ಹಾರನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ 2010-11ನೇ ಸಾಲಿನ ಎಸ್‌ಎಸ್‌ಎಲ್ಸಿ ವಿದ್ಯಾರ್ಥಿಗಳಿಂದ ಆಯೋಜಿಸಿದ ಗುರುವಂದನಾ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಸಿ.ಎಚ್.ಚಂದ್ರೇಗೌಡ, ಬಿ.ಎನ್.ಪುಷ್ಪಾ, ಎ.ಎನ್.ಶಿವಣ್ಣ, ಆರ್.ವೆಂಕಟೇಶ್, ಅಶೋಕ್, ಉಷಾ, ಮೇರಿ ಇತರರಿದ್ದರು. 
ನ್ಯೂಸ್

ಗುರುವನ್ನು ಮೀರಿಸುವ ಶಿಷ್ಯರಿಂದ ವಿಶೇಷ ಗೌರವ

ಬೆಟ್ಟದಪುರ: ಆಧುನಿಕ ಜಗತ್ತಿನಲ್ಲಿ ಗುರು ಮೀರಿಸುವ ಶಿಷ್ಯರಿಂದ ಸಿಗುವಂತ ಗೌರವ ಗುರುಗಳಿಗೆ ನೀಡಿದಂತ ಹೆಮ್ಮೆಯ ಸಂಗತಿ ಎಂದು ರತ್ನಪುರಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಸಿ.ಎಚ್.ಚಂದ್ರೇಗೌಡ ಹೇಳಿದರು.

ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಹಾರನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ 2010-11ನೇ ಸಾಲಿನ ಎಸ್‌ಎಸ್‌ಎಲ್ಸಿ ವಿದ್ಯಾರ್ಥಿಗಳಿಂದ ಭಾನುವಾರ ಆಯೋಜಿಸಿದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ಕಾಲಘಟ್ಟದಲ್ಲಿ ಗುರುಗಳನ್ನು ಮಾತನಾಡಿಸಲು ಹಿಂಜರಿಯುವಂತ ವಿದ್ಯಾರ್ಥಿಗಳ ಮುಂದೆ ಗುರುವನ್ನು ನೆನಪಿಟ್ಟುಕೊಂಡು ಅವರನ್ನು, ಗೌರವಿಸುವಂತಹ ವಿದ್ಯಾರ್ಥಿಗಳ ಕಾರ್ಯ ಶ್ಲಾಘನೀಯ ಎಂದರು.

ಕುಶಾಲನಗರ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಮುಖ್ಯಶಿಕ್ಷಕಿ ಬಿ.ಎನ್.ಪುಷ್ಪಾ ಮಾತನಾಡಿ, ನಾವು ಗಳಿಸಿದ ಆಸ್ತಿ, ಅಂತಸ್ತು, ಸಂಪತ್ತು ಯಾವುದೂ ಕೊನೆಯವರೆಗೂ ಉಳಿಯಲ್ಲ. ಆದರೆ ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜತೆಗಿರುತ್ತದೆ. ಜೀವನದಲ್ಲಿ ಗುರಿ, ಛಲ, ಗುರುವಿನ ಆಶೀರ್ವಾದ ಇದ್ದರೆ ಮಾತ್ರ ವಿದ್ಯೆ ಕಲಿತು ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಲು ಸಾಧ್ಯ ಎಂದರು.

ನಿವೃತ್ತ ಶಿಕ್ಷಕ ಆರ್.ವೆಂಕಟೇಶ್ ಮಾತನಾಡಿ, ವಿಜ್ಞಾನ ತಂತ್ರಜ್ಞಾನ ಮುಂದುವರಿದ ಈ ಕಾಲದಲ್ಲಿ ವಿಶ್ವವೇ ಒಂದು ಗ್ರಾಮವಂತಾಗಿದೆ. ಉದ್ಯೋಗ ಇನ್ನಿತರ ಕಾರಣಗಳಿಗಾಗಿ ಹುಟ್ಟಿದ ಊರು ಬಿಟ್ಟು ಬೇರೆಲ್ಲೋ ನೆಲೆಸಿದವರು ತಮ್ಮ ದಿನನಿತ್ಯದ ಒತ್ತಡ ಜೀವನದಲ್ಲಿ ಹುಟ್ಟಿದ ಊರು, ಹೆತ್ತವರು, ಅಕ್ಷರ ಕಲಿಸಿದ ಗುರುಗಳನ್ನು ನೆನೆಸಿಕೊಳ್ಳಲಾಗದ ಸ್ಥಿತಿಗೆ ತಲುಪಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹಿರಿಯ ವಿದ್ಯಾರ್ಥಿಗಳೆಲ್ಲರನ್ನೂ ಒಟ್ಟುಗೂಡಿಸಿ, ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕುವಂತಹ ಸುಂದರ ಕ್ಷಣಗಳು ಬಂದಿರುವುದು ಸಂತಸದ ವಿಚಾರ ಎಂದರು.

ಕಾರ್ಯಕ್ರಮದಲ್ಲಿ ಶಾಲೆಯ ಹಿರಿಯ ಶಿಕ್ಷಕರನ್ನು ಸನ್ಮಾನಿಸಲಾಯಿತು. ಹಿರಿಯ ವಿದ್ಯಾರ್ಥಿಗಳು ಮಕ್ಕಳಿಗೆ ಕ್ರೀಡೆಗಳನ್ನು ಆಡಿಸಿದರು. ನಿವೃತ್ತ ಶಿಕ್ಷಕರಾದ ಎ.ಎನ್.ಶಿವಣ್ಣ, ಆರ್.ವೆಂಕಟೇಶ್, ಮತ್ತೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಎಚ್.ಡಿ.ವಾಸು, ಶಿಕ್ಷಕರಾದ ಅಶೋಕ್, ಭೈರವನಾಯಕ, ಉಷಾ, ಮೇರಿ, ಗಂಗಾಧರಯ್ಯ, ರವಿಕುಮಾರ್, ತಿರುಮಲಾಪುರ ಶಾಲೆಯ ಶಿಕ್ಷಕ ಗಿರೀಶ್, ಶಿಕ್ಷಕ ಶ್ರೀಧರ್ ಇತರರಿದ್ದರು.