ಬೀರೂರಿನ ಶಾಸಕರ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಬೀರೂರು ವಲಯ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟವನ್ನು ಎಸ್‌ಡಿಎಂಸಿ ಅಧ್ಯಕ್ಷ ಚಿರಾಗ್ ಮೆಹೆತಾ ಉದ್ಘಾಟಿಸಿದರು. 
ನ್ಯೂಸ್

ಮಾನಸಿಕ, ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ

ಬೀರೂರು: ವಿದ್ಯಾರ್ಥಿಗಳು ಕೇವಲ ಪಠ್ಯಗಳ ಅಭ್ಯಾಸಕ್ಕೆ ಮಾತ್ರ ಸೀಮತವಾಗದೆ ಕ್ರೀಡಾಕೂಟಗಳಲ್ಲಿ ತೊಡಗಿಸಿಕೊಳ್ಳಬೇಕು. ಮಾನಸಿಕ ಮತ್ತು ದೈಹಿಕ ಸದೃಢತೆಗೆ ಕ್ರೀಡಾಕೂಟಗಳು ಸಹಕಾರಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಗಂಗಾಧರಪ್ಪ ತಿಳಿಸಿದರು.
ಶಾಸಕರ ಮಾದರಿ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಶುಕ್ರವಾರ ಬೀರೂರು ವಲಯ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ಮಾತಾಡಿ, ಕ್ರೀಡೆ ಮಕ್ಕಳ ಭವಿಷ್ಯದ ಅವಿಭಾಜ್ಯ ಅಂಗ. ಪ್ರಾಥಮಿಕ ಮಟ್ಟದಲ್ಲೇ ಕ್ರೀಡೆಗಳಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು. ಜಾಗತೀಕರಣದಿಂದ ಗ್ರಾಮೀಣ ಕ್ರೀಡೆಗಳು ದೂರವಾಗಿ, ಟಿವಿ, ಮೊಬೈಲ್ ಹಾವಳಿ ಹೆಚ್ಚಾಗಿದೆ. ಇದರಿಂದ ಬೆಳೆಯುವ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಪಾಲಕರು ಮತ್ತು ಶಿಕ್ಷಕರು ಮಕ್ಕಳ ಭವಿಷ್ಯ ಉಜ್ವಲಗೊಳಿಸಲು ಶ್ರಮಿಸಬೇಕು ಎಂದರು.
ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಆರ್.ಮೋಹನ್ ಕುಮಾರ್ ಮಾತನಾಡಿ, ಈ ಶಾಲೆ ಬೀರೂರು ಶೈಕ್ಷಣಿಕ ವಲಯದಲ್ಲಿಯೇ ಮಾದರಿ ಶಾಲೆಯಾಗಿದೆ. ಇಲ್ಲಿರುವ ಹಳೇ ವಿದ್ಯಾರ್ಥಿಗಳ ಸಂಘ ಹಾಗೂ ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರ ಸಹಕಾರದಿಂದ ಎಲ್‌ಕೆಜಿಯಿಂದಲೇ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ. ಪ್ರತಿಯೊಂದು ಶಾಲೆಯಲ್ಲಿಯೂ ಈ ರೀತಿ ಪಾಲಕರು ಸರ್ಕಾರಿ ಶಾಲೆಗಳಿಗೆ ಪ್ರೋತ್ಸಾಹ ನೀಡಿದರೆ ಮುಚ್ಚಿರುವ ಶಾಲೆಗಳನ್ನು ಮತ್ತೆ ತೆರಸಬಹುದು. ಪಾಲಕರು ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆಗಳ ಉಳಿವಿಗೆ ಹೆಚ್ಚಿನ ಗಮನಹರಿಸಬೇಕು ಎಂದರು.
ಕ್ರೀಡಾಕೂಟದಲ್ಲಿ ಬೀರೂರು ವಲಯದ 24 ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದವು. ಖೋ ಖೋ, ವಾಲಿಬಾಲ್, ಥ್ರೋಬಾಲ್, ಕಬಡ್ಡಿ, 100 ಮೀ, 200ಮೀ ಮತ್ತು 400 ಮೀಟರ್ ಓಟ, ಗುಂಡು ಮತ್ತು ಚಕ್ರ ಎಸೆತ, ಎತ್ತರ ಮತ್ತು ಉದ್ದ ಜಿಗಿತ ಹೀಗೆ ವಿವಿಧ ಕ್ರೀಡೆಗಳಲ್ಲಿ ನೂರಾರು ಮಕ್ಕಳು ಭಾಗವಹಿಸಿದ್ದರು.
ಕೆ.ಪಿ.ವೆಂಕಟೇಶ್ ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿದರು. ಪುರಸಭೆ ಸದಸ್ಯೆ ಮೀನಾಕ್ಷಮ್ಮ, ಎಸ್‌ಡಿಎಂಸಿ ಅಧ್ಯಕ್ಷ ಚಿರಾಗ್ ಮೆಹೆತಾ, ಕ್ಷೇತ್ರ ಸಮನ್ವಯ ಅಧಿಕಾರಿ ಶೇಖರಪ್ಪ, ಶಿಕ್ಷಕ ಎಸ್.ಸಿ.ಜಯಣ್ಣ, ಶಿಕ್ಷಕರ ಸಂಘದ ಅಧ್ಯಕ್ಷ ಭೈರೇಗೌಡ, ತಾಲೂಕು ಶಿಕ್ಷಕರ ಸಂಘ ಮಲ್ಲಿಕಾರ್ಜುನ್, ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಉಪಾಧ್ಯಕ್ಷ ಜಿ.ಜೆ.ಜಗದೀಶ್, ಮಹೇಶ್.ಎನ್.ಅಶೋಕ್. ಆರ್.ಟಿ, ಜಯದೇವಪ್ಪ, ಈಸಿಒಗಳಾದ ವಿ.ಎನ್.ಹಿರೇಮಠ್, ಶಂಕರಪ್ಪ, ಗಂಗಪ್ಪ, ಹಳೇ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ಗುರುಪ್ರಸಾದ್ ಮತ್ತು ಎಸ್‌ಡಿಎಂಸಿ ಸದಸ್ಯರಾದ ಬಿ.ಎನ್.ಪ್ರಸನ್ನ ಕುಮಾರ್, ಶಬ್ಬೀರ್ ಅಹಮ್ಮದ್, ರೋಹಿಣಿ, ಸೀಮಾ, ಪೂರ್ಣಿಮಾ, ಅಯ್ಯೂಬ್ ಅಹಮ್ಮದ್, ಪ್ರಿಯಾಂಕ ಮಣಿ ಇದ್ದರು.