ಹೊಸನಗರ: ತಾಲೂಕಿನ ಬೈಸೆ ಗ್ರಾಮದ ಬಂಗ್ಲೆಗದ್ದೆಯಲ್ಲಿ ದುಷ್ಕರ್ಮಿಗಳು ಮೂರು ಎಕರೆ ಭತ್ತದ ಗದ್ದೆಗೆ ಕಳೆನಾಶಕ ಹೊಡೆದು ನಾಶ ಮಾಡಿದ್ದಾರೆ.
ಬ್ಲಾನಿ ಸಿಕ್ವೇರಾ ಎಂಬುವರು ಎರಡು ತಿಂಗಳ ಹಿಂದೆ ಭತ್ತ ನಾಟಿ ಮಾಡಿದ್ದರು. ಅ.11ರಂದು ಜಮೀನು ನೋಡಲು ಹೋದಾಗ ಭತ್ತದ ಬೆಳೆ ಸಂಪೂರ್ಣ ಕಂದುಬಣ್ಣಕ್ಕೆ ತಿರುಗಿರುವುದು ಗಮನಕ್ಕೆ ಬಂದಿದೆ. ಗದ್ದೆ ಕಾಯುತ್ತಿರುವ ದಿನೇಶ್ ಎಂಬಾತನನ್ನು ವಿಚಾರಿಸಿದಾಗ ಕಳೆನಾಶಕ ಸಿಂಪಡಿಸಿ ಹಾಳು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಅ.9ರ ರಾತ್ರಿ ಬ್ಯಾಟರಿ ಹಿಡಿದು ಯಾರೋ ಏನು ಮಾಡುತ್ತಿದ್ದರು. ಅವರೇ ಈ ಕೃತ್ಯ ಎಸಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ನಾಲ್ವರ ಮೇಲೆ ಶಂಕೆ ವ್ಯಕ್ತಪಡಿಸಿ ದೂರು ನೀಡಲಾಗಿದೆ. ಕೃತ್ಯ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಗರ ಠಾಣೆ ಪೊಲೀಸರನ್ನು ಬ್ಲಾನಿ ಸಿಕ್ವೇರಾ ಒತ್ತಾಯಿಸಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಶಾಸಕ ಆರಗ ಜ್ಞಾನೇಂದ್ರ ಭೇಟಿ ನೀಡಿ ಪರಿಶೀಲಿಸಿದರು.