ಕೆ.ಆರ್.ನಗರ: ತಾಲೂಕಿನ ಗಳಿಗೆಕೆರೆ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀಪಟ್ಟಲದಮ್ಮ ದೇವಿಯ ರಥೋತ್ಸವ ಶುಕ್ರವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಬೆಳಗ್ಗೆಯಿಂದ ಅಭಿಷೇಕ, ವಿಶೇಷ ಪೂಜೆ ಹಾಗೂ ಇನ್ನಿತರ ಪೂಜಾ ಕೈಂಕರ್ಯಗಳು ನೆರವೇರಿದ ನಂತರ ಉತ್ಸವ ಮೂರ್ತಿಯನ್ನು ವಿಶೇಷವಾಗಿ ಅಲಂಕಾರ ಮಾಡಲಾಗಿದ್ದ ರಥದ ಸುತ್ತ ಪ್ರದಕ್ಷಿಣೆ ಹಾಕಿಸಿ ಪ್ರತಿಷ್ಠಾಪಿಸಲಾಯಿತು. ನಂತರ ಸ್ಥಳೀಯರ ಜತೆಗೆ ಅಕ್ಕ ಪಕ್ಕದ ಗ್ರಾಮಗಳು ಹಾಗೂ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ರಥವನ್ನು ಜಯಘೋಷ ಕೂಗುತ್ತಾ ಶ್ರದ್ಧಾಭಕ್ತಿಯಿಂದ ರಥ ಎಳೆದರು. ರಥಕ್ಕೆ ಭಕ್ತರು, ನವಜೋಡಿಗಳು, ಹಣ್ಣು-ದವನ ಮೇಲೆ ಎಸೆದು ಭಕ್ತಿ ಮೆರೆದರು.
ನೂರಾರು ವರ್ಷ ಇತಿಹಾಸವಿರುವ ದೇವಸ್ಥಾನದ ಶ್ರೀಪಟ್ಟಲದಮ್ಮ ದೇವಿಯು ತಾಲೂಕಿನ ಗಳಿಗೆಕೆರೆ, ದೊಡ್ಡಕೊಪ್ಪಲು, ಕಲ್ಯಾಣಪುರ, ಕಾರ್ಗಳ್ಳಿ ಕೊಪ್ಪಲು, ಅಡಗೂರು ಗ್ರಾಮಗಳಿಗೆ ಗ್ರಾಮದೇವತೆಯಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿ ಜಾತ್ರಾ ಮಹೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡ ಭಕ್ತರಿಗೆ ಪ್ರಸಾದ, ಮಜ್ಜಿಗೆ ವಿತರಿಸಲಾಯಿತು. ಶನಿವಾರ ಗಳಿಗೆಕೆರೆಯಲ್ಲಿ ದೇವರ ಉತ್ಸವ ಮೂರ್ತಿ ಮೆರವಣಿಗೆ, ಭಾನುವಾರ ದೊಡ್ಡಕೊಪ್ಪಲು, ಕಾರ್ಗಹಳ್ಳಿ ಕೊಪ್ಪಲು ಗ್ರಾಮದಲ್ಲಿ, ಸೊಮವಾರ ಕಲ್ಯಾಣಪುರ ಗ್ರಾಮದಲ್ಲಿ, ಮಂಗಳವಾರ ರಾತ್ರಿ ಕಾವೇರಿ ನದಿಯಲ್ಲಿ ತೆಪ್ಪೋತ್ಸವ ನಡೆಯಲಿದ್ದು, ಬುಧವಾರ ಅಡಗೂರು ಗ್ರಾಮದಲ್ಲಿ ದೇವಿಯ ಉತ್ಸವ ಮೂರ್ತಿ ನೆರವೇರಲಿದೆ.
ಜಾತ್ರಾ ಮಹೋತ್ಸವದಲ್ಲಿ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್, ಕೆಪಿಸಿಸಿ ಕಾರ್ಯಕಾರಣಿ ಸದಸ್ಯ ದೊಡ್ಡಸ್ವಾಮೇಗೌಡ, ಜಿಪಂ ಮಾಜಿ ಸದಸ್ಯ ಅಮಿತ್ ವಿ.ದೇವರಹಟ್ಟಿ, ಸಂತೋಷ್, ಎಪಿಎಂಸಿ ಮಾಜಿ ಉಪಾಧ್ಯಕ್ಷ ತೋಟಪ್ಪನಾಯಕ, ಯಜಮಾನರಾದ ಜಿ.ಜೆ.ಮಹದೇವ್, ರಮೇಶ್‌ನಾಯಕ, ಬೈರಪ್ಪ, ದೊಡ್ಡಕೊಪ್ಪಲು ರಾಜೇಗೌಡ, ಅಡಗೂರು ಸುರೇಶ್, ನಾಗೇಶ್, ಕೆಂಪೇಗೌಡ, ನಾಗರಾಜು, ಕಲ್ಯಾಣಪುರ ಶಿವಣ್ಣ, ಅಡಗೂರು ಗ್ರಾಪಂ ಅಧ್ಯಕ್ಷ ಮಹದೇವ್, ಉಪಾಧ್ಯಕ್ಷೆ ಸುಮಿತ್ರಾ ಕುಮಾರಸ್ವಾಮಿ, ಸದಸ್ಯರಾದ ರಾಜನಾಯಕ, ಶ್ವೇತಾ ಭೈರನಾಯಕ, ಶಿವರಾಜಮ್ಮ ಮಧು, ಮಂಜುನಾಥ, ಸುನೀತಾ ಎಂ.ಟಿರಾಜೇಶ್, ನಿಂಗರಾಜು, ಮಹೇಶ್, ಪುವನಹಳ್ಳಿ ವೆಂಕಟರಾಮ್ ಮತ್ತಿತರರು ಪಾಲ್ಗೊಂಡಿದ್ದರು.