ನ್ಯೂಸ್

ಪಾದಾಚಾರಿಗಳ ಪಾಲಿನ ಯಮನಾದ ಕಾರು ಚಾಲಕ, ಐದು ಜನ ಸಾವು! Car Loses Control

ಉತ್ತರ ಪ್ರದೇಶ: ಬೈಕ್​ ಹಾಗು ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ (Car Loses Control) ಐವರು ಮೃತಪಟ್ಟಿದ್ದು, ಇಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ಶುಕ್ರವಾರ ರಾತ್ರಿ (ಅ.24) ನಡೆದಿದೆ.

ಮೃತರನ್ನು ಬಬ್ಲಿ (33), ಭಾನು ಪ್ರತಾಪ್ (25), ಕಮಲ್ (23), ಕೃಷ್ಣ (20), ಮತ್ತು ಬಂತೇಶ್ (21) ಎಂದು ಗುರುತಿಸಲಾಗಿದೆ.

ಘಟನೆ ಏನು?

ಕಾರು ಚಾಲಕನ ನಿಯಂತ್ರಣ ತಪ್ಪಿ, ಮುಂದೆ ಬರುತ್ತಿದ್ದ ಬೈಕ್​ಗೆ ಡಿಕ್ಕಿ ಹೊಡೆದಿದ್ದು, ಎದುರು ಬರುತ್ತಿದ್ದ ಜನರ ಮೇಲೆ ಹರಿದಿದೆ. ಈ ವೇಳೆ 7 ಜನರಿಗೆ ಗಂಭೀರ ಗಾಯವಾಗಿದ್ದು, ಅವರನ್ನು ತಕ್ಷಣವೇ ಸರೋಜಿನಿ ನಾಯ್ಡು ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು. ಈ ವೇಳೆಗಾಗಲೇ, 5 ಜನರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಇನ್ನು ಇಬ್ಬರು ಗಾಯಾಳುಗಳು ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಎನ್​​ಡಿಟಿವಿ ವರದಿ ಮಾಡಿದೆ.

ನಾಲ್ವರು ಪುರುಷರು ಹಾಗೂ ಒಬ್ಬ ಮಹಿಳೆ ಸೇರಿದಂತೆ ಐದು ಜನರು ಮೃತಪಟ್ಟಿದ್ದು, ಕುಟುಂಬದ ಸದಸ್ಯರ ಕೋರಿಕೆ ಮೇರೆಗೆ ಆಗ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಎಸಿಪಿ ಶೇಷಮಣಿ ಉಪಾಧ್ಯಾಯ ಮಾಹಿತಿ ನೀಡಿದ್ದಾರೆ.

ಘಟನೆ ಬಗ್ಗೆ ಪ್ರತ್ಯಕ್ಷದರ್ಶಿ ಹೇಳಿಕೆ ಏನು?

ಘಟನೆ ಸಂಭವಿಸಿದ ಸಮಯದಲ್ಲಿ ದೊಡ್ಡ ಶಬ್ಧ ಕೇಳಿಸಿತು. ಈ ವೇಳೆ ಕಾರಿನ ಅಡಿಯಿಂದ ಜನರನ್ನು ಹೊರತೆಗೆದೆವು. ಗಾಯಾಳುಗಳ ಸ್ಥಿತಿ ಗಂಭೀರವಾಗಿದ್ದು, ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತು. ಇದಾದ ಬಳಿಕ ಕಾರು ಚಾಲಕನನ್ನು ವಾಹನದಿಂದ ಹೊರಗೆಳೆದು ಥಳಿಸಿ, ಆತನನ್ನು ಪೊಲೀಸರಿಗೆ ಒಪ್ಪಿಸಲಾಯಿತು ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)