ನವದೆಹಲಿ: ಸ್ಪೈಸ್ ಜೆಟ್ ಪೈಲಟ್ ಓರ್ವನಿಗೆ ಕರೊನಾ ವೈರಸ್ ತಗುಲಿದೆ. ಆದರೆ ಈ ಪೈಲಟ್ ಮಾರ್ಚ್ ಪ್ರಾರಂಭದಿಂದಲೂ ಯಾವುದೇ ಅಂತಾರಾಷ್ಟ್ರೀಯ ವಿಮಾನದಲ್ಲಿ ಕಾರ್ಯನಿರ್ವಹಿಸಿರಲಿಲ್ಲ ಎಂದು ವಿಮಾನಯಾನ ಸಂಸ್ಥೆ ಸ್ಪಷ್ಟಪಡಿಸಿದೆ.
ಸ್ಪೈಸ್ಜೆಟ್ನಲ್ಲಿ ಪ್ರಥಮ ಕೋವಿಡ್-19 ಪ್ರಕರಣ ಪತ್ತೆಯಾಗಿದೆ. ನಮ್ಮ ಓರ್ವ ಪೈಲಟ್ಗೆ ಸೋಂಕು ಇರುವುದು ದೃಢಪಟ್ಟಿದೆ. ಮಾರ್ಚ್ ಪ್ರಾರಂಭದಿಂದಲೂ ಯಾವುದೇ ಅಂತಾರಾಷ್ಟ್ರೀಯ ವಿಮಾನದಲ್ಲೂ ಕಾರ್ಯ ನಿರ್ವಹಣೆ ಮಾಡಿರಲಿಲ್ಲ. ಹಾಗಿದ್ದಾಗಿ ಕೂಡ ಸೋಂಕಿನ ಲಕ್ಷಣ ಕಾಣಿಸಿಕೊಂಡಿದ್ದರಿಂದ ತಪಾಸಣೆಗೆ ಒಳಪಡಿಸಲಾಗಿತ್ತು. ಮಾ.28ರಂದು ವೈದ್ಯಕೀಯ ವರದಿ ಬಂದಿದ್ದು, ಕರೊನಾ ಇರುವುದು ದೃಢಪಟ್ಟಿದೆ ಎಂದು ಸ್ಪೈಸ್ಜೆಟ್ನ ವಕ್ತಾರ ತಿಳಿಸಿದ್ದಾರೆ.
ಈ ಪೈಲಟ್ ಕೊನೇದಾಗಿ ಮಾರ್ಚ್ 21ರಂದು ಚೆನ್ನೈ-ದೆಹಲಿ ವಿಮಾನದಲ್ಲಿ ಕಾರ್ಯ ನಿರ್ವಹಿಸಿದ್ದ. ಅವತ್ತಿನಿಂದಲೇ ಆತನನ್ನು ಕ್ವಾರೆಂಟೈನ್ನಲ್ಲಿ ಇಡಲಾಗಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಆ ವಿಮಾನದ ಎಲ್ಲ ಸಿಬ್ಬಂದಿ, ಪೈಲಟ್ ಸಂಪರ್ಕಕ್ಕೆ ಹೋಗಿರುವ ಮಂದಿಯನ್ನೆಲ್ಲ ಕ್ವಾರೆಂಟೈನ್ನಲ್ಲಿ ಇಡಲಾಗಿದೆ. ಮುಂದಿನ 14 ದಿನ ಮನೆಯಲ್ಲೇ ಇರುವಂತೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್)