ಮನೆಯಲ್ಲಿ ಹಿರಿಯರಿದ್ದರೆ ಬಲು ಸೊಗಸು. ಅಜ್ಜ-ಅಜ್ಜಿ ಹಾಗೂ ಮೊಮ್ಮಕ್ಕಳ ಸಂಬಂಧಕ್ಕೆ ಬೇರಿಲ್ಲ ಸರಿಸಾಟಿ. ತಂದೆ-ತಾಯಿಗಿಂತಲೂ ಮಿಗಿಲು. ತಪು್ಪ-ಒಪು್ಪಗಳನ್ನು ಪ್ರೀತಿಯಿಂದಲೇ ಅಪ್ಪಿ ಜೀವನ ಪಾಠ ಕಲಿಸಿದವರು.... ಅಜ್ಜ- ಅಜ್ಜಿಯರ ಜಾಗತಿಕ ದಿನವಾದ ಇಂದು ನಾಡಿನ ಸಾಹಿತಿಗಳು, ಕಲಾವಿದರು, ಗಣ್ಯರು, ಸೆಲೆಬ್ರಿಟಿಗಳು ತಮ್ಮ ಅಜ್ಜ-ಅಜ್ಜಿಯರ ಕುರಿತ ಇಂತಹ ಒಡನಾಟ, ಅಭಿಮಾನವನ್ನಿಲ್ಲಿ ಮೆಲುಕು ಹಾಕಿದ್ದಾರೆ.
ಪ್ರೀತಿ, ವಿಶ್ವಾಸದ ಬೀಜ ಬಿತ್ತಿದ ಅಜ್ಜಿ
ನನ್ನ ಪ್ರೀತಿಯ ಅಜ್ಜಿ ಕಮಲಾವತಿ ಅಮ್ಮನವರು ಅಸಂಖ್ಯಾತ ಶ್ರಾವಿಕ ಕುಟುಂಬಗಳಿಗೆ ಪ್ರೇರಣೆ, ಜೈನ ಧರ್ಮದ ಮರ್ಮವನ್ನು ಅರಿತು ನಿಜ ಜೀವನದಲ್ಲಿ ವ್ರತದ ನಿಯಮವನ್ನು ಪಾಲಿಸುತ್ತಿದ್ದರು. ಎಲ್ಲ ಕುಟುಂಬಿಕರು, ಮೊಮ್ಮಕ್ಕಳಿಗೆ ಪರಸ್ಪರ ಪ್ರೀತಿ ವಿಶ್ವಾಸದಿಂದ ಇರಬೇಕು ಎಂದು ಹೇಳುತ್ತಿದ್ದರು. ಅದನ್ನು ನಮ್ಮ ಕುಟುಂಬ ಸದಸ್ಯರು ಇಂದಿನವರೆಗೂ ಪಾಲಿಸುತ್ತಿದ್ದೇವೆ.
| ಡಾ.ಡಿ.ವೀರೇಂದ್ರ ಹೆಗ್ಗಡೆ ಧರ್ಮಾಧಿಕಾರಿ, ಶ್ರೀಕ್ಷೇತ್ರ ಧರ್ಮಸ್ಥಳ
ಸಮಯ ಪ್ರಜ್ಞೆ ಕಲಿಸಿದ್ದೇ ಅಜ್ಜ
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪ್ರಖ್ಯಾತ ವಿಜ್ಞಾನಿಯೊಬ್ಬರು ಯಳಂದೂರು ತಾಲೂಕಿನ ಆಲ್ಕೆರೆ ಅಗ್ರಹಾರ ನಮ್ಮೂರು. ನನ್ನ ತಂದೆ ಸುಬ್ಬಣ್ಣ ಅವರ ಪಾಲಕರನ್ನು ನೋಡುವ ಸೌಭಾಗ್ಯ ನನಗೆ ಸಿಗಲಿಲ್ಲ. ಆದರೆ, ಅಮ್ಮ ಸುಶೀಲಮ್ಮ ಅವರ ಪಾಲಕರ ಪ್ರೀತಿ ನನಗೆ ಭರಪೂರ ದೊರೆತಿದೆ. ತಾತ ಸುಬ್ಬರಾವ್, ಅಜ್ಜಿ ನಾಗಮ್ಮ ತೋರಿದ ಕಾಳಜಿ ಅಪಾರ. ಅಜ್ಜಿಯ ಆರೈಕೆ ಮರೆಯಲಾಗದು. ನನ್ನ ಜೀವನದಲ್ಲಿ ಸಮಯ ಪ್ರಜ್ಞೆ, ಶಿಸ್ತುಬದ್ಧವಾಗಿ ಕೆಲಸ ಮಾಡುವುದನ್ನು ಕಲಿತಿದ್ದೇ ಅಜ್ಜನಿಂದ’
| ಪದ್ಮಶ್ರೀ ಪ್ರೊ. ಎಸ್. ಅಯ್ಯಪ್ಪನ್ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಅಧ್ಯಕ್ಷರು
ನನ್ನಜ್ಜ ರೋಲ್ ಮಾಡೆಲ್
ನನ್ನಜ್ಜ (ಮಾಜಿ ಸಿಎಂ ಬಿ.ಎಸ್.ಯಡಿಯೂಪ್ಪ) ರಾಜಕಾರಣದಲ್ಲಿ ಎಷ್ಟೇ ದೊಡ್ಡ ಮಟ್ಟಕ್ಕೆ ಬೆಳೆದರೂ ಅವರಿಗೆ ಒಂದಿಷ್ಟೂ ಗರ್ವವಿಲ್ಲ. ಅವರು ಜೀವನದಲ್ಲಿ ಶಿಸ್ತು ಪಾಲನೆಗೆ ಹೆಚ್ಚು ಒತ್ತು ಕೊಡುತ್ತಾರೆ. ರಾಜಕೀಯ, ವ್ಯಾವಹಾರಿಕ ಸೇರಿದಂತೆ ಯಾವುದೇ ಕ್ಷೇತ್ರವಿದ್ದರೂ ಯಾರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಅವರಿಂದ ನೋಡಿ ಕಲಿಯುವುದು ತುಂಬ ಇದೆ. ಮಾತು ಕಡಿಮೆ ಇದ್ದರೂ ಅವರ ಗಾಂಭೀರ್ಯ ನನಗಿಷ್ಟ. ಅವರ ಕರ್ತವ್ಯ ಬದ್ಧತೆ, ಆರೋಗ್ಯ ಕಾಳಜಿ, ಆಹಾರ-ವಿಹಾರ ಗಮನ ಸೆಳೆಯುವಂಥದ್ದು. ನಾವು ಬೆಂಗಳೂರಿಗೆ ಹೋದಾಗ ಶಿಕಾರಿಪುರ ಮತ್ತು ಶಿವಮೊಗ್ಗದಲ್ಲಿ ಮಳೆ-ಬೆಳೆ ಹೇಗಿದೆ ಎಂಬುದು ಅವರ ಮೊದಲ ಪ್ರಶ್ನೆ. ನಮ್ಮ ಉದ್ಯಮದ ಸ್ಥಿತಿಗತಿಯನ್ನು ಕೇಳಿ ತಿಳಿಯುತ್ತಾರೆ. ನನಗೆ ವ್ಯಾವಹಾರಿಕವಾಗಿ ಅಗತ್ಯ ಸಲಹೆ-ಸೂಚನೆ ನೀಡುತ್ತಾರೆ. ಅವರೊಂದಿಗೆ ಆರಾಮವಾಗಿ ಕುಳಿತು ಮಾತನಾಡುವುದು ಹಬ್ಬವಿದ್ದಂತೆ. ಎಷ್ಟೇ ಕಿರಿಯರಾದರೂ ಗೌರವ ಕೊಟ್ಟು ಮಾತನಾಡುವುದನ್ನು ಅವರಿಂದ ಕಲಿಯಬೇಕಿದೆ. ನನ್ನಜ್ಜನೇ ನನಗೆ ರೋಲ್ ಮಾಡೆಲ್.
| ಬಿ.ಆರ್.ಸುಭಾಷ್ ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರ ಪುತ್ರ
ಅಜ್ಜ-ಅಜ್ಜಿ ಇಲ್ಲದ ಮನೆ, ಮಜ್ಜಿಗೆ ಇಲ್ಲದ ಊಟ
ಪದವಿ ಓದುವಾಗಲೇ ತಾಯಿಯನ್ನು ಕಳೆದುಕೊಂಡ ನಾನು ನನ್ನ ತಾಯಿಯ ತಾಯಿ ಬಸಮ್ಮ, ತಂದೆಯ ತಾಯಿ ಲಿಂಗಮ್ಮ ಅವರ ಪ್ರೀತಿ, ಆರೈಕೆಯಲ್ಲಿ ಬೆಳೆದೆ. ತಾಯಿಯ ತಂದೆ ಲಿಂಗಪ್ಪ ಅವರು ಬಯಲಾಟ ಕಲಾವಿದರಾಗಿದ್ದು, ಭೀಮನ ಪಾತ್ರವನ್ನು ಮನೋಜ್ಞವಾಗಿ, ಲೀಲಾಜಾಲವಾಗಿ ಮಾಡುತ್ತಿದ್ದರು. ತಂದೆಯ ತಂದೆ ಯಲ್ಲಪ್ಪ ಕೃಷಿಕರಾಗಿದ್ದರೂ ಜೀವನದ ಮೌಲ್ಯ, ಗತ್ತು, ಗಾಂಭೀರ್ಯ ಅವರಲ್ಲಿ ಇತ್ತು. ಅಜ್ಜ, ಅಜ್ಜಿಯರು ಹೇಳಿಕೊಟ್ಟಿದ್ದಕ್ಕಿಂತ ಅವರನ್ನು ನೋಡಿ ಜೀವನ ಮೌಲ್ಯ ತಿಳಿದುಕೊಂಡಿದ್ದೇ ಹೆಚ್ಚು. ಇಬ್ಬರು ಅಜ್ಜಿಯರಾದ ಬಸಮ್ಮ, ಲಿಂಗಮ್ಮ ಅವರು ಎಷ್ಟು ಸಹನಾಮೂರ್ತಿಗಳಾಗಿದ್ದರು ಎಂದರೆ, ಕೂಡು ಕುಟುಂಬದಲ್ಲಿ ಇದ್ದರೂ ಎಂದೂ ಸಿಟ್ಟು, ಸೆಡವು ತೋರಿಸಿದವರಲ್ಲ. ಅಂತಹ ತಾಳ್ಮೆಯಿಂದಲೇ ಇಬ್ಬರೂ ಶತಾಯುಷಿಗಳಾಗಿದ್ದರು. ‘ಅಜ್ಜ-ಅಜ್ಜಿ ಇಲ್ಲದ ಮನೆ ಮಜ್ಜಿಗೆ ಇಲ್ಲದ ಊಟ’ ಎನ್ನುವ ನಾಣ್ಣುಡಿ ಅರ್ಥಪೂರ್ಣವಾಗಿದೆ. ಆಧುನಿಕ ದಿನಗಳಲ್ಲಿ ಅಜ್ಜ-ಅಜ್ಜಿ ಮಹತ್ವ ಕಡಿಮೆ ಅಗುತ್ತಿರುವುದು ಬೇಸರವಾಗುತ್ತದೆ.
| ಪ್ರೊ. ಕಾಳೇಗೌಡ ನಾಗವಾರ ಸಾಹಿತಿ, ಮಾಜಿ ಅಧ್ಯಕ್ಷರು, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ
ಜಾನಪದದ ಚಿಲುಮೆ, ಶ್ರಮ ಜೀವನದ ದುಡಿಮೆ
ನನ್ನ ತಾಯಿಯ ತಾಯಿ ಗಂಗೂಬಾಯಿ ನಮ್ಮ ಮನೆಯಲ್ಲಿದ್ದರು. ಅಜ್ಜಿ 80 ವಯಸ್ಸಿನವರೆಗೆ ಜಾನಪದ ಹಾಡುಗಳನ್ನು ಹಾಡುತ್ತಿದ್ದರು. ಅದರ ಪ್ರಭಾವ ನಮಗೆ ತುಂಬ ಆಗಿತ್ತು. ‘ಆಚಾರಕ್ಕೆ ಅರಸಾಗು, ನೀತಿಗೆ ಪ್ರಭುವಾಗು, ಮಾತಿನಲ್ಲಿ ಮಣಿಯಾಗು ನನ ಕಂದ, ಜ್ಯೋತಿಯೇ ಆಗು ಜಗಕೆಲ್ಲ’ ಎಂದು ರಾಗಬದ್ಧವಾಗಿ ಹಾಡುತ್ತ ನಿತ್ಯ ನಾಲ್ಕು ಸೇರು ಜೋಳವನ್ನು ತಾಯಿ ಮತ್ತು ಅಜ್ಜಿ ಇಬ್ಬರೂ ಬೀಸುತ್ತಿದ್ದರು. ನಾನಾಗ ನಾಲ್ಕೈದು ವರ್ಷದ ಹುಡುಗನಾಗಿದ್ದೆ. ಅವರು ಹಾಡುವುದನ್ನು ಕೇಳಿ ಕೇಳಿಯೇ ಎಂ.ಎ. ಜಾನಪದ ಮಾಡಲು ಪ್ರೇರಣೆ ಸಿಕ್ಕಿತು. ನಮ್ಮ ಮನೆಯಲ್ಲಿ ಒಕ್ಕಲುತನ ಇತ್ತು. ಎಮ್ಮೆ, ಆಕಳು, ಕುದುರೆ, ಹೊಲದಲ್ಲಿ ಬಣವೆ ಒಟ್ಟುವುದು, ಕಳೆ ಕೀಳುವುದು ಎಲ್ಲವನ್ನೂ ಅಜ್ಜಿ ಮಾಡುತ್ತಿದ್ದಳು. ಏಳು ಮೊಮ್ಮಕ್ಕಳನ್ನು ಸಲುಹಿದ ಮಹಾತಾಯಿ ನಮ್ಮ ಇಡೀ ಜೀವನಕ್ಕೆ ಪ್ರೇರಣೆ.
| ಸ್ವಾಮಿರಾವ ಕುಲಕರ್ಣಿ ಹಿರಿಯ ಸಾಹಿತಿ ಕಲಬುರಗಿ
ಇನ್ನೊಬ್ಬರ ಕಷ್ಟಕ್ಕೆ ಸ್ಪಂದನೆ ಕಲಿತಿದ್ದೇನೆ
ನಾವು ಚಿಕ್ಕವರಿದ್ದಾಗ ಹುಟ್ಟಿ ಬೆಳೆದದ್ದೆಲ್ಲ ಅಜ್ಜಿ ಮನೆಯಲ್ಲಿ. ನಮ್ಮ ಅಜ್ಜಿ ನಿಂಗಮ್ಮ ಗೌಡಶಾನಿ ಎಂದರೆ ನನಗೆ ಎಲ್ಲಿಲ್ಲದ ಪ್ರೀತಿ. ನಾನು 30 ವರ್ಷದವನಾಗುವವರೆಗೂ ಅವರು ಜೀವಂತವಿದ್ದರು. ಹೀಗಾಗಿ ನನ್ನ ಬದುಕು, ಬರಹ, ನಡವಳಿಕೆ ಮೇಲೆ ಅವರ ಪ್ರಭಾವ ಸಾಕಷ್ಟಿದೆ. ಚಿಕ್ಕವನಿದ್ದಾಗ ನನ್ನನ್ನು ಅತ್ಯಂತ ಪ್ರೀತಿಯಿಂದ ಬೆಳೆಸಿದರು. ಆಗಿನ ಕಾಲದಲ್ಲಿ ನಮ್ಮದು ದೊಡ್ಡ ಕುಟುಂಬ. ನಮ್ಮ ದಿನಸಿ ಅಂಗಡಿ ಇತ್ತು. ಹಸಿದು ಬಂದವರಿಗೆ ದಾನ, ಧರ್ಮ, ಪರೋಪಕಾರ ಮಾಡುವುದನ್ನು ಅಜ್ಜಿ ಹೇಳಿಕೊಡುತ್ತಿದ್ದರು. ಮನೆಯಲ್ಲಿ ತಿನ್ನಲು ಏನೂ ಇಲ್ಲ ಎಂದು ಯಾರಾದರೂ ಕೇಳಿದರೆ ಜೋಳ, ಸಜ್ಜೆ ಮುಂತಾದ ದವಸಗಳನ್ನು ನೀಡುತ್ತಿದ್ದರು. ಪ್ರೀತಿ, ಮಮಕಾರ, ಅಂತಃಕರಣ ಭಾವನೆಗಳು ಕಲಿತಿದ್ದೆ ಅಜ್ಜಿಯ ಮೂಲಕ. ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸಬೇಕು ಎಂಬುದನ್ನು ಅವರಿಂದ ಕಲಿತಿದ್ದೇನೆ.
| ಎಚ್.ಎಸ್.ಪಾಟೀಲ್ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ, ಕೊಪ್ಪಳ
ನಮ್ಮಜ್ಜಿ ಅಡುಗೆ ಸೂಪರ್
ನಾನು ಅಜ್ಜಿ ಜತೆಯಲ್ಲೇ ಇಷ್ಟು ಹೊತ್ತು ಇದ್ದೆ. ಅಜ್ಜಿ ಕಲಬುರ್ಗಿಯಿಂದ ಬಂದಿದ್ದಾರೆ. ಉತ್ತರ ಕರ್ನಾಟಕದ ಶೇಂಗಾ ಚಟ್ನಿ ಅಂದರೆ ನನಗಿಷ್ಟ. ಹೀಗಾಗಿ ಪ್ರತಿ ಬಾರಿಯಂತೆ ಈ ಬಾರಿಯೂ ಅದನ್ನು ಮಾಡಿಕೊಂಡು ತಂದಿದ್ದಾರೆ. ಬಾಲ್ಯದಲ್ಲಿ ಪ್ರತಿ ಬೇಸಿಗೆ ರಜೆಯಲ್ಲೂ ಊರಿಗೆ ಹೋಗುತ್ತಿದ್ದೆ. ನಾವು ಏನನ್ನಾದರೂ ಕೇಳಿದರೆ ಅಪ್ಪ, ಅಮ್ಮ ಕೊಡಿಸದಿದ್ದರೂ ಅಜ್ಜಿ ಕೊಡಿಸುತ್ತಿದ್ದರು. ರಾತ್ರಿ ಕಥೆ ಹೇಳುತ್ತಾ ಮಲಗಿಸುತ್ತಿದ್ದರು. ಅವರ ಜತೆ ಕಳೆಯುವ ಪ್ರತಿ ಕ್ಷಣ ಅಮೂಲ್ಯ. ಅಷ್ಟು ಖುಷಿ.
ತಪ್ಪಿನ ಅರಿವು ಮೂಡಿಸಿದರು
ಒಮ್ಮೆ ಅಜ್ಜನ ಕಿಸೆಯಿಂದ 2.50ರೂ. ಕದ್ದಿದ್ದೆ. ಅದು ಅಜ್ಜನಿಗೆ ಗೊತ್ತಾಗಿ ಬೆಳಗ್ಗೆ ಅಜ್ಜಿ ಜತೆ ನನಗೆ ಕೇಳಿಸುವಂತೆ ‘ಏನೇ ಯಜಮಾನಿ, ನಾವು ಕೆಟ್ಟ ಹುಳು ಸಾಕಿದೆವಲ್ಲ’ ಎಂದು ರಾಗವಾಗಿ ಹೇಳಿದರು. ಅದಕ್ಕೆ ಅಜ್ಜಿ ‘ಹುಳು ವಿಷಕಾರಿಯಾಗದಂತೆ ಎಚ್ಚರ ವಹಿಸೋಣ’ ಎಂದರು. ಇದು ನನ್ನ ಜೀವನದ ಮಾರ್ಗ ಬದಲಾವಣೆಗೆ ಕಾರಣವಾಯಿತು. ಹುಟ್ಟಿದ ಮೂರೇ ತಿಂಗಳಿಗೆ ಅಪ್ಪ, ಅಮ್ಮನನ್ನು ಕಳೆದುಕೊಂಡಿದ್ದ ನನಗೆ ಪಾಲಕರಾದ ಅಜ್ಜ ನಾರಾಯಣರಾವ್, ಅಜ್ಜಿ ವೆಂಕಮ್ಮಸರ್ವಸ್ವ. ಅಜ್ಜಿಯ ಗಾದೆ ಮಾತುಗಳಿಂದ ಮೊರಸುನಾಡು ಭಾಷಾ ಸೌಂದರ್ಯ ಅರ್ಥೈಸಿಕೊಂಡೆ. ಅಜ್ಜನ ಬಾಯಿಂದ ಸುಮಧುರವಾಗಿ ಕೇಳಿಬರುತ್ತಿದ್ದ ದಾಸರ ಕೀರ್ತನೆಗಳು, ತತ್ವಪದಕಾರರ ತತ್ವಪದಗಳು ಶಿಕ್ಷಣದಲ್ಲಿ ಆಸಕ್ತಿ, ಸಮಾಜವನ್ನು ಅರ್ಥೈಸಿಕೊಳ್ಳಬೇಕಾದ ರೀತಿಯನ್ನು ಕಲಿಸಿತು. ಇದರ ಜತೆಗೆ ಸಿದ್ಧಗಂಗಾ ಶ್ರೀಗಳ ಸಾಮಾಜಿಕ ಕಳಕಳಿ, ಬದ್ಧತೆ ಸಹ ನನ್ನ ಜೀವನದ ಮೇಲೆ ಪ್ರಭಾವ ಬೀರಿತು. 1ರಿಂದ 10ನೇ ತರಗತಿವರೆಗೆ ಶಾಲೆಯಲ್ಲಿ ಕಲಿತಿದ್ದಕ್ಕಿಂತ ಅಜ್ಜ ಅಜ್ಜಿಯ ಮಡಿಲಲ್ಲೇ ಕಾಗುಣಿತ ಕಲಿತೆ. ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕ, ಶಿಕ್ಷಣದ ಅರಿವು ಮೂಡಿಸಿದವರೇ ಅಜ್ಜ-ಅಜ್ಜಿ ಎಂದರೆ ತಪ್ಪಾಗಲಾರದು. ಅವರೇ ನನ್ನನ್ನು ಸನ್ಮಾರ್ಗದಲ್ಲಿ ನಡೆಸಿದರು.
| ಸ.ರಘುನಾಥ ಖ್ಯಾತ ಸಾಹಿತಿ, ಪರಿಸರವಾದಿ, ಮಲಿಯಪ್ಪನಹಳ್ಳಿ
ನೀನು ಶಿಕ್ಷಕನಾದರೆ, ಶಿಷ್ಯರು ಸೈನಿಕರಾಗ್ತಾರೆ!
ಅಂದು ನಾನು ಮಾಧ್ಯಮಿಕ ಶಿಕ್ಷಣ ಪಡೆಯುತ್ತಿದ್ದೆ. ಆಗಲೇ ಸೈನಿಕನಾಗಬೇಕೆಂಬ ಕನಸು ಕಂಡಿದ್ದೆ. ಆದರೆ, ಒಂದು ದಿನ ನನ್ನ ಅಜ್ಜ ಸಿದ್ರಾಮಪ್ಪ ಹಾಗೂ ಅಜ್ಜಿ ದುಂಡವ್ವ ಪೂಜಾರ ‘ನೋಡು ಹನುಮ, ನಿನ್ನಪ್ಪ ಮಾಸ್ತರ್ ಆಗ್ಯಾನ. ನೀನೊಬ್ಬ ಮಿಲ್ಟ್ರಿ ಸೇರಿದರ ಸಾಕ. ನಿನ್ನಪ್ಪನಂತೆ ನೀನು ಮಾಸ್ತರ್ ಆಗು. ಮಕ್ಕಳನ್ನು ಛಲೋ ತಯಾರು ಮಾಡು. ಆ ಮಕ್ಕಳಿಂದ ನಿನ್ನ ಗೌರವ ಹೆಚ್ಚಾಗ್ತದ. ಛಲೋ ಕಲಿಸಲಿಲ್ಲ ಅಂದ್ರ.. ಶಿಶು ಹತ್ಯೆ ಮಾಡಿದ್ಹಂಗ. ನಿನ್ನಿಂದ ಶಿಕ್ಷಣ ಪಡೆದ ಸಾವಿರಾರು ಮಕ್ಕಳಲ್ಲಿ ಯೋಗ್ಯರಾದವರು ಸೈನ್ಯ ಸೇರ್ತಾರ. ದೇಶದ ಗಡಿ ಕಾಯ್ದು ನೀ ಕಂಡ ಕನಸು ನನಸು ಮಾಡೋ ಮೂಲಕ ಹೆಸರು ತರ್ತಾರ. ನೀನು ಶಿಕ್ಷಕ ಆದರೆ, ನಿನ್ನ ಶಿಷ್ಯರು ಸೈನಿಕರಾಗ್ತಾರ’ ಎಂದಿದ್ದರು. ಹಿರಿಯರ ಮಾತು ಅಕ್ಷರಶಃ ಸತ್ಯವಾಗಿದೆ. ಸದ್ಯ ನಾನು ಕಲಿಸಿದ ಅದೆಷ್ಟೋ ಮಕ್ಕಳು ಶಿಕ್ಷಣ ಪಡೆದು ಸೈನ್ಯ, ಶಿಕ್ಷಕ, ಇಂಜಿನಿಯರ್, ಡಾಕ್ಟರ್ ಆಗಿ ಸೇವೆ ಸಲ್ಲಿಸುತ್ತಿರುವುದು ನನ್ನ ಸೌಭಾಗ್ಯ. ಅಜ್ಜ-ಅಜ್ಜಿ ಅಂದು ಕೊಟ್ಟ ಪ್ರೋತ್ಸಾಹ ನುಡಿಗಳಿಂದ ನನ್ನ ಜೀವನ ಸಾರ್ಥಕವೆನಿಸಿದೆ.
| ಹ. ಮ. ಪೂಜಾರ ಹಿರಿಯ ಸಾಹಿತಿಗಳು, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕರು ಸಿಂದಗಿ, ವಿಜಯಪುರ
ಅವ್ವ ಅಂದ್ರೆ ಪ್ರಾಣ...
ನಾವು ಇವತ್ತು ಇಷ್ಟು ಚೆನ್ನಾಗಿ ಜೀವನ ಮಾಡುತ್ತಿರಲು ಕಾರಣ ನನ್ನ ಅಜ್ಜಿ, ತಾತ. ನಾನು ಬಾಲ್ಯದಿಂದಲೂ ಹೆಚ್ಚಾಗಿ ಬೆರೆತಿದ್ದ ಅಜ್ಜಿ ಈಗ್ಗೆ ಒಂಬತ್ತು ವರ್ಷಗಳ ಹಿಂದೆ ತೀರಿಕೊಂಡರು. ಈಗ ಯಾರೂ ಇಲ್ಲ. ಆದರೆ, ಅವರ ಜತೆ ಕಳೆದ ಪ್ರತಿ ಕ್ಷಣ ನನ್ನ ಜತೆ ಯಾವಾಗಲೂ ಇರುತ್ತೆ. ಅಜ್ಜಿಯನ್ನು ನಾನು ಅವ್ವ ಅಂತ ಕರೆಯುತ್ತಿದ್ದೆ. ಆಗಾಗ ಸಿಂಗಿ ಅಂತ ಹೆಸರಿಡಿದು ಕರೆಯುತ್ತಿದ್ದೆ. ಆಗ ಕೋಪ ಮಾಡಿಕೊಂಡಂತೆ ಜಗಳವಾಡುತ್ತಿದ್ದರು. ಅಪ್ಪ, ಅಮ್ಮನಿಗಿಂತ ಹೆಚ್ಚು ಪ್ರೀತಿ ಅವರ ಮೇಲೆ. ಅವರ ನೆನಪು ನನ್ನ ಜತೆ ಶಾಶ್ವತವಾಗಿರುತ್ತವೆ.
ಸದ್ಗುಣ ಕಲಿಸಿದರು
ನಾವು ಸಣ್ಣವರಿದ್ದಾಗ ನನ್ನನ್ನು ಹಾಗೂ ನನ್ನ ತಾಯಿಯನ್ನು ಕಾಪಾಡಿ ಜೋಪಾನ ಮಾಡಿದವರು ನನ್ನ ಅಜ್ಜ ವಿರೂಪಾಕ್ಷ ಹಂಪಣ್ಣವರ. ಧಾರವಾಡ ತಾಲೂಕಿನ ಯಾದವಾಡ ಗ್ರಾಮದಲ್ಲಿ ನಾನು ಕಲಿಯಲು ಸಹಾಯ ಮಾಡಿದರು. ಮನೆಯಲ್ಲಿ ಬಡತನ ಇದ್ದ ಕಾರಣ ಇನ್ನೊಬ್ಬರ ಹೊಲದಲ್ಲಿ ಪ್ರಾಮಾಣಿಕವಾಗಿ ದುಡಿಯುತ್ತಿದ್ದರು. ಅವರ ಪ್ರಾಮಾಣಿಕತೆ ಹಾಗೂ ದುಡಿಯುವ ಪ್ರವೃತ್ತಿಯನ್ನು ಇಂದಿಗೂ ನೆನಪಿಸಿಕೊಳ್ಳುತ್ತೇವೆ. ನಾವು ಈ ಮಟ್ಟಕ್ಕೆ ಬೆಳೆಯಲು ಅವರು ಕಲಿಸಿರುವ ಸದ್ಗುಣಗಳೇ ಕಾರಣ. ಆದರೆ, ಅಂತಹ ಗುಣಗಳನ್ನು ನಾವು ನಮ್ಮ ಮೊಮ್ಮಕ್ಕಳಿಗೆ ಕೊಡಲಾಗುತ್ತಿಲ್ಲ. ಹಿಂದಿನ ಕಾಲದಲ್ಲಿ ಸಂತೆ, ಪೇಟೆಗೆ ಚಕ್ಕಡಿ, ಕಾಲ್ನಡಿಗೆಯಲ್ಲೇ ಹೋಗಿ ಬರುತ್ತಿದ್ದರು. ಸೌಲಭ್ಯಗಳು ಇಲ್ಲದಿದ್ದರೂ ಯಾವುದಕ್ಕೂ ಬೇಸರ ಮಾಡಿಕೊಳ್ಳುತ್ತಿರಲಿಲ್ಲ. ಬಂದಿದ್ದನ್ನು ಬಂದ ಹಾಗೆ ಸ್ವೀಕರಿಸಲು ಅಜ್ಜ ನನಗೆ ಕಲಿಸಿದರು.
| ಸಿದ್ದಲಿಂಗ ಪಟ್ಟಣಶೆಟ್ಟಿ ಸಾಹಿತಿ ಧಾರವಾಡ
ನನ್ನ ಅಜ್ಜಿ ಬೆಸ್ಟ್!
ನನ್ನ ಅಜ್ಜ - ಅಜ್ಜಿ ಇಬ್ಬರೂ ಮುಂಬೈನಲ್ಲಿದ್ದರು. ನಾನು, ನನ್ನ ಅಣ್ಣ ಪ್ರತಿ ರಜೆಯಲ್ಲೂ ಅಲ್ಲಿಗೆ ಹೋಗುತ್ತಿದ್ದೆವು. ಅಜ್ಜನಿಗೆ ಪಾರ್ಶ್ವವಾಯು ಆಗಿತ್ತು. ಆದರೂ ನಮ್ಮ ಜತೆ ಆಟವಾಡುತ್ತಿದ್ದರು. ಕ್ರಿಸ್ಮಸ್ ಸಮಯದಲ್ಲಿ ನಮಗೇನು ಉಡುಗೊರೆ ಬೇಕು ಎಂಬುದನ್ನು ಬರೆದು, ದಿಂಬಿನ ಕೆಳಗಿಟ್ಟು ಮಲಗಿದರೆ, ಸಂತಾಕ್ಲಾಸ್ ಆ ಗಿಫ್ಟ್ ಕೊಡುತ್ತಾನೆ ಅನ್ನೋ ಮಾತಿದೆ. ಅದರಂತೆಯೇ ಬಾಲ್ಯದಲ್ಲಿ ಬರೆದಿಡುತ್ತಿದ್ದೇವು. ಮೂರು ವರ್ಷ ಅಜ್ಜಿಯೇ ಗಿಫ್ಟ್ ಇಟ್ಟಿದ್ದರು. ಚಿಕ್ಕ ವಯಸ್ಸಿನಲ್ಲಿ ನನಗೆ ಅಷ್ಟು ತಿಳಿಯುತ್ತಿರಲಿಲ್ಲ. ಕ್ರಮೇಣ ಅಜ್ಜಿಯೇ ಗಿಫ್ಟ್ ಕೊಡುತ್ತಿದ್ದಾರೆ ಅಂತ ಗೊತ್ತಾಯಿತು. ಅಜ್ಜಿಯಿಂದಲೇ ನಾನು ಶಿಸ್ತು ಕಲಿತಿದ್ದು. ನಾನು ಅಜ್ಜಿ ಅದೆಷ್ಟು ಬಾರಿ ಟಿವಿ ರಿಮೋಟ್ಗಾಗಿ ಜಗಳವಾಡಿದ್ದೆವೋ ಗೊತ್ತಿಲ್ಲ. ನಾನೊಬ್ಬಳೇ ಮೊಮ್ಮಗಳಾದ ಕಾರಣ ನನ್ನ ಮದುವೆ ನೋಡಬೇಕು ಅಂತ ಆಸೆಪಟ್ಟಿದ್ದರು. ಆದರೆ, ಕಳೆದ ಡಿಸೆಂಬರ್ನಲ್ಲಿ ವಿಧಿವಶರಾದರು. ನನ್ನ ಅಜ್ಜಿ ಬೆಸ್ಟ್. ಅವರ ಜತೆಗೆ ಕಳೆದ ಪ್ರತಿಕ್ಷಣವೂ ನನ್ನೊಂದಿಗೆ ಉಳಿದಿವೆ.