ಬಾಳೆಹೊನ್ನೂರಿನಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಪಿಯು ಕಾಲೇಜುಗಳ ಕ್ರೀಡಾಕೂಟವನ್ನು ಶಾಸಕ ಟಿ.ಡಿ.ರಾಜೇಗೌಡ ಉದ್ಘಾಟಿಸಿದರು. ಗುಣನಾಥ ಸ್ವಾಮೀಜಿ, ಸದಾಶಿವ, ವೈ.ಎ.ಸುರೇಶ್, ಎಂ.ಕೆ.ಸುಂದರೇಶ್, ಎಂ.ಎಸ್.ಚನ್ನಕೇಶವ ಇದ್ದರು.  
ನ್ಯೂಸ್

ದೈಹಿಕ, ಮಾನಸಿಕ ಸ್ಥಿರತೆಗೆ ಕ್ರೀಡೆ ಪೂರಕ

ಬಾಳೆಹೊನ್ನೂರು: ಕ್ರೀಡೆಯಲ್ಲಿ ಸತತವಾಗಿ ತೊಡಗಿಸಿಕೊಂಡು ಸಾಧನೆ ಮಾಡಿ ವಿಶ್ವದ ಗಮನ ಸೆಳೆಯಲು ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳಿವೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಬಿಜಿಎಸ್ ವಿಜ್ಞಾನ, ವಾಣಿಜ್ಯ ಪಿಯು ಕಾಲೇಜಿನಲ್ಲಿ ಶನಿವಾರ ನಡೆದ ಎನ್.ಆರ್.ಪುರ ತಾಲೂಕು ಮಟ್ಟದ ಪಿಯು ಕಾಲೇಜುಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಕ್ರೀಡಾ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡರೆ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಹೊರಹೊಮ್ಮಿಸಲು ಸಾಧ್ಯ. ಕ್ರೀಡೆಯಲ್ಲಿ ನಿರಂತರ ಪಾಲ್ಗೊಳ್ಳುವುದರಿಂದ ಕ್ರೀಡಾಪಟುಗಳನ್ನು ಅಭಿಮಾನಿಗಳು ಗುರುತಿಸುತ್ತಾರೆ. ಕ್ರೀಡಾ ಚಟುವಟಿಕೆಗಳಿಂದ ಆರ್ಥಿಕ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳಲ್ಲಿ ಮಾತ್ರ ಪಾಂಡಿತ್ಯ ಹೊಂದಲು ಸಾಧ್ಯವಿಲ್ಲ ಎಂಬುದನ್ನು ಅರಿತ ಸರ್ಕಾರ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡುತ್ತಿದೆ. ಪಠ್ಯೇತರ ಚಟುವಟಿಕೆ ಹಾಗೂ ವಿದ್ಯಾರ್ಥಿಗಳ ಸರ್ವ ಪ್ರಯತ್ನದಿಂದ ಬುದ್ಧಿವಂತರಾಗಲು ಸಾಧ್ಯವಿದೆ. ಕ್ರೀಡೆ ವ್ಯಕ್ತಿಯ ಆರೋಗ್ಯ ವೃದ್ಧಿಗೂ ಪೂರಕವಾಗಿದ್ದು ದೈಹಿಕ, ಮಾನಸಿಕ ಸ್ಥಿರತೆಗೆ ಪೂರಕವಾಗಿದೆ ಎಂದರು.
ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಕ್ರಾಂತಿಕಾರಕ ಬದಲಾವಣೆ ತಂದಿವೆ. ಮಠ ಮಂದಿರಗಳು, ಚರ್ಚ್, ಮಸೀದಿಗಳು ಸಾಕಷ್ಟು ಕೊಡುಗೆ ನೀಡಿವೆ. ಕ್ರೀಡಾಕೂಟಗಳಲ್ಲಿ ಗೆದ್ದವರು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿ ಕ್ಷೇತ್ರಕ್ಕೆ ಹೆಗ್ಗಳಿಕೆ ತರಬೇಕು. ಸೋತವರು ಎಲ್ಲಿ ಎಡವಿದ್ದೇವೆ ಎಂದು ಅರಿತು ಮುಂದೆ ಸಾಗಿ ಕ್ರೀಡೆಯಲ್ಲಿ ಸಾಧನೆ ಮಾಡಬೇಕು ಎಂದರು.
ಶೃಂಗೇರಿ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ ಆಶೀರ್ವಚನ ನೀಡಿ, ದೇಶದ ಹಿರಿಮೆ, ಗರಿಮೆ ವಿಶ್ವಾದ್ಯಂತ ಪ್ರಚಾರ ಮಾಡಲು ಕ್ರೀಡೆ ಒಂದು ಉತ್ತಮ ಮಾಧ್ಯಮ. ಕ್ರೀಡೆಯಲ್ಲಿ ಬೆಳೆಯುವ ಪ್ರಯತ್ನ ಮಾಡಿದರೆ ದೇಶಕ್ಕೆ ಕೀರ್ತಿ ತರಬಹುದು. ವಿದ್ಯಾರ್ಥಿಗಳಲ್ಲಿರುವ ಕ್ರೀಡಾ ಪ್ರತಿಭೆ ಹೊರತರುವುದು ಶಿಕ್ಷಕರು, ಪಾಲಕರ ಜವಾಬ್ದಾರಿಯಾಗಿದೆ. ಕ್ರೀಡಾಮನೋಭಾವದಿಂದ ಸ್ಪರ್ಧಿಸಿ ಕ್ರೀಡಾ ನಿಯಮಗಳನ್ನು ಎತ್ತಿಹಿಡಿಯಬೇಕು ಎಂದು ಹೇಳಿದರು.
ಬಿ.ಕಣಬೂರು ಗ್ರಾಪಂ ಅಧ್ಯಕ್ಷ ಸದಾಶಿವ, ಉಪಾಧ್ಯಕ್ಷೆ ರಂಜಿತಾ, ಸದಸ್ಯರಾದ ರವಿಚಂದ್ರ, ಕವಿತಾ, ಇಬ್ರಾಹಿಂ ಶಾಫಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಎಂ.ಕೆ.ಸುಂದರೇಶ್, ಎಂ.ಎಸ್.ಚನ್ನಕೇಶವ, ಕೆ.ಎನ್.ಮರಿಗೌಡ, ಟಿ.ಎಂ.ಉಮೇಶ್ ಕಲ್ಮಕ್ಕಿ, ಪ್ರಾಚಾರ್ಯ ಡಾ. ವೈ.ಎ.ಸುರೇಶ್, ರೋಟರಿ ಅಧ್ಯಕ್ಷ ಎ.ಆರ್.ಸುರೇಂದ್ರ, ಲಯನ್ಸ್ ಅಧ್ಯಕ್ಷ ಎಂ.ಡಿ.ಶಿವರಾಮ್, ಪ್ರಮುಖರಾದ ಕೆ.ಟಿ.ವೆಂಕಟೇಶ್, ಮಹಮ್ಮದ್ ಹನ್ೀ, ಬಿ.ಎನ್.ಸೋಮೇಶ್, ಕೆ.ಆರ್.ಬೂದೇಶ್, ಬಿಎಚ್.ಕೃಷ್ಣಮೂರ್ತಿ, ಕಟ್ಟೇಗೌಡ, ರಿಚರ್ಡ್ ಮೆನೇಜಸ್ ಮತ್ತಿತರರು ಇದ್ದರು.