ನ್ಯೂಸ್

ಬ್ರಹ್ಮಚರ್ಯವಿಲ್ಲದ ಅಧ್ಯಾತ್ಮ ವ್ಯರ್ಥ

ಅಜ್ಞಾನದ ನಾಶ, ಜ್ಞಾನ ವೃದ್ಧಿಯನ್ನು ಉತ್ತಮ ಗ್ರ›ಂಥಗಳ ಅಧ್ಯಯನದಿಂದ ಹೊಂದಬಹುದು. ಇಂದ್ರಿಯ, ಮನಸ್ಸು, ಬುದ್ಧಿ, ಭಾವನೆಗಳಿಗೆ ತರಬೇತಿ ಅವಶ್ಯಕ. ಅದನ್ನೇ ನೀತಿಶಾಸ್ತ್ರ, ವೇದ, ಉಪನಿಷತ್, ಶರಣರ ವಚನ, ದಾಸರ ಪದಗಳು ತಿಳಿಸುತ್ತವೆ.

ಬ್ರಹ್ಮನನ್ನು ಅನುಸರಿಸುವುದು ಎಂದರೆ ಭಗವಂತನ ದರ್ಶನ, ಸತ್ಯದರ್ಶನ, ಆತ್ಮದರ್ಶನವನ್ನು ಪಡೆಯವುದು. ಅದಕ್ಕೆ ನಾವು ಪವಿತ್ರ ಜೀವನವನ್ನು ನಡೆಸದೇ ಇದ್ದರೆ, ಅತ್ಯಂತ ಪವಿತ್ರಾತ್ಮನಾದ ಭಗವಂತನನ್ನು ಕಾಣುವುದು ಹೇಗೆ ಸಾಧ್ಯ?. ಉತ್ತಮ ಚಿಂತನೆ, ಪವಿತ್ರ ಜೀವನ, ಶಿಸ್ತು, ಮನೋಸಂಯಮ, ವಿವೇಕಯುಕ್ತ ಜೀವನ - ಇವು ಆಧ್ಯಾತ್ಮಿಕ ಜೀವನದ ಅಡಿಪಾಯ. ಮನೆಯ ಅಡಿಪಾಯ ಸರಿಯಾಗಿ ಇಲ್ಲದಿದ್ದರೆ, ಮನೆಯ ಗೋಡೆಗಳನ್ನು ಹಾಗೂ ಎಷ್ಟೇ ಅಲಂಕಾರಿಕ ವಸ್ತುಗಳಿಂದ ಮನೆಯನ್ನು ಸುಂದರವಾಗಿಸಿದರೂ ಆ ಮನೆಯು ಹೆಚ್ಚು ಸಮಯ ನಿಲ್ಲಲಾರದು. ಅಂತಹ ಮನೆಯು ಶೀಘ್ರದಲ್ಲೇ ಬಿದ್ದುಹೋಗುತ್ತದೆ. ಅದೇ ರೀತಿಯಲ್ಲಿ ಬ್ರಹ್ಮಚರ್ಯವಿಲ್ಲದ ಆಧ್ಯಾತ್ಮಿಕ ಜೀವನ ಕೂಡ. ಆದ್ದರಿಂದ ಅಧ್ಯಾತ್ಮದ ಹೆಸರಿನಲ್ಲಿ ಇಂದು ಅನೇಕ ಢಾಂಭಿಕರನ್ನು ನಾವು ಸಮಾಜದಲ್ಲಿ ಕಾಣುತ್ತಿರುವುದು.

ಆಹಾರ ನಿದ್ರಾ ಭಯ ಮೈಥುನಂ ಚ

ಸಮಾನಮೇತತ್ ಪಶುಭಿರ್ನರಾಣಾಮ್ |

ಧಮೋ ಹಿ ತೇಷಾಮಧಿಕೋ ವಿಶೇಷೋ

ಧಮೇಣ ಹೀನಃ ಪಶುಭಿಃ ಸಮಾನಃ ||

ಆಹಾರ, ನಿದ್ರೆ, ಭಯ, ಮೈಥುನ ಇವು ಮಾನವ ಮತ್ತು ಪ್ರಾಣಿಗಳಲ್ಲಿ ಸಮಾನವಾಗಿರುತ್ತವೆ. ಮಾನವನಲ್ಲಿ ಧರ್ಮದ ಆಚರಣೆ ಅಥವಾ ಪ್ರಜ್ಞೆ ವಿಶೇಷ. ಧರ್ಮಹೀನ ಮನುಷ್ಯನು ಪ್ರಾಣಿಗೆ ಸಮ. ಆದ್ದರಿಂದ ನಾವು ವಿವೇಕಹೀನ ಜೀವನ ನಡೆಸಿದರೆ ಅದು ಮಾನವ ದೇಹವನ್ನು ಹೊಂದಿರುವ ಪಶು ಜೀವನವನ್ನು ನಡೆಸುತ್ತಿದೇವೆ ಎಂದರ್ಥ. ಬ್ರಹ್ಮಚರ್ಯುಣ ತಪಸಾ ದೇವಾ ಮೃತ್ಯುಮಪಾಘ್ನತ | (ಸಾಮವೇದ 11.05.19) - ಬ್ರಹ್ಮಚರ್ಯ ಪಾಲನೆಯಿಂದ ಅಥವಾ ತಪಸ್ಸಿನಿಂದ ದೇವತೆಗಳು ಮೃತ್ಯುವನ್ನು ಜಯಿಸಿದರು.