ಚೌಳಹಿರಿಯೂರು: ಮನುಷ್ಯ ಅಹಂಕಾರ, ಕೋಪ ತ್ಯಜಿಸಿ ಅಧ್ಯಾತ್ಮ ಚಿಂತನೆಯಿಂದ ಶಿವಶರಣನಾಗಿ ಜೀವನ ಸಾರ್ಥಕಪಡಿಸಿಕೊಳ್ಳಲು ಸಾಧ್ಯ ಎಂದು ಪ್ರಾಧ್ಯಾಪಕ ಎಂ.ಹನುಮಂತಪ್ಪ ತಿಳಿಸಿದರು.
ಗ್ರಾಮದಲ್ಲಿ ತಾಲೂಕು-ಹೋಬಳಿ ಕನ್ನಡ ಸಾಹಿತ್ಯ ಪರಿಷತ್‌ನಿಂದ ಏರ್ಪಡಿಸಿದ್ದ ಶ್ರಾವಣ ಸಂಜೆ ಕಾರ್ಯಕ್ರಮದಲ್ಲಿ ಅಕ್ಕಮಹಾದೇವಿ ಕುರಿತು ಉಪನ್ಯಾಸ ನೀಡಿದರು.
ಅಕ್ಕಮಹಾದೇವಿ ಕನ್ನಡದ ಪ್ರಥಮ ಮಹಿಳಾ ಕವಿಯತ್ರಿ. ಅಕ್ಕಮಹಾದೇವಿ ಅವರನ್ನು ಶರಣ ಚಳವಳಿಯ ಪ್ರಮುಖರಾಗಿ, ಸ್ವಾಭಿಮಾನದ ಪ್ರತೀಕ, ಸ್ತ್ರೀವಾದಿ ಚಳವಳಿಯ ನಿಜವಾದ ಪ್ರತಿಪಾದಕಿಯಾಗಿ ಹೀಗೆ ಹಲವು ರೀತಿ ಗುರುತಿಸಬಹುದು. ಚಿಕ್ಕ ವಯಸ್ಸಿನಲ್ಲೇ ಸಕಲ ಸುಖವನ್ನು ತ್ಯಜಿಸಿದ ಅಕ್ಕ, ಎದುರಿಸಿದ ಪರೀಕ್ಷೆಗಳು ಬಹಳಷ್ಟು. ಜೀವನದ ಸಂಕಷ್ಟಗಳನ್ನು ಆತ್ಮಸ್ಥೈರ್ಯದಿಂದ ಎದುರಿಸಿ ಶಿವನ ಅನುಗ್ರಹ ಪಡೆದ ಸಾಧಕ ಮಹಿಳೆ ಎಂದರು.
ಗ್ರಾಪಂ ಅಧ್ಯಕ್ಷೆ ಅನಿತಾ ಮಲ್ಲೇಶಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ನಿವೃತ್ತ ಶಿಕ್ಷಕ ಜಿ.ಬಿ.ಓಂಕಾರಪ್ಪ, ಕಲಾವಿದ ಮಲ್ಲಿಕಾರ್ಜುನ, ಮಾಜಿ ಗ್ರಾಪಂ ಸದಸ್ಯ ಬಿ.ಕೆ.ನಂಜುಂಡಪ್ಪ, ರಾಜ್ಯ ಪ್ರಶಸ್ತಿ ಪುರಸ್ಕೃತ ಭೋಗಪ್ಪ, ಬಿ.ಕೆ.ಎನ್.ರೂಪಾ, ನಿವೃತ್ತ ಶಿಕ್ಷಕ ಚಂದ್ರಪ್ಪ, ಕಸಾಪ ಹೋಬಳಿ ಅಧ್ಯಕ್ಷ ಬಸವರಾಜ್, ಪ್ರಮುಖರಾದ ಅಣಿಗೆರೆ ಬಸವರಾಜ್, ಆಶಾ ಇತರರಿದ್ದರು.