ನ್ಯೂಸ್

ಕೃಷ್ಣಪ್ರಜ್ಞೆಯ ವಿಶ್ವರೂಪ ಶ್ರೀ ಚೈತನ್ಯ ಮಹಾಪ್ರಭು

ವೇದಾಂತಿಗಳು ಪ್ರಾಪಂಚಿಕ ಮೋಹಗಳಿಗೆ ತುತ್ತಾಗದಂತೆ ದೇಹವನ್ನು ದಂಡಿಸಿ, ಮನಸ್ಸನ್ನು ನಿರ್ಬಂಧಿಸಲು ಬೋಧಿಸುತ್ತಾರೆ. ಆದರೆ ಶಕ್ತಿಶಾಲಿಯಾದ ಮನಸ್ಸನ್ನು ನಿಯಂತ್ರಿಸಿ ಇಂದ್ರಿಯಗಳನ್ನು ನಿಗ್ರಹಿಸುವುದು ಸುಲಭದ ಮಾತಲ್ಲ. ಹೀಗೆ ಅಸಾಧ್ಯವನ್ನು ಬೆನ್ನುಹತ್ತುವ ಬದಲಿಗೆ ಮನಸ್ಸನ್ನು ಕೃಷ್ಣಪ್ರಜ್ಞೆಯತ್ತ ಹೊರಳಿಸಿ, ಇಂದ್ರಿಯಗಳನ್ನು ಭಗವದಾರಾಧನೆಯ ಚಟುವಟಿಕೆಗಳಲ್ಲಿ ತೊಡಗಿಸಿ ಅವುಗಳನ್ನು ನಿತ್ಯಸಂತೃಪ್ತವಾಗಿಡುವುದು ಸುಲಭ ಸಾಧ್ಯ ಮತ್ತು ಅದೇ ಭಗವಂತನನ್ನು ಹೊಂದುವ ಸರಳ ಮಾರ್ಗ. ಇದು ಶ್ರೀ ಚೈತನ್ಯ ಮಹಾಪ್ರಭುಗಳ ಬೋಧನೆ. ಪ್ರಾಪಂಚಿಕವಾದ ಇಲ್ಲವೆ ಆಧ್ಯಾತ್ಮಿಕವಾದ ಲಾಭದ ಆಸೆಯಿಲ್ಲದ ಶುದ್ಧಪ್ರೇಮದಿಂದ ಕೃಷ್ಣನನ್ನು ಪೂಜಿಸಬೇಕೆನ್ನುವುದು ಅವರ ಉಪದೇಶಗಳ ಒಟ್ಟು ಸಾರಾಂಶ.

ಇದು ಗೋಕುಲದ ಗೋಪಬಾಲರ ಮತ್ತು ಗೋಪಿಕೆಯರ ಕೃಷ್ಣಾರಾಧನೆಯ ಭಾವ. ಕನ್ನಡದ ಸಂದರ್ಭದಲ್ಲಿ ಈ ಮಾತುಗಳನ್ನೇ ಕುವೆಂಪು ಅವರು, ಮುಗ್ಧ ಬಾಲಕನೊಬ್ಬನ ಭಗವತ್ ಪ್ರೇಮದ ಕುರಿತ ಉಪನಿಷತ್ತಿನ ಕತೆಯೊಂದನ್ನು ಆಧರಿಸಿ ‘ನನ್ನ ಗೋಪಾಲ’ ಎಂಬ ಶೀರ್ಷಿಕೆಯಲ್ಲಿ ತಾವು ರಚಿಸಿದ ಮಕ್ಕಳ ನಾಟಕದಲ್ಲಿ ಸ್ವತಃ ಕೃಷ್ಣನ ಬಾಯಲ್ಲಿ ಆಡಿಸಿದ್ದಾರೆ-

ತಿಳುವಳಿಕೆಗೆ ನಾ ಸಿಲುಕೆನು ಮನುಜಾ ಒಲುಮೆಗೆ ಸೆರೆಯಾಗುವೆನೂ...

ತಪಸಿಗಳೆನ್ನನು ಜ್ಞಾನದಿ ಮುಟ್ಟಲು ಯುಗಯುಗಗಳು ಬಲು ಬಳಲುವರು

ಯೋಗಿಗಳೆನ್ನನು ಜನುಮ ಜನುಮದಲ್ಲಿ ಹೊಂದಲು ಸಾಧನೆ ಮಾಡುವರು...

ಬೃಂದಾವನದಾ ಗೋಪಿಯರರಿತರೇ ವೇದಗಳಾಡುವ ಸತ್ಯವನೂ

ಹಾಲನು ಮಾರುವ ಹೆಣ್ಣುಗಳೊಲುಮೆಯು ಮೀರದೆ ಯೋಗಿಯ ಸಾಧನೆಯ...

ಹೌದು, ಭಗವಂತನನ್ನು ಮೆಚ್ಚಿಸಲು ಜ್ಞಾನಮಾರ್ಗ, ಕರ್ಮಮಾರ್ಗಗಳಿಗಿಂತ ಭಕ್ತಿಮಾರ್ಗ ಸರಳವಾದುದು ಮತ್ತು ಸುಲಭವಾದುದು. ಜ್ಞಾನ ಮತ್ತು ಕರ್ಮಗಳಿಗಷ್ಟೇ (ತಿಳುವಳಿಕೆಗಷ್ಟೇ) ಆತ ಒಲಿಯುವುದಾಗಿದ್ದರೆ ಈ ಬೃಂದಾವನದ ಗೋಪಿಯರಿಗೆ ಕೃಷ್ಣಪ್ರೇಮ ದಕ್ಕುತ್ತಿತ್ತಾದರೂ ಹೇಗೆ? ಅವರಿಗೆ ಕೃಷ್ಣನ ಮೇಲಿದ್ದುದು ಕೇವಲ ಮುಗ್ಧಪ್ರೇಮವಷ್ಟೇ. ಗೋಪಬಾಲರಿಗೂ ಅಷ್ಟೆ, ಕೃಷ್ಣನ ಮೇಲಿದ್ದುದು ನಿರ್ಮಲ ಸ್ನೇಹ ಮಾತ್ರ. ಇಂತಹ ನಿಷ್ಕಲ್ಮಶ, ಅಚಂಚಲ, ಅಂತರಂಗದ ಭಾವಾರಾಧನೆಯನ್ನೇ ಶ್ರೀ ಚೈತನ್ಯ ಮಹಾಪ್ರಭುಗಳು ತಮ್ಮ ಬದುಕಿನುದ್ದಕ್ಕೂ ಅನುಭವಿಸಿದ್ದು, ಆಚರಿಸಿದ್ದು ಮತ್ತು ಬೋಧಿಸಿದ್ದು.

ನಾಮಸಂಕೀರ್ತನೆ ಮಾತ್ರದಿಂದ ಕೃಷ್ಣನೆಂಬ ಪರಮಸತ್ಯವನ್ನು ತಲುಪಲು ಸಾಧ್ಯ, ಅದಕ್ಕಾಗಿ ಕ್ಲಿಷ್ಟ ಸಾಧನೆಗಳ ಅಗತ್ಯವಿಲ್ಲವೆಂಬುದು ಚೈತನ್ಯ ಮಹಾಪ್ರಭುಗಳ ಬೋಧನೆ. ಅವರ ಪ್ರಕಾರ ಕೃಷ್ಣನ ನಾಮ, ರೂಪ, ಲೀಲೆ, ಪರಿವಾರ ಮತ್ತು ಪರಿಕರಗಳಿಗೂ ಕೃಷ್ಣನಿಗೂ ವ್ಯತ್ಯಾಸವೆಂಬುದಿಲ್ಲ. ಕೃಷ್ಣಪ್ರಜ್ಞೆಯೇ ಪರಮಸತ್ಯದ ಪರತರ ಸ್ವಭಾವ. ಹಾಗಾಗಿ ಅತ್ಯಂತ ಶ್ರೇಷ್ಠ ಪೂಜಾವಿಧಾನವೆಂದರೆ ಬೃಂದಾವನದ ಗೋಪಿಯರಂತೆ ಸದಾ ಸರ್ವದಾ ಕೃಷ್ಣನನ್ನು ಹಂಬಲಿಸುತ್ತ ಸಾಮೂಹಿಕವಾಗಿ ಅವನ ನಾಮ ಸಂಕೀರ್ತನೆಯಲ್ಲಿ ಮುಳುಗಿ ಮೈಮರೆಯುವುದು. ಇದೇ ಶ್ರೀಮದ್ಭಾಗವತವು ಬೋಧಿಸುವ ದಿವ್ಯಜ್ಞಾನ ಮತ್ತು ಇದುವೇ ಚೈತನ್ಯ ಭಗವಾನರ ಚಿಂತನೆ, ಬೋಧನೆ ಮತ್ತು ಪ್ರತಿಪಾದನೆ.

ಶ್ರೀ ಚೈತನ್ಯ ಮಹಾಪ್ರಭುಗಳು ಹುಟ್ಟಿದ್ದು ಬಂಗಾಳ ಪ್ರಾಂತ್ಯದ ನವದ್ವೀಪ ನಗರದ ಭಾಗವಾದ ಶ್ರೀಧಾಮ ಮಾಯಾಪುರದಲ್ಲಿ. ಅದು ಶಕಾಬ್ಧ 1407 ಅರ್ಥಾತ್ ಕ್ರಿಸ್ತಶಕ 1486ರ ಫೆಬ್ರವರಿ ತಿಂಗಳು. ಫಾಲ್ಗುಣೀ ಪೂರ್ಣಿಮೆಯ ಸಂಜೆ. ಅಂದು ಚಂದ್ರಗ್ರಹಣವಿದ್ದ ಕಾರಣ ಜನ, ಗ್ರಹಣಮೋಕ್ಷಕ್ಕಾಗಿ ಹರಿನಾಮ ಸ್ಮರಣೆಯಲ್ಲಿ ಮುಳುಗಿದ್ದ ಶುಭವೇಳೆಯಲ್ಲಿ ಮಹಾಪ್ರಭುಗಳು ಅವತರಿಸಿದ್ದು. ಚೈತನ್ಯರ ಬಾಲ್ಯದ ಹೆಸರು ವಿಶ್ವಂಭರ. ಇವರ ಬಾಲ್ಯಲೀಲೆಯ ಕುರಿತು ಅನೇಕ ದಂತಕತೆಗಳಿವೆ. ಅವರಿಗೆ ಹತ್ತು ವರ್ಷಗಳಾಗುವ ಹೊತ್ತಿಗೆ ವ್ಯಾಕರಣ, ಅಲಂಕಾರಶಾಸ್ತ್ರ, ಸ್ಮೃ ಹಾಗೂ ನ್ಯಾಯಶಾಸ್ತ್ರದಲ್ಲಿ ತಕ್ಕಮಟ್ಟಿನ ಪಾಂಡಿತ್ಯ ಗಳಿಸಿದ್ದರು. ಅವರಿಗೆ ಹದಿನಾಲ್ಕು ವರ್ಷ ತುಂಬಿದಾಗ ಅದೇ ಪಟ್ಟಣದ ವಲ್ಲಭಾಚಾರ್ಯರ ಪುತ್ರಿ ಲಕ್ಷ್ಮೀಪ್ರಿಯೆಯೊಂದಿಗೆ ವಿವಾಹ ಮಾಡಲಾಯಿತು. ಅಷ್ಟರಲ್ಲಾಗಲೇ ವೈಷ್ಣವ ಸಿದ್ಧಾಂತ ಬೋಧಕರಾಗಿ ಸಾಕಷ್ಟು ಹೆಸರು ಗಳಿಸಿದ್ದರು. ಈ ನಡುವೆ ಪೂರ್ವ ಬಂಗಾಳದಲ್ಲಿ ಅವರು ವೈಷ್ಣವ ಧರ್ಮಬೋಧನೆಯಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಧರ್ಮಪತ್ನಿಗೆ ಹಾವು ಕಡಿದು ಮೃತರಾದರು. ಮತ್ತೆ ತಾಯಿಯ ಒತ್ತಾಸೆಯ ಮೇರೆಗೆ ವಿಶ್ವಂಭರರು ವಿಷ್ಣುಪ್ರಿಯಾದೇವಿ ಎಂಬುವವರನ್ನು ಎರಡನೆಯ ಮದುವೆ ಮಾಡಿಕೊಂಡರು. ಮುಂದೆ ಕೆಲವೇ ಸಮಯದಲ್ಲಿ ಅವರು ಶಿಷ್ಯರೊಡಗೂಡಿ ಗಯಾ ಕ್ಷೇತ್ರಕ್ಕೆ ತೆರಳಿ, ಅಲ್ಲಿ ಮಾಧವೇಂದ್ರ ಪುರಿಯವರ ಶಿಷ್ಯ ಈಶ್ವರ ಪುರಿ ಎಂಬ ವೈಷ್ಣವ ಸಂನ್ಯಾಸಿಯಿಂದ ಆಧ್ಯಾತ್ಮಿಕ ದೀಕ್ಷೆ ಪಡೆದರು.

ಗುರು ಈಶ್ವರ ಪುರಿಗಳು, ಕೇವಲ ಹರಿನಾಮ ಸಂಕೀರ್ತನೆಯಿಂದ ಭಗವಂತನ ದಿವ್ಯ ಚರಣಾರವಿಂದದ್ವಯಗಳ ದರ್ಶನ ಲಭಿಸಬಲ್ಲದು ಎಂದು ಹೇಳಿ ಅವರಿಗೆ ಬೃಹನ್ನಾರದೀಯ ಪುರಾಣದಿಂದ ಶ್ಲೋಕವೊಂದನ್ನು ತಿಳಿಸಿಕೊಟ್ಟರು.

ಹರೇರ್ ನಾಮ ಹರೇರ್ ನಾಮ ಹಾರೇರ್ ನಾಮೈವ ಕೇವಲಮ್ |

ಕಲೌ ನಾಸೆôವ ನಾಸೆôವ ನಾಸೆôವ ಗತಿರನ್ಯಥಾ||

‘ಈ ಕಲಿಯುಗದಲ್ಲಿ ಹರಿನಾಮ ಸಂಕೀರ್ತನೆಯ ಹೊರತಾಗಿ ಆಧ್ಯಾತ್ಮಿಕ ಉನ್ನತಿಗೆ ಅನ್ಯಮಾರ್ಗವಿಲ್ಲ, ಅನ್ಯಮಾರ್ಗವಿಲ್ಲ, ಖಂಡಿತ ಅನ್ಯಮಾರ್ಗವಿಲ್ಲ’

ಗುರುಗಳಿಂದ ಉಪದೇಶ ಪಡೆದ ವಿಶ್ವಂಭರರು ಹೀಗೆ ಸಂಕಲ್ಪ ಮಾಡುತ್ತಾರೆ. ‘ನಾನು ನನ್ನ ಆಧ್ಯಾತ್ಮಿಕ ಗುರುಗಳಿಂದ ನಿರಂತರ ಹರಿನಾಮ ಸಂಕೀರ್ತನೆ ನಡೆಸಬೇಕೆಂಬ ಆಜ್ಞೆ ಪಡೆದಿದ್ದೇನೆ. ಹಾಗಾಗಿ ಸದಾ ಈ ಕೃಷ್ಣಜಪ ಸಾಗರದಲ್ಲಿ ಮುಳುಗಿ ಮೈಮರೆಯುತ್ತೇನೆ. ಆ ಸಮಯದಲ್ಲಿ ನನ್ನ ಮೇಲೆ ನನಗೆ ನಿಯಂತ್ರಣವಿರುವುದಿಲ್ಲ. ನಾನು ನಗುತ್ತೇನೆ, ಅಳುತ್ತೇನೆ, ಹಾಡುತ್ತೇನೆ. ಬುದ್ಧಿಹೀನನಂತೆ ಕುಣಿಯುತ್ತೇನೆ. ಅವರ ಭವಿಷ್ಯ ವಾಣಿಯಂತೆ ಒಂದು ದಿನ ಈ ನಾಮಸ್ಮರಣೆಯ ಅಲೌಕಿಕ ಆನಂದ ಇಡೀ ಜಗತ್ತನ್ನು ವ್ಯಾಪಿಸುತ್ತದೆ’

ಮುಂದೆ ವಿಶ್ವಂಭರರ ಹರಿ ನಾಮಸಂಕೀರ್ತನೆಯ ಜಪ ಎಲ್ಲೆಡೆ ಎಲ್ಲೆ ಮೀರಿ ಹರಡತೊಡಗುತ್ತದೆ. ಸಾವಿರಾರು ಜನ ಅನುಯಾಯಿಗಳು ನವದ್ವೀಪದ ಹಾದಿಬೀದಿಗಳಲ್ಲಿ ಮೆರವಣಿಗೆಗಳಲ್ಲಿ ಸಂಚರಿಸುತ್ತ ತಾಳ ಮೃದಂಗ ವಾದನಗೈಯುತ್ತ, ಕರತಾಲ ತಟ್ಟುತ್ತ, ‘ಹರೇಕೃಷ್ಣ ಹರೇಕೃಷ್ಣ’ ಎಂದು ನಲಿಯತೊಡಗಿದರು.

ಕ್ರಿಸ್ತಶಕ 1510ರ ಜನವರಿಯ ತುದಿಯಲ್ಲಿ ವಿಶ್ವಂಭರರು ಕೇಶವ ಭಾರತಿ ಎಂಬ ಯತಿಗಳಿಂದ ಸನ್ಯಾಸ ದೀಕ್ಷೆ ಪಡೆದರು. ಅಂದಿನಿಂದ ಅವರು ಶ್ರೀ ಚೈತನ್ಯ ಮಹಾಪ್ರಭುಗಳೆಂದು ವಿಖ್ಯಾತರಾದರು. ಚೈತನ್ಯರು ತಮ್ಮ ಚಿಕ್ಕ ಕುಟುಂಬ ತ್ಯಜಿಸಿ ಕೃಷ್ಣಪ್ರಜ್ಞೆಯ ವಿಶ್ವಕುಟುಂಬ ಸೇರಿ ಲೋಕೋದ್ಧಾರ ಮಾಡಲು ಮುಂದಾದರು. ಅವರ ಪತ್ನಿ ವಿಷ್ಣುಪ್ರಿಯ ದೇವಿಗೆ ಇದರಿಂದ ಬೇಸರವಾದರೂ ಪತಿ ಇಡುತ್ತಿರುವ ಹೆಜ್ಜೆಯ ಹಿಂದಿನ ಮಹತ್ವ ಅರ್ಥವಾಯಿತು. ತನ್ನ ಪತಿ ಸಂನ್ಯಾಸಾಶ್ರಮವನ್ನು ಸ್ವೀಕರಿಸಿದ್ದರಿಂದ ಆಕೆ ಜೀವನ ಪರ್ಯಂತ ಒಂಟಿಯಾಗಿ ಉಳಿದು ಹರಿನಾಮ ಸ್ಮರಣೆಗೈಯುತ್ತ ಪತಿಯ ಹಾದಿಯಲ್ಲೇ ಜೀವ ಸವೆಸಿದಳು. ತಾಯಿ ಶಚೀದೇವಿಗೆ ಸನ್ಯಾಸಾಶ್ರಮಕ್ಕೆ ಅಡಿಯಿಟ್ಟ ಮಗನನ್ನು ಕಂಡು ಕಣ್ಣುಗಳು ಒದ್ದೆಯಾದರೂ, ಆಕೆ ಆಶೀರ್ವದಿಸಿ, ಆತ ಪುರಿ ಪಟ್ಟಣದಲ್ಲಿ ನೆಲಸಿ ಭಗವದುಪಾಸನೆಗೆ ತೊಡಗಿಕೊಳ್ಳಲಿ. ಕನಿಷ್ಠಪಕ್ಷ ಯಾತ್ರಾರ್ಥಿಗಳಿಂದ ತನಗೆ ಆತನ ಕ್ಷೇಮ ಸಮಾಚಾರಗಳಾದರೂ ಸಿಗುತ್ತಿರಲಿ ಎಂದು ಬಯಸಿದರು. ತಾಯಿಯ ಮಾತಿಗೆ ಕಟ್ಟುಬಿದ್ದ ಮಗ ಮುಂದೆ ಜಗನ್ನಾಥ ಪುರಿ ಪಟ್ಟಣದಲ್ಲಿ ಒಟ್ಟು ಇಪ್ಪತ್ನಾಲ್ಕು ವರ್ಷಗಳ ಕಾಲ ನೆಲಸಿದರು.

ಅದಕ್ಕೂ ಮುನ್ನ ಚೈತನ್ಯರು ದಕ್ಷಿಣ ಭಾರತದ ಯಾತ್ರೆ ಕೈಗೊಂಡು ಅನೇಕ ತೀರ್ಥಕ್ಷೇತ್ರಗಳನ್ನು ಸಂದರ್ಶಿಸಿದರು. ಅವರು ಸಂದರ್ಶಿಸಿದ ಪುಣ್ಯಕ್ಷೇತ್ರಗಳಲ್ಲಿ ಉಡುಪಿ, ಶೃಂಗೇರಿ, ಶ್ರೀರಂಗ, ರಾಮೇಶ್ವರಗಳೂ ಸೇರಿವೆ.

ಭಾಗವತ ಮತ್ತು ಭಗವದ್ಗೀತೆಯ ಸಂದೇಶಗಳನ್ನು ಸಾರುತ್ತ, ಕಠಿಣ ವ್ಯಾಖ್ಯಾನಗಳ ಬದಲು ಸರಳ ಸುಂದರ ನಿರೂಪಣೆ ನೀಡುತ್ತ ಸರ್ವ ಸಮುದಾಯವನ್ನು ಒಳಗೊಳ್ಳುತ್ತ ಕೃಷ್ಣಪ್ರಜ್ಞೆಯ ದಿವ್ಯಾಮೃತವನ್ನು ಎಲ್ಲರಿಗೂ ಹಂಚಿದರು. ಚೈತನ್ಯ ಮಹಾಪ್ರಭುಗಳನ್ನು ಕೃಷ್ಣನ ಅವತಾರವೆಂದು ಹಲವರು ಭಾವಿಸಿದರೆ ಇನ್ನು ಕೆಲವರು ಅವರು ರಾಧಾಕೃಷ್ಣರ ಅಮರಪ್ರೇಮದ ಮೂರ್ತಸ್ವರೂಪರೆಂದರು. ಮುಂದೆ ಅವರ ಶಿಷ್ಯರು ಅವರು ಉಪದೇಶಿಸಿದ ಕೃಷ್ಣಪ್ರಜ್ಞೆಯ ಮಹತ್ವವನ್ನು ಜಗತ್ತಿನೆಲ್ಲೆಡೆ ಹರಡಿದರು. ಹೀಗೆ ನಲವತ್ತೆಂಟು ವರ್ಷಗಳವರೆಗೆ ತಮ್ಮ ಪಾರಮಾರ್ಥಿಕ ಲೀಲಾಕಾರ್ಯಗಳನ್ನು ನಡೆಸಿ, ಜಗತ್ತಿನೆಲ್ಲಡೆ ಕೃಷ್ಣಪ್ರಜ್ಞೆಯನ್ನು ಭರಿಸಿ, ಕ್ರಿಸ್ತಶಕ 1534 ರಲ್ಲಿ ಜಗನ್ನಾಥಪುರಿಯಲ್ಲಿ ಪರಂಧಾಮಕ್ಕೆ ಸರಿದರು.

(ಲೇಖಕರು ಸಾಹಿತಿ, ಕಾದಂಬರಿಕಾರರು)