ಬಣಕಲ್: ಗಬ್ಗಲ್, ತರುವೆ, ದೇವನಗೂಲ್, ಅತ್ತಿಗೆರೆ, ಆಲೇಕಾನ್ ಹೊರಟ್ಟಿ ಸುತ್ತಮುತ್ತ ಮಹಿಳೆಯರು, ಮಕ್ಕಳು ವಿಶೇಷ ಗಂಗೆ ಪೂಜೆ ನಡೆಸಿ ಗೌರಿಹಬ್ಬ , ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಕೊಟ್ಟಿಗೆಹಾರದ ಸೀತಾರಾಮ ದೇವಸ್ಥಾನ, ತರುವೆ, ರಾಮನಗರ, ಬಿನ್ನಡಿ, ಬಣಕಲ್, ನಿಡುವಾಳೆ, ಬಾಳೂರು,ಆಲೇಕಾನ್ ಹೊರಟ್ಟಿ ಸೇರಿದಂತೆ ಹಲವು ಸುತ್ತಮುತ್ತಲ ಗ್ರಾಮಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ವಿವಿಧ ದೇವಸ್ಥಾನಗಳಲ್ಲಿ ವಿಘ್ನ ನಿವಾರಕನಿಗೆ ಸೋಮವಾರ ವಿಶೇಷ ಪೂಜೆಗಳು ನಡೆಯಿತು. ಗಣಪತಿಗೆ ಕಾಯಿ ಕಡುಬು ಮತ್ತಿತರ ಸಿಹಿ ತಿಂಡಿ ಮಾಡಿ ಜನರು ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ದೇವನಗೂಲ್ ಗೃಹಿಣಿ ಸ್ವಾತಿ ನವೀನ್ ಮಾತನಾಡಿ ಗೌರಿ ಹಬ್ಬ ಮಹಿಳೆಯರ ಪಾಲಿಗೆ ಅತ್ಯಂತ ಶ್ರೇಷ್ಠ ಹಬ್ಬ. ಗೌರಿ ಹಬ್ಬದಂದು ಸುಮಂಗಲಿಯರಿಗೆ ನೀಡುವ ಬಾಗಿನ ಬಹಳ ಶ್ರೇಷ್ಠವಾದುದು. ಅದಕ್ಕೆಂದೇ ಮನೆಗಳಲ್ಲಿ ಐದು ಮಂದಿ ಮುತ್ತೈದೆಯರಿಗೆ ಬಾಗಿನ ಕೊಡುವ ಪದ್ದತಿಯಿದೆ. ಅರಿಶಿಣ ಕುಂಕುಮ, ಹಸಿರು ಬಳೆ,ಕರಿಮಣಿ ಬಾಚಣಿಗೆ, ಸೀರೆ ಅಥವಾ ಬ್ಲೌಸ್ ಪೀಸ್, ಕಾಯಿ ಹಣ್ಣು ದಾನ್ಯಗಳನ್ನೊಳಗೊಂಡ ಬಾಗಿನ ನೀಡುವುದರಿಂದ ದಾನ ಮಾಡುವ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ ಎಂದರು. ಗೃಹಿಣಿಯರಾದ ಸುಶೀಲಮ್ಮ, ಸೃಷ್ಟಿ, ಕುಸುಮ, ಸುಧಾ, ಯಶಸ್ವಿನಿ, ಅರ್ಚನಾ, ಯಶೋದಮ್ಮ ಇದ್ದರು.