ಬೆಂಗಳೂರು: ರಾಜ್ಯದಲ್ಲಿ ಅದರಲ್ಲೂ ಬೆಂಗಳೂರು ನಗರ ಜಿಲ್ಲೆಯ ಅನಧಿಕೃತವಾಗಿ ಕೊಳವೆ ಬಾವಿಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಂತರ್ಜಲ ನಿರ್ದೇಶನಾಲಯದಿಂದ ಅಧಿಕಾರಿಗಳ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್ ಎಸ್ ಬೋಸರಾಜು ತಿಳಿಸಿದ್ದಾರೆ.
ರಾಜ್ಯದಲ್ಲಿ, ಅದರಲ್ಲೂ ಪ್ರಮುಖವಾಗಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಅನಧಿಕೃತ ಕೊಳವೆಬಾವಿಗಳನ್ನು ಕೊರೆಯುತ್ತಿರುವುದರ ವಿರುದ್ದ ಕ್ರಮ ಕೈಗೊಳ್ಳುವುದು ಬಹಳ ಆದ್ಯತೆಯ ವಿಷಯವಾಗಿದೆ. ಅನಧಿಕೃತ ಕೊಳವೆ ಬಾವಿಗಳಿಂದ ಅಂತರ್ಜಲ ಮಟ್ಟ ಕಡಿಮೆ ಆಗುತ್ತದೆ. ಅಂತರ್ಜಲ ಶೋಷಣೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಕೊಳವೆ ಬಾವಿಗಳನ್ನು ಕೊರೆಸುವುದಕ್ಕೆ ಅನುಮತಿ ಪಡೆದುಕೊಳ್ಳುವುದು ಅಗತ್ಯವೆಂದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಇದನ್ನ ಸರಿಯಾಗಿ ಪಾಲಿಸಲಾಗುತ್ತಿಲ್ಲ. ಅನುಮತಿ ಪಡೆದುಕೊಳ್ಳದೇ ಕೊಳವೆ ಬಾವಿಗಳನ್ನ ಕೊರೆಸುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಬಂದಿದ್ದ ಹಿನ್ನಲೆಯಲ್ಲಿ ಸೂಕ್ತ ಕ್ರಮಕ್ಕಾಗಿ ಅಂತರ್ಜಲ ನಿರ್ದೇಶನಾಲಯದ ಅಧಿಕಾರಿಗಳಿಗೆ ಸೂಚಿಸಿದ್ದು, ಅಂತರ್ಜಲ ನಿರ್ದೇಶನಾಲಯದ ಉಪನಿರ್ದೇಶಕರಾದ ಜಿ. ಜಯಣ್ಣ ಹಾಗೂ ಹಿರಿಯ ಭೂವಿಜ್ಞಾನಿಗಳಾದ ಹೆಚ್.ಎಂ ನಾಗರಾಜ ಅವರ ನೇತೃತ್ವದ ವಿಶೇಷವತಂಡವನ್ನು ರಚಿಸಲಾಗಿದೆ.
ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಪ್ರದೇಶದಲ್ಲಿ ನಿಯಮಿತವಾಗಿ ತಪಾಸಣೆ ನಡೆಸುವಂತೆ ವಿಶೇಷ ತಂಡಕ್ಕೆ ಸೂಚಿಸಲಾಗಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಪ್ರಧಾನ ಮುಖ್ಯ ಇಂಜಿನಿಯರ್ ಗೂ ತಮ್ಮ ಅಧೀನದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ತಿಳಿಸಲಾಗಿದೆ.
ಅಲ್ಲದೆ, ರಾಜ್ಯಾದ್ಯಂತ ಅನಧಿಕೃತ ಕೊಳವೆ ಬಾವಿ ಕೊರೆಸುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಂತರ್ಜಲ ಇಲಾಖೆಯ ಅಧಿಕಾರಿಗಳಿಗೂ ಸೂಚನೆ ನೀಡಲಾಗಿದೆ ಎಂದು ಎನ್.ಎಸ್.ಬೋಸರಾಜು ಹೇಳಿದ್ದಾರೆ.