾನುಭವಗೋಷ್ಠಿ, ಅರ್ಚನ- ಅರ್ಪಣ ವಿಧಾನ, ಭಸ್ಮ ನಿರ್ವಣ, ಇಷ್ಟಲಿಂಗಾರ್ಚನ ಹಾಗೂ ಪಂಚಾಕ್ಷರಿ ಮಹಾಮಂತ್ರ ಪಠಣ ಮುಂತಾದ ಪವಿತ್ರ ಧರ್ಮಕಾರ್ಯ ಗಳು ನಿರಂತರವಾಗಿ, ಹಾಗೂ ಯಶಸ್ವಿಯಾಗಿ ನಡೆಯುವಂತೆ ನೋಡಿಕೊಳ್ಳುತ್ತಿದ್ದರು. ಇಂಥ ಮಹಾಮಹಿಮ ಗಣಾಧೀಶ್ವರರು ತಮ್ಮ ಪೀಠಕ್ಕೆ ಶ್ರೀಜಗದ್ಗುರು ಮರುಳಸಿದ್ದಶಿವಾಚಾರ್ಯರನ್ನು ನೇಮಕ ಮಾಡಿ ಶ್ರೀ ಸಿದ್ದೇಶ್ವರ ಮಹಾಲಿಂಗದಲ್ಲಿ ಒಂದಾದವರು.

ಈ ಪರಂಪರೆಯಲ್ಲಿ ಸಾಗಿ ಬಂದಿರುವ ಶ್ರೀಮದ್​ಉಜ್ಜಯಿನಿ ಸದ್ದರ್ಮ ಪೀಠದಲ್ಲಿ ಪ್ರತಿ ವರ್ಷ ಶ್ರೀ ಜಗದ್ಗುರು ದಾರುಕಾಚಾರ್ಯ ಜಯಂತಿಯನ್ನು ಕ್ಷೇತ್ರನಾಥ ಶ್ರೀಮರುಳ ಸಿದ್ದೇಶ್ವರ ರಥೋತ್ಸವದಂದು ಅತ್ಯಂತ ಶ್ರದ್ದಾ ಭಕ್ತಿಯೊಂದಿಗೆ ಆಚರಿಸಲಾಗುತ್ತದೆ.

ಉಜ್ಜಯಿನಿ ಪೀಠದ ಪ್ರಸ್ತುತ ಪೀಠಾಚಾರ್ಯರಾದ ಶ್ರೀ ಜಗದ್ಗುರು ಸಿದ್ದಲಿಂಗರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಸಾನ್ನಿಧ್ಯದಲ್ಲಿ ಶುಕ್ರವಾರ (ಮೇ 2) ಶ್ರೀಜಗದ್ಗುರು ದಾರುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಶ್ರೀ ಜಗದ್ಗುರು ಮರುಳಸಿದ್ದೇಶ್ವರ ಸ್ವಾಮಿ ರಥೋತ್ಸವ ಜರುಗಲಿದೆ. ಮೇ 3 ರಂದು ಶ್ರೀ ಜಗದ್ಗುರು ಮರುಳಸಿದ್ದೇಶ್ವರ ಸ್ವಾಮಿಯ ದೇವಾಲಯದ ಶಿಖರಕ್ಕೆ ತೈಲಾಭಿಷೇಕ, ಮೇ 5 ರಂದು ಶಿವದೀಕ್ಷಾ ಸಂಸ್ಕಾರ, ಮೇ 6ಕ್ಕೆ ಕಂಕಣ ವಿಸರ್ಜನೆ ಹಾಗೂ ದೇವಾಲಯ ಶುದ್ಧಿಕರಣ ನಡೆಯಲಿದೆ.ಮೇ 7ರಂದು ಉಚಿತ ಸಾಮೂಹಿಕ ವಿವಾಹ, ಧಾರ್ವಿುಕ ಸಮಾರಂಭ, ಪ್ರಶಸ್ತಿ ಪ್ರದಾನ ಮುಂತಾದ ಕಾರ್ಯಕ್ರಮಗಳು ಜರುಗುವವು.