ನ್ಯೂಸ್

ಹೂಡಿಕೆ ಉತ್ತೇಜನಕ್ಕೆ ವಿಶೇಷ ಟಾಸ್ಕ್​ಫೋರ್ಸ್; ಕರೊನೋತ್ತರ ಪರಿಸ್ಥಿತಿಯ ಸದ್ಬಳಕೆಗೆ ರಾಜ್ಯ ಸರ್ಕಾರ ಸಜ್ಜು, ಉದ್ಯಮಗಳ ಆಕರ್ಷಣೆಗೆ ತಂತ್ರ

ಬೆಂಗಳೂರು: ಸಾಂಕ್ರಾಮಿಕ ಕರೊನಾ ಪಿಡುಗು ಜಾಗತಿಕ ಉದ್ಯಮ, ವ್ಯವಹಾರದ ನಕ್ಷೆಯನ್ನೇ ಬದಲಿಸಿಬಿಟ್ಟಿದೆ. ಹೀಗಾಗಿ ಕರೊನೋತ್ತರ ಕ್ಷಿಪ್ರ ಬದಲಾವಣೆಗೆ ತಕ್ಕಂತೆ ಉದ್ಯಮ ಹಾಗೂ ವ್ಯವಹಾರಗಳನ್ನು ಕುದುರಿಸಿಕೊಳ್ಳಲು ರಾಜ್ಯ ಸರ್ಕಾರ ಅತ್ಯಂತ ಮಹತ್ವದ ಹೆಜ್ಜೆಯಿಟ್ಟಿದೆ. ಉದ್ಯಮ, ವ್ಯವಹಾರ ಕ್ಷೇತ್ರಗಳಲ್ಲಿ ಬಂಡವಾಳ ಆಕರ್ಷಣೆ, ಹೂಡಿಕೆಗೆ ಉತ್ತೇಜನ. ಅದರಲ್ಲೂ ಚೀನಾದಿಂದ ಕಾಲ್ತೆಗೆಯಲು ಸಜ್ಜಾಗಿರುವ ಬಹುರಾಷ್ಟ್ರೀಯ ಕಂಪನಿಗಳನ್ನು ಸೆಳೆಯಲು ವ್ಯೂಹಾತ್ಮಕ ಕಾರ್ಯತಂತ್ರ ಹೆಣೆದಿದ್ದು, ಇದನ್ನು ಫಲಪ್ರದಗೊಳಿಸಲೆಂದು ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ವಿಶೇಷ ಕಾರ್ಯಪಡೆ ರಚಿಸಿದೆ.

ಚೀನಾದಿಂದ ಕಾಲ್ತೆಗೆಯಲು ಉತ್ಸುಕವಾಗಿರುವ ಬಹುತೇಕ ಕಂಪನಿಗಳಿಗೆ ಭಾರತವು ಪರ್ಯಾಯ ಕೇಂದ್ರ, ಹೂಡಿಕೆಗೆ ವಿಶ್ವಾಸಾರ್ಹ ನೆಲೆಯಾಗಿ ಕಂಡುಕೊಂಡಿವೆ. ಅವಕಾಶಗಳ ಸದ್ಬಳಕೆ ಮೂಲಕ ಬಂಡವಾಳ ಆಕರ್ಷಣೆ ಹಾಗೂ ಉದ್ಯಮ, ವ್ಯವಹಾರ, ತಯಾರಿಕೆ ಕ್ಷೇತ್ರಗಳಲ್ಲಿ ಹೂಡಿಕೆಗೆ ಪೂರಕ ವಾತಾವರಣವನ್ನು ಕೇಂದ್ರ ಸರ್ಕಾರ ಸೃಷ್ಟಿಸುತ್ತಿದೆ. ರಾಜ್ಯವೂ ಈ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಿದೆ.

ಪ್ರತಿನಿಧಿಗಳು: ಜಪಾನ್ ವಿದೇಶಾಂಗ ವ್ಯಾಪಾರ ಸಂಘಟನೆ (ಜೆಟ್ರೋ), ಕೊರಿಯಾ ವ್ಯಾಪಾರ ಹೂಡಿಕೆ ಉತ್ತೇಜನ ಸಂಸ್ಥೆ (ಕೊಟ್ರಾ), ಕೊರಿಯನ್ ಚೇಂಬರ್ ಆಫ್ ಕಾಮರ್ಸ್ ಮತ್ತು ತೈವಾನ್ ವಿದೇಶಾಂಗ ವ್ಯಾಪಾರ ಅಭಿವೃದ್ಧಿ ಮಂಡಳಿ (ಟೈಟ್ರಾ)ಯಿಂದ ಇಬ್ಬರು. ಇಂಡೋ ಅಮೆರಿಕನ್ ಚೇಂಬರ್ ಆಫ್ ಕಾಮರ್ಸ್, ಅಮೆರಿಕ-ಭಾರತ ವ್ಯೂಹಾತ್ಮಕ ಸಹಭಾಗಿತ್ವ ವೇದಿಕೆ (ಯುಎಸ್​ಐಎಸ್​ಪಿಎಫ್) ಮತ್ತು ಅಮೆರಿಕ-ಭಾರತ ವ್ಯವಹಾರ ಮಂಡಳಿ (ಯುಎಸ್​ಐಬಿಸಿ)ಯಿಂದ ಇಬ್ಬರು. ಇಂಡೋ ಫ್ರೆಂಚ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ ಮತ್ತು ಇಂಡೋ ಜರ್ಮನ್ ಚೇಂಬರ್ ಆಫ್ ಕಾಮರ್ಸ್, ಸಿಂಗಾಪೂರ್ ಎಂಟರ್​ಪ್ರೖೆಸಸ್, ಕರ್ನಾಟಕದಲ್ಲಿರುವ ಜಪಾನ್, ಕೊರಿಯನ್, ಅಮೆರಿಕ, ತೈವಾನ್, ಫ್ರೆಂಚ್ ಮತ್ತು ಜರ್ಮನಿ ಕಂಪನಿಗಳ ತಲಾ ಒಬ್ಬರು. ವಿಶೇಷ ಕಾರ್ಯ ಪಡೆಗೆ ಪ್ರತಿನಿಧಿಗಳನ್ನು ನೇಮಕ ಮಾಡುವ ಅಧಿಕಾರವನ್ನು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ನೀಡಲಾಗಿದೆ.

ಕಾರ್ಯಭಾರ: ಬೇರೆ ರಾಷ್ಟ್ರಗಳಿಂದ ಹಿಂತೆಗೆಯುವ ಬಂಡವಾಳವನ್ನು ರಾಜ್ಯದಲ್ಲಿ ಹೂಡಿಕೆಯ ಕ್ಷೇತ್ರ ಗುರುತಿಸುವುದು, ಬಂಡವಾಳ ಆಕರ್ಷಣೆಗೆ ಅಗತ್ಯ ವಿಶೇಷ ಪ್ರೋತ್ಸಾಹಧನದ ಪ್ಯಾಕೇಜ್ ರೂಪಿಸುವುದು, ಮೂಲ ಸವಲತ್ತುಗಳು ಸೇರಿ ಕೈಗಾರಿಕಾ ವಸಾಹತು ಮೀಸಲು, ಬಂಡವಾಳ ಹೂಡಿಕೆಗೆ ಉತ್ತೇಜಿಸುವುದಕ್ಕೆ ಪೂರಕವಾಗಿ ತ್ವರಿತ ಅನುಮೋದನೆ ಪ್ರಕ್ರಿಯೆ ಇತ್ಯಾದಿ ಅಗತ್ಯ ಕ್ರಮಗಳನ್ನು ಈ ಕಾರ್ಯಪಡೆ ನಿರ್ವಹಿಸಲಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ ಗುಪ್ತ ಆದೇಶದಲ್ಲಿ ತಿಳಿಸಿದ್ದಾರೆ.

ವಿಶೇಷ ಕಾರ್ಯಪಡೆ ಸ್ವರೂಪ: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯ ಈ ವಿಶೇಷ ಕಾರ್ಯಪಡೆಗೆ ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಗಣಿ ಇಲಾಖೆ ಪ್ರಧಾನ ಕಾರ್ಯದರ್ಶಿ, ವಾಣಿಜ್ಯ ತೆರಿಗೆ ಆಯುಕ್ತ ಸದಸ್ಯರಾಗಿದ್ದು, ಕೈಗಾರಿಕಾ ಅಭಿವೃದ್ಧಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ನಿರ್ದೇಶಕ ಸಂಚಾಲಕರಾಗಿದ್ದಾರೆ.

ಅಂತ್ಯವಾಗುತ್ತಾ ರೆಡ್ ಟೇಪಿಸಂ?: ಈಗಿರುವ ಕಾನೂನು ಸರಳೀಕರಣಗೊಳಿಸಿ ಹೂಡಿಕೆದಾರರಿಗೆ ಶೀಘ್ರವಾಗಿ ಅನುಮತಿಗಳು ನೀಡುವಂತಾಗಬೇಕು. ಇಲ್ಲದಿದ್ದರೆ ಹೂಡಿಕೆದಾರರು ರಾಜ್ಯಕ್ಕೆ ಬರುವುದಿಲ್ಲ. ರಾಜ್ಯದಲ್ಲಿ ಲಂಚ ನೀಡದೆ ಕೆಲಸ ನಡೆಯುವುದಿಲ್ಲ ಎಂಬ ಕಾರಣಕ್ಕೆ ಹೂಡಿಕೆದಾರರಲ್ಲಿ ಬೇಸರವಿದೆ. ಇದಕ್ಕೆಲ್ಲ ಕಡಿವಾಣ ಹಾಕದಿದ್ದಲ್ಲಿ ಮುಂದೆ ಸಾಕಷ್ಟು ಸಮಸ್ಯೆಗಳು ಉಲ್ಬಣಗೊಳ್ಳುವ ಸಾಧ್ಯತೆಗಳಿವೆ. ನಿರುದ್ಯೋಗ ಸಮಸ್ಯೆ ಹೋಗಲಾಡಿಸುವ ಹೂಡಿಕೆದಾರರಿಗೆ ಪ್ರೋತ್ಸಾಹ ಅಗತ್ಯವಾಗಿದ್ದು, ರೆಡ್ ಟೇಪಿಸಂ ಕೊನೆಯಾಗುವ ಅಗತ್ಯವಿದೆ.