ಕರೊನಾ ಎರಡನೆಯ ಅಲೆಯ ಅಬ್ಬರ ತಗ್ಗಿದ್ದು, ಕರ್ನಾಟಕ ಸೇರಿ ದೇಶದ ಬಹುತೇಕ ರಾಜ್ಯಗಳಲ್ಲಿ ಹಂತಹಂತವಾಗಿ ಅನ್ಲಾಕ್ ಮಾಡಲಾಗುತ್ತಿದೆ. ಸೋಮವಾರದಿಂದ ರಾಜ್ಯದ ಅರ್ಧಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ವ್ಯಾಪಾರ ವಹಿವಾಟು ಪುನರಾರಂಭಗೊಂಡಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ದೀರ್ಘಾವಧಿಯ ಬಳಿಕ ಸಾರಿಗೆ ಸಂಚಾರಕ್ಕೆ ಚಾಲನೆ ಸಿಕ್ಕಿರುವುದರಿಂದ, ಜನಸಾಮಾನ್ಯರು ನಿರಾಳರಾಗಿದ್ದಾರೆ. ಸುರಕ್ಷತಾ ನಿಯಮಗಳನ್ನು ಪಾಲಿಸುತ್ತಲೇ, ದೈನಂದಿನ ಬದುಕಿನಲ್ಲಿ ಮುಂದಡಿ ಇಡಬೇಕಿದೆ. ‘ಸೋಂಕಿನ ಅಪಾಯದ ಬಗ್ಗೆ ನಿರ್ಲಕ್ಷ್ಯ ಬೇಡ. ಸಾಧ್ಯವಾದಷ್ಟು ಮನೆಯಲ್ಲೇ ಇರಿ, ಶುಚಿತ್ವ ಪಾಲಿಸಿ, ಮುನ್ನೆಚ್ಚರಿಕೆ ವಹಿಸಿ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿಕೊಂಡಿದ್ದಾರೆ. ಆದರೆ, ಕರೊನಾದ ಮೂರನೆಯ ಅಲೆ ಬರುವ ಸಾಧ್ಯತೆ ಬಗ್ಗೆ ತಜ್ಞರು ಮತ್ತೆ ಎಚ್ಚರಿಕೆ ನೀಡಿರುವುದರಿಂದ, ಇನ್ನಷ್ಟು ಜಾಗರೂಕರಾಗಬೇಕಿದೆ. ಕರೊನಾ ವಿರುದ್ಧ ಹೋರಾಡಲು ಲಸಿಕೆಯೇ ಪ್ರಬಲ ಅಸ್ತ್ರ ಎಂಬುದು ಸಾಬೀತಾಗಿದೆ. ಕೇಂದ್ರ ಸರ್ಕಾರವೇ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆ ನೀಡುತ್ತಿದೆ. ಈ ಅಭಿಯಾನಕ್ಕೆ ಜೂನ್ 21ರಂದು ಚಾಲನೆ ಸಿಗುವ ಮೂಲಕ, ಲಸಿಕೆ ಖರೀದಿಸುವ ರಾಜ್ಯಗಳ ಹೊಣೆ ತಗ್ಗಿದೆ. ಸೋಮವಾರ ಲಸಿಕೆ ಅಭಿಯಾನಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ದೊರೆತಿದ್ದು, ಸಂಜೆ ಹೊತ್ತಿಗೆ 80 ಲಕ್ಷಕ್ಕೂ ಅಧಿಕ ಜನ ಲಸಿಕೆ ಪಡೆದುಕೊಂಡರು. ರಾಜ್ಯದ 5 ಸಾವಿರ ಕೇಂದ್ರಗಳಲ್ಲಿ ಲಸಿಕೆ ಅಭಿಯಾನ ನಡೆದಿದೆ. ಒಂದೇ ದಿನದಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಲಸಿಕೆ ಪಡೆದಿರುವುದು ದಾಖಲೆ ಸೃಷ್ಟಿಸಿದೆ. ಈ ಮುಂಚೆ ಏಪ್ರಿಲ್ 5ರಂದು 43 ಲಕ್ಷಕ್ಕೂ ಅಧಿಕ ಜನರು ಲಸಿಕೆ ಪಡೆದುಕೊಂಡಿದ್ದರು. ಈವರೆಗೆ ದೇಶದಲ್ಲಿ ಲಸಿಕೆ ಪಡೆದವರ ಸಂಖ್ಯೆ 28 ಕೋಟಿಯನ್ನು ದಾಟಿದೆ.
ಮೂರನೆಯ ಅಲೆಯ ಅಪಾಯವನ್ನು ತಗ್ಗಿಸಬೇಕಾದರೆ ಲಸಿಕೆ ಅಭಿಯಾನ ವೇಗವಾಗಿ ನಡೆಯಲೇ ಬೇಕು. ಈ ಮೊದಲು ಲಸಿಕೆ ಖರೀದಿಸಿ, ಅದನ್ನು ವಿತರಿಸುವ ಜವಾಬ್ದಾರಿ ರಾಜ್ಯಗಳ ಮೇಲಿತ್ತು. ಆದರೀಗ, ಜನರಿಗೆ ಲಸಿಕೆ ನೀಡುವ ಹೊಣೆ ಮಾತ್ರ ರಾಜ್ಯ ಸರ್ಕಾರಗಳ ಮೇಲಿದೆ. ಹೀಗಾಗಿ, ಕರ್ನಾಟಕದಲ್ಲೂ ಲಸಿಕೆ ವಿತರಣೆ ನಿಟ್ಟಿನಲ್ಲಿ ಸೂಕ್ತ ವ್ಯವಸ್ಥೆಗಳು ಆಗಬೇಕು. ಈಗಲೂ ಹಲವು ಜಿಲ್ಲೆಗಳಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನಿರಾಕರಿಸಲಾಗುತ್ತಿದ್ದು, ಇದಕ್ಕೆ ಲಸಿಕೆ ಕೊರತೆಯ ನೆಪ ಹೇಳಲಾಗುತ್ತಿದೆ. ಇನ್ನು ಕೆಲ ಗ್ರಾಮೀಣ ಪ್ರದೇಶಗಳಲ್ಲಿ ಜನರು ವದಂತಿಗಳನ್ನು ನಂಬಿ, ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಈ ನಿಟ್ಟಿನಲ್ಲಿ ಸೂಕ್ತ ಜಾಗೃತಿ ಆಂದೋಲನವೂ ನಡೆಯಬೇಕಿದೆ. ಲಸಿಕೆ ಪಡೆದ ಮೇಲೆ ತಯಾರಾಗುವ ಪ್ರತಿಕಾಯ ಶಕ್ತಿ ಮತ್ತು ಸೋಂಕನ್ನು ಎದುರಿಸಲು ಅದು ಸಹಕರಿಸುವ ಪರಿ, ಈ ಎಲ್ಲ ಸಂಗತಿಗಳ ಬಗ್ಗೆ ಸಾಮಾನ್ಯ ಜನರಲ್ಲಿ ಅರಿವು ಮೂಡಿಸಬೇಕಿದೆ. ಮುಂದಿನ ಕೆಲ ವಾರಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಲಸಿಕೆ ನೀಡಲು ಸಾಧ್ಯವಾದರೆ, ಅದು ಕರೊನಾ ವಿರುದ್ಧದ ಸಮರದಲ್ಲಿ ಮಹತ್ವದ ಹೆಜ್ಜೆಯೇ.