ಬೆಂಗಳೂರು: ರಾಜ್ಯದಲ್ಲಿ ಕೋಮುಗಲಭೆ, ದ್ವೇಷ ಭಾಷಣ, ಹಿಂಸಾಚಾರ ತಡೆಗಟ್ಟುವ ಸಲುವಾಗಿ ಗೃಹ ಇಲಾಖೆ ನಕ್ಸಲ್ ನಿಗ್ರಹ ಪಡೆಗೆ ಮಂಜೂರಾಗಿದ್ದ ಹುದ್ದೆಗಳಲ್ಲಿ ಅರ್ಧಕ್ಕರ್ಧ ಅಧಿಕಾರಿ, ಸಿಬ್ಬಂದಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಿಶೇಷ ಕಾರ್ಯಪಡೆ (ಎಸ್ ಎಎಫ್ ) ರಚಿಸಿ ನಿಯೋಜಿಸಿದೆ.
ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳು ತುಳು, ಕೊಂಕಣಿ ಮುಂತಾದ ವಿಶಿಷ್ಟ ಭಾಷೆ ಹಾಗೂ ಸಾಂಸ್ಕೃತಿಕ ಪರಂಪರೆಯಿಂದ ಕೂಡಿದೆ. ದಕ್ಷಿಣ ಕನ್ನಡ ಜಿಲ್ಲೆಯು ಉನ್ನತ ಶಿಕ್ಷಣ ಮತ್ತು ಸಾಕ್ಷರತೆಯೊಂದಿಗೆ ಸ್ಥಿರವಾದ ಆರ್ಥಿಕ ಪ್ರಗತಿ ಕಂಡಿದೆ. ಆದರೆ, ಸಣ್ಣ ಘಟನೆಗಳು ಸಹ ಕಾನೂನು ಮತ್ತು ಸುವ್ಯವಸ್ಥೆಗೆ ಸವಾಲುಗಳಾಗಿ ಉಲ್ಬಣಗೊಳ್ಳುತ್ತಿವೆ. ಈ ಪ್ರದೇಶದಲ್ಲಿ ಕೋಮು ಹತ್ಯೆ, ದ್ವೇಷ ಭಾಷಣ, ಹಿಂಸಾಚಾರ ಪುನರಾವರ್ತಿತ ಘಟನೆಗಳಿಗೆ ಸಾಕ್ಷಿ ಆಗುತ್ತಿರುವ ಕಾರಣಕ್ಕೆ ಎಸ್‌ಎಎ್ ರಚಿಸಿರುವುದಾಗಿ ಸರ್ಕಾರ ಹೇಳಿದೆ.
ಸುಪ್ರೀಂ ನಿರ್ದೇಶನ: ಸುಪ್ರೀಂಕೋರ್ಟ್ ವಿವಿಧ ಪ್ರಕರಣಗಳಲ್ಲಿ ನೈತಿಕ ಪೊಲೀಸ್‌ಗಿರಿ, ದ್ವೇಷ ಭಾಷಣ, ಹಿಂಸಾಚಾರ ಪ್ರಕರಣಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದೆ. ಈ ಎಲ್ಲ ಅಂಶ ಇಟ್ಟುಕೊಂಡು ಶಾಂತಿ ಕಾಪಾಡುವ ಸಲುವಾಗಿ ಎಸ್‌ಎಎ್ ರಚಿಸಲಾಗಿದೆ ಎಂದು ಹೇಳಿಕೊಂಡಿದೆ. 2005ರಲ್ಲಿ ಸೃಜಿಸಲಾಗಿರುವ ನಕ್ಸಲ್ ನಿಗ್ರಹ ಪಡೆಯಲ್ಲಿ 656 ಅಧಿಕಾರಿ/ ಸಿಬ್ಬಂದಿ ಮಂಜೂರಾತಿ ಬಲವಿದೆ. ರಾಜ್ಯದಲ್ಲಿ ನಕ್ಸಲ್ ಚಟುವಟಿಕೆ ವರದಿಯಾಗಿಲ್ಲ. ಹೀಗಾಗಿ ನಕ್ಸಲ್ ನಿಗ್ರಹ ಪಡೆ ವಿಸರ್ಜಿಸಬೇಕೆಂದು ಪೊಲೀಸ್ ಇಲಾಖೆ ವರದಿ ನೀಡಿತ್ತು. ಆದರೆ, ಛತ್ತೀಸ್‌ಗಢ ಮತ್ತು ಜಾರ್ಖಂಡ್‌ಗಳಿಂದ ನಕ್ಸಲರು ಕರ್ನಾಟಕ, ಕೇರಳ, ತಮಿಳುನಾಡು ಗಡಿ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುತ್ತಿದ್ದಾರೆ ಎಂದು ಗುಪ್ತಚರ ಮಾಹಿತಿ ಇದೆ. ಆದರಿಂದ ನಕ್ಸಲ್ ನಿಗ್ರಹ ಪಡೆಯ ಪ್ರಸ್ತುತ ಇರುವ ಅಧಿಕಾರಿ, ಸಿಬ್ಬಂದಿ ಬಲ ಬೇರ್ಪಡಿಸಿ ಪ್ರತ್ಯೇಕ ವಿಶೇಷ ಕಾರ್ಯಪಡೆ ಸ್ಥಾಪಿಸಲಾಗುತ್ತಿದೆ.
3 ವರ್ಷ ಕಾರ್ಯ ನಿರ್ವಹಣೆ: ನಕ್ಸಲ್ ನಿಗ್ರಹ ಪಡೆಯ 656 ಹುದ್ದೆಗಳಲ್ಲಿ 248 ಅಧಿಕಾರಿ, ಸಿಬ್ಬಂದಿ ಬೇರ್ಪಡಿಸಿ ವಿಶೇಷ ಕಾರ್ಯಪಡೆಗೆ ನಿಯೋಜಿಸಲಾಗುತ್ತಿದೆ. ಉಳಿದ ಅಧಿಕಾರಿ, ಸಿಬ್ಬಂದಿ ನಕ್ಸಲ್ ನಿಗ್ರಹ ಪಡೆಯಲ್ಲಿ ಮುಂದುವರಿಸಬೇಕು. ಜತೆಗೆ ನಕ್ಸಲ್ ನಿಗ್ರಹ ಪಡೆ 3 ವರ್ಷ ಕಾರ್ಯ ನಿರ್ವಹಿಸಬೇಕೆಂದು ಸೂಚನೆ ನೀಡಿದೆ. ವಿಶೇಷ ಕಾರ್ಯಪಡೆಯಲ್ಲಿ 3 ಕಂಪನಿ ಹೊಂದಿರಲಿದ್ದು, ಉಡುಪಿ, ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ತೆರೆಯಲಾಗುತ್ತದೆ. ವಲಯ ಐಜಿಪಿ ನಿಯಂತ್ರಣದಲ್ಲಿ ಆಯಾ ಜಿಲ್ಲಾ ವರಿಷ್ಠಾಧಿಕಾರಿ ಮತ್ತು ಪೊಲೀಸ್ ಆಯುಕ್ತರಿಗೆ ಈ ಪಡೆಗಳನ್ನು ನಿಯೋಜಿಸಲು, ಮೂಲಸೌಕರ್ಯ ಒದಗಿಸುವ ಜವಾಬ್ದಾರಿ ವಹಿಸಲಾಗಿದೆ ಎಂದು ಗೃಹ ಇಲಾಖೆ ಸ್ಪಷ್ಟಪಡಿಸಿದೆ.
ಎಸ್ ಎಎಫ್ ಜವಾಬ್ದಾರಿ
* ದ್ವೇಷ ಭಾಷಣ, ಉದ್ರೇಕಕಾರಿ, ಕೋಮು ಘಟನೆಗಳ ಪತ್ತೆ, ಮಾಧ್ಯಮ, ಜಾಲತಾಣದಲ್ಲಿ ಮಾಹಿತಿ ಸಂಗ್ರಹ, ಮೇಲ್ವಿಚಾರಣೆಗೆ ಗುಪ್ತಚರ ಘಟಕ ಸ್ಥಾಪನೆ
* ಸಂಭಾವ್ಯ ಕೋಮು ಹಿಂಸಾಚಾರದ ಮೇಲೆ ಕಣ್ಗಾವಲು, ಗುಪ್ತಚರ ಮಾಹಿತಿ ಸಂಗ್ರಹಿಸಿ ಎಚ್ಚರಿಕೆ ವಹಿಸುವುದು
* ಪ್ರಾಬಲ್ಯದ ಮೂಲಕ ವಿಶ್ವಾಸ ವೃದ್ಧಿಗೆ ಕ್ರಮ ಕೈಗೊಳ್ಳುವುದು
* ಮೂಲಭೂತೀಕರಣ ಗುರುತಿಸಲು, ಮೇಲ್ವಿಚಾರಣೆಗೆ ಕ್ರಮಕೈಗೊಳ್ಳುವುದು
* ವಲಯ ಐಜಿಪಿ ಕೋಮು ಗಲಭೆವೇಳೆ ಎಸ್‌ಎಎ್ ನಿಯೋಜಿಸುವುದು
248 ಅಧಿಕಾರಿ, ಸಿಬ್ಬಂದಿ
ಎಸ್‌ಎಎ್ಗೆ ಡಿಐಜಿಪಿ, ಡಿವೈಎಸ್‌ಪಿ(ಸಿವಿಲ್), ಸಹಾಯಕ ಕಮಾಂಡೆಂಟ್ ತಲಾ ಒಂದು ಹುದ್ದೆ, ಇನ್‌ಸ್ಪೆಕ್ಟರ್/ ಆರ್‌ಪಿಐ-4, ಪಿಎಸ್‌ಐ/ಆರ್‌ಎಸ್‌ಐ/ಎಸ್‌ಐ-16, ಸಿಎಚ್‌ಸಿ-60, ಸಿಪಿಸಿ/ಎಪಿಸಿ-150 ಮತ್ತು ಅನುಯಾಯಿ 15 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.