ಬೆಂಗಳೂರು: ರಾಜ್ಯ ಸರ್ಕಾರ 7ನೇ ವೇತನ ಆಯೋಗದ ಶಿಾರಸಿನಂತೆ ವಿಶೇಷ ಚೇತನ ನೌಕರರುಗಳಿಗೆ 2024ರ ಪರಿಷ್ಕೃತ ವೇತನ ಶ್ರೇಣಿಯಗಳಲ್ಲಿ ಅವರ ಮೂಲ ವೇತನದ ಶೇ.6ರ ದರದಲ್ಲಿ ಯಾವುದೇ ಗರಿಷ್ಠ ಮಿತಿ ಇಲ್ಲದೇ ವಿಶೇಷ ಪ್ರಯಾಣ ಭತ್ಯೆ(Special Traveling Allowance for Handicapped Employees) ಮಂಜೂರು ಮಾಡಿ ಆದೇಶ ಹೊರಡಿಸಿದೆ.
ಡಿ.1,2024 ರಿಂದ ಈ ಆದೇಶ ಜಾರಿಗೆ ಬರಲಿದೆ. ಅಂಧ ಮತ್ತು ಚಲನವಲನ ವೈಕಲ್ಯತೆಯುಳ್ಳ ಹಾಗೂ ವಾಕ್ ಮತ್ತು ಶ್ರವಣ ವೈಕಲ್ಯತೆಯುಳ್ಳ ನೌಕರರನ್ನು ಒಳಗೊಂಡಂತೆ ರಾಜ್ಯ ಸರ್ಕಾರದ ಎಲ್ಲ ವಿಶೇಷ ಚೇತನ ನೌಕರರು ಈ ಸೌಲಭ್ಯ ಪಡೆಯಲು ಅರ್ಹರಾಗಿದ್ದಾರೆ.
ಶೇ.40 ರಷ್ಟು ಕನಿಷ್ಟ ಶಾಶ್ವತ ಅಂಗವಿಕಲತೆ ಹೊಂದಿರುವ ನೌಕರರು ಈ ಸೌಲಭ್ಯ ಪಡೆಯಲು ಅರ್ಹರು. ಯಾವುದೇ ವೈಜ್ಞಾನಿಕ ಉಪಕರಣಗಳ/ಸಾಧನಗಳ ಬಳಕೆಯಿಂದ ಸರಿಪಡಿಸಲಾಗದಂತಹ ಶಾಶ್ವತ ಅಂಗವಿಕಲತೆಯುಳ್ಳ ನೌಕರರಿಗೆ ಮಾತ್ರ ಈ ಸವಲತ್ತು ಸೀಮಿತವಾಗಿರುತ್ತದೆ.
ರಾಜ್ಯ ರ್ಸಾರದ ಅಧೀನಕ್ಕೆ ಒಳಪಡುವ ಸ್ಥಳೀಯ ಸಂಸ್ಥೆಗಳು, ನಿಗಮ ಮಂಡಳಿಗಳು, ಸ್ವಾಯತ್ತ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳ ವಿಶೇಷ ಚೇತನ ನೌಕರರುಗಳಿಗೂ ಈ ಆದೇಶ ಅನ್ವಯಿಸುತ್ತದೆ. ಸರ್ಕಾರದಿಂದ ಅಥವಾ ಸರ್ಕಾರದ ನಿಯಂತ್ರಣಕ್ಕೆ ಒಳಪಡುವ ಸಂಸ್ಥೆಗಳಿಂದ ಅಧಿಕೃತ ವಾಹನ ಒದಗಿಸಿರುವ ಅಥವಾ ಸರ್ಕಾರದ ವೆಚ್ಚದಲ್ಲಿ ಉಚಿತ ಸಾರಿಗೆ ವ್ಯವಸ್ಥೆ ಒದಗಿಸಿರುವ ನೌಕರರಿಗೆ ಈ ಸೌಲಭ್ಯ ಲಭ್ಯವಿರುವುದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.