ಮದ್ದೂರು ತಾಲೂಕಿನ ಪುರಾಣ ಪ್ರಸಿದ್ಧ ತಾಲೂಕಿನ ವೈದ್ಯನಾಥಪುರ ಗ್ರಾಮದ ವೈದ್ಯನಾಥೇಶ್ವರ ಸ್ವಾಮಿಗೆ ವಿಶೇಷ ಅಲಂಕಾರ ಮಾಡಿರುವುದು.
ಮದ್ದೂರು: ಮೂರನೇ ಕಾರ್ತಿಕ ಸೋಮವಾರದ ಅಂಗವಾಗಿ ತಾಲೂಕು ಸೇರಿದಂತೆ ಪಟ್ಟಣ ವ್ಯಾಪ್ತಿಯ ವಿವಿಧ ದೇವಾಲಯಗಳಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜಾ ಕೈಂಕರ್ಯ ಭಕ್ತಾದಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಸೋಮವಾರ ಬೆಳಗ್ಗೆಯಿಂದಲೇ ತಾಲೂಕಿನ ಸೋಮನಹಳ್ಳಿ ಶ್ರೀ ಮಹದೇಶ್ವರಸ್ವಾಮಿ, ಚನ್ನೇಗೌಡನದೊಡ್ಡಿ ಮಹದೇಶ್ವರ ಹಾಗೂ ಮುತ್ತುರಾಯಸ್ವಾಮಿ, ಆಲೂರು ಬೀರೇಶ್ವರ, ಚಾಪುರದೊಡ್ಡಿ ಮಹದೇಶ್ವರಸ್ವಾಮಿ ಸೇರಿದಂತೆ ಪಟ್ಟಣ ವ್ಯಾಪ್ತಿಯ ಹಳೇ ಬಸ್ ನಿಲ್ದಾಣದ ಬಳಿಯಿರುವ ಕಾಶಿವಿಶ್ವೇಶ್ವರ ವಿಶಾಲಾಕ್ಷಿ ದೇವಾಲಯದಲ್ಲಿ ವಿವಿಧ ಪೂಜಾ ವಿಧಿವಿಧಾನ ಜರುಗಿದವು.
ಪುರಾಣ ಪ್ರಸಿದ್ಧ ತಾಲೂಕಿನ ವೈದ್ಯನಾಥಪುರ ಗ್ರಾಮದ ಶ್ರೀ ಪ್ರಸನ್ನ ಪಾರ್ವತಾಂಬ ವೈದ್ಯನಾಥೇಶ್ವರ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ಅಪಾರ ಸಂಖ್ಯೆಯ ಭಕ್ತಾದಿಗಳು ಶಿಂಷಾ ನದಿಯಲ್ಲಿ ಮಿಂದು ಬಳಿಕ ಹರಕೆ ಸಲ್ಲಿಸಿ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ಶಿಂಷಾ ನದಿಯಲ್ಲಿ ಸ್ನಾನ ಮಾಡಿ ದೇವರ ದರ್ಶನ ಪಡೆದರೆ ಚರ್ಮವ್ಯಾಧಿ ಕಾಯಿಲೆಗಳು ಗುಣಮುಖವಾಗುತ್ತವೆಂಬುದು ಭಕ್ತಾದಿಗಳ ನಂಬಿಕೆ. ಆದ್ದರಿಂದ ಪ್ರತಿ ಸೋಮವಾರ ನಡೆಯುವ ವಿಶೇಷ ಪೂಜಾ ದಿನದಂದು ತಾಲೂಕು ಸೇರಿದಂತೆ ರಾಜ್ಯದ ವಿವಿದೆಢೆಯಿಂದ ನೂರಾರು ಸಂಖ್ಯೆಯ ಭಕ್ತರು ವೈದ್ಯನಾಥೇಶ್ವರ ದರ್ಶನ ಪಡೆದು ಪೂಜೆ ಸಲ್ಲಿಸುವುದು ವಿಶೇಷ.
ವೈದ್ಯನಾಥಪುರದ ಶ್ರೀ ವೈದ್ಯನಾಥೇಶ್ವರಸ್ವಾಮಿ ದೇವಾಲಯದಲ್ಲಿ ಕಾರ್ತಿಕ ಸೋಮವಾರದ ಅಂಗವಾಗಿ ದೇವಾಲಯದ ಮೂರ್ತಿಗೆ ಅಭಿಷೇಕ, ಅಲಂಕಾರ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನೆರವೇರಿದ ಬಳಿಕ ದೇವಾಲಯಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಬೆಳಗ್ಗೆ ಮತ್ತು ಮಧ್ಯಾಹ್ನ ಪ್ರಸನ್ನ ಪಾರ್ವತಾಂಬ ಸೇವಾ ಟ್ರಸ್ಟ್ ವತಿಯಿಂದ ಸಹಸ್ರಾರು ಭಕ್ತಾದಿಗಳಿಗೆ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು.