ಕಾಲಿವುಡ್ ಸೂಪರ್ಸ್ಟಾರ್ ರಜಿನಿಕಾಂತ್ಗೆ ದೇಶ, ವಿದೇಶಗಳಲ್ಲಿ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಇಂತಹ ರಜಿನಿಕಾಂತ್ ಸಾರ್ವಜನಿಕವಾಗಿ ಓಡಾಡುವುದು ಕಷ್ಟ. ಅವರು ಇಂತಹ ಜಾಗಕ್ಕೆ ಬರುತ್ತಾರೆ ಅಂತ ತಿಳಿದ ತಕ್ಷಣ ಅಲ್ಲಿ ಕ್ಷಣಾರ್ಧದಲ್ಲೇ ನೂರಾರು ಜನ ಸೇರುತ್ತಾರೆ. ಆದರೆ, ಸ್ಟಾರ್ಡಂಗಿಂತಲೂ ಮಿಗಿಲಾದುದು ಆಧ್ಯಾತ್ಮ ಎನ್ನುತ್ತಾರೆ ರಜಿನಿ. ಅದಕ್ಕೆ ಕಾರಣ, ಅವರಿಗೆ ಆದ ಅನುಭವವಂತೆ.
ಇತ್ತೀಚೆಗಷ್ಟೆ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ 70ನೇ ಹುಟ್ಟುಹಬ್ಬ ಆಚರಿಸಲು ಆರ್ಟ್ ಆಫ್ ಲಿವಿಂಗ್ಗೆ ಆಗಮಿಸಿದ್ದ ಅವರು, "ಹಿಮಾಲಯದ ಬಳಿಕ ಈ ಆಶ್ರಮ ನನಗೆ ಎರಡನೇ ಅಚ್ಚುಮೆಚ್ಚಿನ ತಾಣ. ಮೊದಲ ಬಾರಿ ಕೇವಲ 2 ದಿನ ಇಲ್ಲಿರಲು ಬಂದಿದ್ದವನು, 15 ದಿನ ಇದ್ದೆ. ಆ ಸಮಯದಲ್ಲಿ ಗುರೂಜಿ ಪೂಜೆಗೆ ಬರಲು ತಿಳಿಸಿದರು. ಅಂದು ವಿಶೇಷ ದಿನವಾದ ಕಾರಣ ಎಂದಿಗಿಂತ ಹೆಚ್ಚು ಜನ ಸೇರಿರುತ್ತಾರೆ. ನನ್ನನ್ನು ನೋಡಿ ಫೋಟೋ, ಆಟೋಗ್ರಾಫ್ ಬೇಕು ಅಂತ ಸುತ್ತುವರಿಯಬಹುದು. ಹೀಗಾಗಿ ನನ್ನಿಂದ ಪೂಜೆಗೆ ಸಮಸ್ಯೆ ಆಗಬಹುದು ಅಂತ ಮೊದಲು ಹಿಂಜರಿದಿದ್ದೆ. ಆದರೆ, ಪೂಜೆಗೆ ಹೋದಾಗ ಫೋಟೋ, ಆಟೋಗ್ರಾಫ್ ಇರಲಿ ಒಬ್ಬರೂ ನನ್ನನ್ನು ಕಣ್ಣೆತ್ತಿಯೂ ನೋಡಲಿಲ್ಲ. ಈ ಅನುಭವ ನನ್ನ ಅಹಂಅನ್ನು ಸಂಪೂರ್ಣವಾಗಿ ನೆಲಸಮ ಮಾಡಿತು. ಇದು ಹೇಗೆ ಸಾಧ್ಯ ಅಂತ ಡಿಸ್ಟರ್ಬ್ ಕೂಡ ಆಗಿದ್ದೆ. ಆದರೆ, ಅಂದು ನನಗೆ ಅಧ್ಯಾತ್ಮದ ನಿಜವಾದ ಶಕ್ತಿಯ ಅರಿವಾಯಿತು. ಬೇರೆಲ್ಲ ಬಗೆಯ ಸ್ಟಾರ್ಡಂಗಳು ಬರುತ್ತವೆ, ಹೋಗುತ್ತವೆ. ಆದರೆ, ಅಧ್ಯಾತ್ಮದ ಸ್ಟಾರ್ಡಂ ಎಲ್ಲಕ್ಕಿಂತ ಅತ್ಯುನ್ನತವಾದುದು. ಅದಕ್ಕೆ ಕೊನೆಯೇ ಇಲ್ಲ' ಎಂದಿದ್ದಾರೆ. ಸದ್ಯ ಅವರ ಭಾಷಣದ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.