ನ್ಯೂಸ್

ಅಂಗವಿಕಲೆಯ 10ನೇ ತರಗತಿ ಅಂಕಪಟ್ಟಿಯಲ್ಲಿ 2 ಅಂಕಗಳು 100 ಅಂಕಗಳಾದಾಗ...

vinaymk1969

ಹಿಸಾರ್​: ಆಕೆ ಭಾಗಶಃ ಅಂಧತ್ವದಿಂದ ಬಳಲುತ್ತಿದ್ದಾಳೆ. ಆದರೂ ಓದಿನಲ್ಲಿ ಮುಂದು. ಹರಿಯಾಣದ ಶಾಲಾ ಶಿಕ್ಷಣ ಮಂಡಳಿ (ಬಿಎಸ್​ಎಚ್​ಇ) ಆಯೋಜಿಸಿದ್ದ 10ನೇ ತರಗತಿ ಪರೀಕ್ಷೆಗೆ ಆಕೆ ಹಾಜರಾಗಿದ್ದಳು. ಚೆನ್ನಾಗಿಯೇ ಪರೀಕ್ಷೆ ಬರೆದಿದ್ದಳು. ಆದರೆ ಫಲಿತಾಂಶ ಬಂದಾಗ ಉಳಿದೆಲ್ಲ ವಿಷಯಗಳಲ್ಲಿ ಶೇ.90ಕ್ಕೂ ಹೆಚ್ಚು ಅಂಕಗಳು ಬಂದಿದ್ದರೆ, ಗಣಿತದಲ್ಲಿ ಕೇವಲ 2 ಅಂಕಗಳು ಬಂದಿದ್ದು, ಆಕೆ ಫೇಲ್​ ಆಗಿದ್ದಳು.

ಇದರಿಂದ ಬೇಸರಗೊಂಡ ಆಕೆಯ ತಂದೆ ಪುತ್ರಿಯ ಉತ್ತರಪತ್ರಿಕೆಯ ಮರುಮೌಲ್ಯಮಾಪನಕ್ಕೆ ಮನವಿ ಸಲ್ಲಿಸಿದ್ದರು. ಅಚ್ಚರಿ ಎಂದರೆ, ಆ ಬಾಲಕಿ ಗಣಿತದಲ್ಲಿ 100 ಅಂಕ ಗಳಿಸಿದ್ದಳು! ಮೌಲ್ಯಮಾಪಕರು ಮಾಡಿದ್ದ ಎಡವಟ್ಟಿನಿಂದಾಗಿ 100 ಅಂಕಗಳು ಕೇವಲ 2 ಅಂಕಗಳಾಗಿ ಮಾರ್ಪಟ್ಟಿದ್ದವು!

ಭಾಗಶಃ ಅಂಧತ್ವದಿಂದ ಬಳಲುತ್ತಿರುವ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಾಗ ಉತ್ತರ ಪತ್ರಿಕೆಗಳ ಮೇಲೆ ಅಂಧ ವಿದ್ಯಾರ್ಥಿ ಎಂದು ನಮೂದಿಸಿರುತ್ತಾರೆ. ಇಂಥವರ ಉತ್ತರಪತ್ರಿಕೆ ಮೌಲ್ಯಮಾಪನ ಮಾಡುವಾಗ ಅದನ್ನು ಆಧರಿಸಿ ಮೌಲ್ಯಮಾಪನ ಮಾಡಬೇಕಾಗುತ್ತದೆ. ಆದರೆ, ಇದು ತಿಳಿಯದ ಮೌಲ್ಯಮಾಪಕರೊಬ್ಬರು ಹರಿಯಾಣದ ಹಿಸಾರ್​ನ ಸರ್ಕಾರಿ ಹಿರಿಯ ಪ್ರೌಢಶಿಕ್ಷಣ ಶಾಲೆಯ ವಿದ್ಯಾರ್ಥಿನಿ ಸುಪ್ರಿಯಾ ಅವರ ಗಣಿತ ಉತ್ತರಪತ್ರಿಕೆಯ ಮೌಲ್ಯಮಾಪನ ಮಾಡಿ ಕೇವಲ 2 ಅಂಕಗಳನ್ನು ಕೊಟ್ಟಿದ್ದರು.

ಸ್ವತಃ ಗಣಿತ ಶಿಕ್ಷಕರಾಗಿರುವ ಅವರ ತಂದೆ ಛಜ್ಜುರಾಂ ಅವರು ಮರುಮೌಲ್ಯಮಾಪನಕ್ಕೆ ಕೋರಿ ಅರ್ಜಿ ಸಲ್ಲಿಸಿದ್ದರು. ಆ ಸಂದರ್ಭದಲ್ಲಿ ಅಂಧ ವಿದ್ಯಾರ್ಥಿನಿಯ ಉತ್ತರಪತ್ರಿಕೆ ಮೌಲ್ಯಮಾಪನ ಮಾಡುವಾಗ ಮೌಲ್ಯಮಾಪಕರು ಲೋಪ ಎಸಗಿರುವುದು ಕಂಡುಬಂದಿತು. ಬಳಿಕ ಅಂಧ ವಿದ್ಯಾರ್ಥಿಗಳ ಉತ್ತರಪತ್ರಿಕೆಗಳನ್ನು ಮೌಲ್ಯಮಾಪನ ಮಾಡುವ ರೀತಿಯಲ್ಲಿ ಮೌಲ್ಯಮಾಪನ ಮಾಡಿದಾಗ ಸುಪ್ರಿಯಾ 100ಕ್ಕೆ 100 ಅಂಕ ಗಳಿಸಿದ್ದಳು.

ನನ್ನ ಪುತ್ರಿಯ ಉತ್ತರಪತ್ರಿಕೆಯ ಮರುಮೌಲ್ಯಮಾಪನ ಕಾರ್ಯಕ್ಕಾಗಿ ನಾನು 5 ಸಾವಿರ ರೂ. ಖರ್ಚು ಮಾಡಿದ್ದೇನೆ. ಸ್ವತಃ ನಾನು ಗಣಿತದ ಶಿಕ್ಷಕನಾಗಿದ್ದು, ನನ್ನ ಮಗಳ ಸಾಮರ್ಥ್ಯದ ಬಗ್ಗೆ ನನಗೆ ನಂಬಿಕೆ ಇತ್ತು. ಉಳಿದೆಲ್ಲ ವಿಷಯಗಳಲ್ಲಿ ಶೇ.90ಕ್ಕೂ ಹೆಚ್ಚು ಅಂಕ ಗಳಿಸಿದವಳು ಗಣಿತದಲ್ಲಿ ಕೇವಲ 2 ಅಂಕ ಗಳಿಸಲು ಸಾಧ್ಯವೇ ಇಲ್ಲ ಎಂಬ ಕಾರಣಕ್ಕಾಗಿ ಮರುಮೌಲ್ಯಮಾಪನಕ್ಕೆ ಮನವಿ ಸಲ್ಲಿಸಿದ್ದೆ. ಈಗ ಅವರಿಗೆ 100 ಅಂಕ ಸಿಕ್ಕಿದೆ ಎಂದು ಸುಪ್ರಿಯಾಳ ತಂದೆ ಛಜ್ಜುರಾಂ ಹೇಳಿದ್ದಾರೆ.

ನನಗೆ ಗಣಿತದಲ್ಲಿ ಕೇವಲ 2 ಅಂಕಗಳು ಬಂದಿವೆ ಎಂಬುದನ್ನು ನಾನು ನಂಬದೇ ಹೋದೆ. ನನಗೆ ಆಘಾತವಾಗಿತ್ತು. ನನ್ನ ತಂದೆ ಮರುಮೌಲ್ಯಮಾಪನಕ್ಕೆ ಮನವಿ ಮಾಡಿಕೊಂಡಿದ್ದರಿಂದ ನನಗೆ 100 ಅಂಕ ಸಿಕ್ಕಿದೆ. ನನ್ನಂಥ ಬೇರಾವುದೇ ಅಂಗವಿಕಲ ವಿದ್ಯಾರ್ಥಿಗಳಿಗೂ ಇಂಥ ಅನ್ಯಾಯ ಆಗಬಾರದು ಎಂದು ಸುಪ್ರಿಯಾ ಹೇಳಿದ್ದಾರೆ.