ಭದ್ರಾವತಿ: ಚೆಸ್, ಯೋಗಾಭ್ಯಾಸ ಮಕ್ಕಳ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ವೃದ್ಧಿಸಲು ಸಹಕಾರಿ ಎಂದು ಬಿಇಒ ಎ.ಕೆ.ನಾಗೇಂದ್ರಪ್ಪ ಹೇಳಿದರು.
ನಗರದ ಲಯನ್ಸ್ ಕ್ಲಬ್ ಶುಗರ್‌ಟೌನ್ ಸಭಾಂಗಣದಲ್ಲಿ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ 14 ಹಾಗೂ 17 ವರ್ಷದೊಳಗಿನವರ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ ಬಾಲಕಿಯರ ಜಿಲ್ಲಾ ಮಟ್ಟದ ಅಂತರ್ ಶಾಲಾ ಚೆಸ್ ಮತ್ತು ಯೋಗಾಸನ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ಓದಿನೊಂದಿಗೆ ಕ್ರೀಡಾ ಕ್ಷೇತ್ರದಲ್ಲೂ ತೊಡಗಿಸಿಕೊಳ್ಳಬೇಕು. ಯೋಗಾಭ್ಯಾಸ, ಆಟೋಟಗಳಲ್ಲಿ ತೊಡಗುವುದರಿಂದ ಬುದ್ಧಿ ಚುರುಕಾಗುತ್ತದೆ. ಸ್ಪರ್ಧಾತ್ಮಕ ಯುಗದಲ್ಲಿ ದೇಹ ಸದೃಢತೆ ಹಾಗೂ ಮನೋಸ್ಥೈರ್ಯವೂ ಅಗತ್ಯ. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ನಿರಂತರ ಪರಿಶ್ರಮ ಮುಖ್ಯ. ಹಂತ ಹಂತವಾಗಿ ಪ್ರಗತಿ ಸಾಧಿಸುವ ಮೂಲಕ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟಗಳಲ್ಲಿ ಪಾಲ್ಗೊಳ್ಳಬೇಕು ಎಂದರು.
ಲಯನ್ಸ್ ಕ್ಲಬ್ ಶುಗರ್‌ಟೌನ್ ಅಧ್ಯಕ್ಷ ಉಮೇಶ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಪ್ರಕಾಶ್, ತಾಲೂಕು ಸಮನ್ವಯ ಅಧಿಕಾರಿ ಪಂಚಾಕ್ಷರಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಭು, ಮಲ್ಲಿಕಾರ್ಜುನ್, ಬಿ.ಕೆ.ಜಗನ್ನಾಥ್, ದಾರತಿ, ಗುರುರಾಜ್, ಯೋಗೇಶ್, ತಮ್ಮೇಗೌಡ, ಶ್ರೀನಿವಾಸ್ ಇತರರಿದ್ದರು. ವಿವಿಧ ತಾಲೂಕುಗಳ 280 ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಚೆಸ್ ಹಾಗೂ ಯೋಗ ಸ್ಪರ್ಧೆಯಲ್ಲಿ 40 ಮಕ್ಕಳು ರಾಜ್ಯ ಮಟ್ಟಕ್ಕೆ ಆಯ್ಕೆಯಾದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.