ಹೊಸನಗರ: ಯಾವುದೇ ಭೇದಗಳಿಲ್ಲದ ಅಪರೂಪದ ವ್ಯಕ್ತಿತ್ವ ಶ್ರೀಕೃಷ್ಣನದು. ಸಮಾಜಕ್ಕೆ ಉತ್ತಮ ಸಂದೇಶ ನೀಡಿದ ಶ್ರೀಕೃಷ್ಣನ ಆದರ್ಶ, ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ಗಾಯಕ ಅಶೋಕ್‌ಕುಮಾರ್ ಹೇಳಿದರು. ಕಾರಣಗಿರಿ ಗ್ರಾಮಭಾರತಿ ಟ್ರಸ್ಟ್, ರಾಷ್ಟ್ರೋತ್ಥಾನ ಬಳಗದ ಆಶ್ರಯದಲ್ಲಿ ಕೃಷ್ಣಜನ್ಮಾಷ್ಟಮಿ ಅಂಗವಾಗಿ ನಡೆದ ಶ್ರೀಕೃಷ್ಣ ಲೋಕ-2025 ಕಾರ್ಯಕ್ರಮದಲ್ಲಿ ಮಾತನಾಡಿದರು. ವಸುಧಾ ಚೈತನ್ಯ ಮಾತನಾಡಿ, ಕೃಷ್ಣ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಸರಳ ಜೀವನ ಮತ್ತು ಉದಾತ್ತ ಚಿಂತನೆಗಳನ್ನು ಮಕ್ಕಳಿಗೆ ತಿಳಿಸಿಕೊಡಬೇಕು ಎಂದರು. ಶೇಷಗಿರಿ ಭಟ್ಟ ಅವರ ನೇತೃತ್ವದಲ್ಲಿ ಭಗವದ್ಗೀತೆಯ 18 ಅಧ್ಯಾಯಗಳ ಪಾರಾಯಣ, ವಿಷ್ಣು ಸಹಸ್ರನಾಮ ಪಠಣ, ಗಮಕ ವಾಚನ, ಶ್ರೀಕೃಷ್ಣ ಗೀತಾ ಸಮರ್ಪಣ, ಕೃಷ್ಣನ ಕುರಿತು ಭಜನೆ, ಗೀತೆಗಳ ಗಾಯನ, ಶ್ರೀಕೃಷ್ಣ ಲೀಲೆಗಳ ನೃತ್ಯಪ್ರದರ್ಶನ ಮತ್ತು 36ನೇ ವರ್ಷದ ಶ್ರೀಕೃಷ್ಣ ವೇಷಭೂಷಣ ಪ್ರದರ್ಶನ ನಡೆಯಿತು. ರಾಷ್ಟ್ರೋತ್ಥಾನ ಬಳಗದ ಅಧ್ಯಕ್ಷ ನಳಿನ್‌ಚಂದ್ರ, ಗ್ರಾಮಭಾರತಿ ಟ್ರಸ್ಟ್ ಅಧ್ಯಕ್ಷ ಹನಿಯ ರವಿ, ಕೆ.ಎನ್.ಕೃಷ್ಣಮೂರ್ತಿ, ಗ್ರಾಪಂ ಸದಸ್ಯ ಗುರುಮೂರ್ತಿ, ಶರತ್, ಸರಸ್ವತಿ ಇತರರಿದ್ದರು.