ಎನ್.ಆರ್.ಪುರ: ಗ್ರಾಮೀಣ ಕ್ರೀಡೆಗೆ ಪ್ರೋತ್ಸಾಹ ಅಗತ್ಯ ಎಂದು ಬೆಳ್ಳೂರು ಸರ್ಕಾರಿ ಪ್ರೌಢಶಾಲೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಆರ್.ವೆಂಕಟರಮಣಯ್ಯ ತಿಳಿಸಿದರು.
ಸೋಮವಾರ ಬೆಳ್ಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಖೋ ಖೋ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ. ಮಕ್ಕಳು ಪಠ್ಯೇತರ ಚಟುವಟಿಕೆಗಳಲ್ಲೂ ಆಸಕ್ತಿ ಹೊಂದಿರಬೇಕು ಎ ಂದರು.
ಸೀತೂರು ಗ್ರಾಪಂ ಅಧ್ಯಕ್ಷ ಎನ್.ಪಿ.ರಮೇಶ್ ಮಾತನಾಡಿ, ಕ್ರೀಡೆಯಲ್ಲಿ ಸೋಲು-ಗೆಲುವಿಗಿಂತ ಸ್ಪರ್ಧಿಸುವುದು ಮುಖ್ಯ ಎಂದರು.
ಸೀತೂರು ಗ್ರಾಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಉಮೇಶ್ ಮಾತನಾಡಿ, ಈ ಹಿಂದೆ ಪ್ರತಿಯೊಬ್ಬರೂ ಶ್ರಮವಹಿಸಿ ದೈಹಿಕ ಕೆಲಸ ಮಾಡುತ್ತಿದ್ದರು. ಪ್ರಸ್ತುತ ದೈಹಿಕ ಕೆಲಸ ಕಡಿಮೆಯಾಗಿದ್ದು ಹೆಚ್ಚಾಗಿ ಮೊಬೈಲ್, ಟಿವಿ ನೋಡುತ್ತ್ತ ಕಾಲ ಕಳೆಯುತ್ತಾರೆ. ಮಕ್ಕಳು ಶಿಕ್ಷಣದ ಜತೆಗೆ ಕ್ರೀಡೆಯಲ್ಲೂ ಭಾಗವಹಿಸಬೇಕು ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು ಶ್ರಮದಾನದ ಮೂಲಕ ಕ್ರೀಡಾಂಗಣ ಸ್ವಚ್ಛಗೊಳಿಸಿದರು. ಖೋ ಖೋ ಪಂದ್ಯಾವಳಿ ಬಾಲಕರ ವಿಭಾಗದಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆ ಮಕ್ಕಳು ಪ್ರಥಮ, ಕರ್ನಾಟಕ ಪಬ್ಲಿಕ್ ಸ್ಕೂಲ್ ಮಕ್ಕಳು ದ್ವಿತೀಯ ಸ್ಥಾನ ಪಡೆದರು. ಬಾಲಕಿಯರ ವಿಭಾಗದ ಖೋ ಖೋ ಪಂದ್ಯಾವಳಿಯಲ್ಲಿ ಶೆಟ್ಟಿಕೊಪ್ಪ ಬರ್ಕ್‌ಮನ್ ಪ್ರೌಢಶಾಲೆ ಮಕ್ಕಳು ಪ್ರಥಮ ಹಾಗೂ ಮೂಡಬಾಗಿಲು ಜ್ಞಾನ ಗಂಗೋತ್ರಿ ಪ್ರೌಢಶಾಲೆ ಮಕ್ಕಳು ದ್ವಿತೀಯ ಸ್ಥಾನ ಪಡೆದರು.
ಗ್ರಾಪಂ ಮಾಜಿ ಸದಸ್ಯ ಎಚ್.ಇ.ಮಹೇಶ್, ಕೊನೋಡಿ ಪಂಚವಟಿ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಬಿ.ಎಸ್.ಮಂಜುನಾಥ್, ಬೆಳ್ಳೂರು ಪ್ರೌಢಶಾಲೆ ಅಭಿವೃದ್ಧಿ ಸಮಿತಿ ಸದಸ್ಯ ಸದಾಶಿವ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟದ ಅಧ್ಯಕ್ಷ ಶೇಖರ ಶೆಟ್ಟಿ, ಮುಖ್ಯಶಿಕ್ಷಕಿ ಸುಧಾ, ಅರ್ಚನಾ, ಅನಂತಪದ್ಮನಾಭ, ದಯಾನಂದ ಇದ್ದರು.