ಉತ್ತರಾದಿ ಮಠಾಧೀಶ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳು ಹೊಳೆಹೊನ್ನೂರಿನ ಶ್ರೀ ಸತ್ಯಧರ್ಮ ಮಠದಲ್ಲಿ ಸಂಸ್ಥಾನ ದೇವರ ಪೂಜೆ ನೆರವೇರಿಸಿದರು. 
ನ್ಯೂಸ್

ಅಧಿಕ ಮಾಸದಲ್ಲಿ ಮಾಡುವ ಕಾರ್ಯಗಳಿಂದ ವಿಶೇಷ ಪುಣ್ಯ

ಶಿವಮೊಗ್ಗ: ಸಾಧನೆ ಮಾಡುವುದಕ್ಕೆ ಅಧಿಕ ಮಾಸ ಅತ್ಯಂತ ಪವಿತ್ರ ಹಾಗೂ ಉತ್ತಮ ಕಾಲ. ಈ ಅವಧಿಯಲ್ಲಿ ಮಾಡಿದ ಕಾರ್ಯಗಳು ಭಗವಂತನ ವಿಶೇಷ ಪ್ರೀತಿಗೆ ಪಾತ್ರವಾಗಲಿವೆ. ವಿಶೇಷ ಪುಣ್ಯ ಪ್ರಾಪ್ತಿಯಾಗಲಿದೆ ಎಂದು ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳು ಹೇಳಿದರು.

ಚಾತುರ್ಮಾಸ್ಯ ಸಂದರ್ಭ ಶ್ರೀಪಾದಂಗಳವರು ಅಧಿಕ ಶ್ರಾವಣ ಮಾಸದಲ್ಲಿ ಮಕ್ಕಳು, ಯುವಕರು ಮತ್ತು ಯುವತಿಯರು ಏನು ಮಾಡಬೇಕು ಮತ್ತು ಏನು ಮಾಡಬಾರದೆಂಬ ಕುರಿತು ಸಂದೇಶ ನೀಡಿದರು.
ಅಧಿಕ ಮಾಸದಲ್ಲಿ ಆಚರಿಸಲು ಹಿರಿಯರಿಗೆ ಅನೇಕ ಕಠಿಣ ವ್ರತಗಳಿವೆ. ಆದರೆ ಮಕ್ಕಳು ಮತ್ತು ಯುವಕರು ಕೂಡ ಸರಳವಾಗಿ ಸಾಧನಾ ಮಾರ್ಗದಲ್ಲಿ ಸಾಗಬಹುದು ಮತ್ತು ವಿಶೇಷ ಪುಣ್ಯ ಗಳಿಸಬಹುದು. ಆರಂಭದಲ್ಲೇ ಕಠಿಣ ನೇಮಗಳ ಆಚರಣೆ ಅಸಾಧ್ಯ. ಹೀಗಾಗಿ ಮಕ್ಕಳು ಅಧಿಕ ಮಾಸದ ಈ ಒಂದು ತಿಂಗಳು ಪ್ರತಿ ದಿನ 33 ಬಾರಿ ಹರಿನಾಮ ಸ್ಮರಣೆ ಮಾಡಬೇಕು. ಹತ್ತಿರದಲ್ಲಿ ದೇವಸ್ಥಾನವಿದ್ದರೆ ನಿತ್ಯವೂ ಪ್ರದಕ್ಷಿಣಾ ನಮಸ್ಕಾರ ಮಾಡಬೇಕು. ತಂದೆ-ತಾಯಂದಿರು ಇದನ್ನು ಮಾಡಿಸಬೇಕು ಎಂದರು.
ಒಂದು ತಿಂಗಳ ಅವಧಿಯಲ್ಲಿ ಊಟ ಮಾಡುವಾಗ ಟಿವಿ ಮತ್ತು ಮೊಬೈಲ್ ನೋಡುವುದಿಲ್ಲ ಎಂಬ ಸಂಕಲ್ಪ ಮಾಡಿ. ಊಟದ ವೇಳೆಯೂ ದೇವರ ಸ್ಮರಣೆ ಮಾಡಿ. ಇದರಿಂದ ತಿನ್ನುವ ಆಹಾರವೂ ಪವಿತ್ರವಾಗುತ್ತದೆ. ಅಧಿಕ ಮಾಸದಲ್ಲಿ ಈ ವ್ರತಗಳನ್ನು ಆಚರಿಸಿದರೆ ಏಕಾಗ್ರತೆ ಸಾಧ್ಯ. ನಿಮ್ಮ ಓದಿಗೂ ಅನುಕೂಲವಾಗುತ್ತದೆ. ದೇವರ ಪ್ರೀತಿಗೂ ಪಾತ್ರರಾಗುತ್ತೀರಿ ಎಂದು ಮಕ್ಕಳಿಗೆ ಮತ್ತು ಯುವಕರಿಗೆ ಶ್ರೀಗಳು ಕಿವಿಮಾತು ಹೇಳಿದರು.
ಭಾಗವತ ಶ್ರವಣದಿಂದ ಪುಣ್ಯ: ಭಾಗವತ ಶ್ರವಣದಿಂದ ಅನಂತ ಪುಣ್ಯವಿದೆ. ಹೇಳುವವ, ಪ್ರಶ್ನೆ ಕೇಳುವವ ಮತ್ತು ಇವರಿಬ್ಬರ ಸಂವಾದ ಆಲಿಸುವವರಿಗೂ ಪುಣ್ಯವಿದೆ. ಶ್ರೀ ಸತ್ಯಧರ್ಮ ತೀರ್ಥರು ಭಾಗವತವನ್ನು ವೇದವ್ಯಾಸ ದೇವರು, ಶ್ರೀ ಮಧ್ವಾಚಾರ್ಯರು, ಶ್ರೀ ವಿಜಯಧ್ವಜ ತೀರ್ಥರೇ ಮೊದಲಾದ ಆಚಾರ್ಯರಿಂದ ಕೊಂಡು ನಮಗೆ ಕೊಟ್ಟಿದ್ದಾರೆ. ಕೊಂಡು ಎಂದರೆ ಇಲ್ಲಿ ಅರ್ಥದಿಂದ (ಹಣದಿಂದ) ಎಂದು ಭಾವಿಸಬಾರದು. ವ್ಯಾಖ್ಯಾನದ ಮೂಲಕ ಒಂದೊಂದು ಶಬ್ದಕ್ಕೂ ಅನೇಕ ಅರ್ಥಗಳ (ನಿರೂಪಣೆ) ಮೂಲಕ ಭಗವಂತನ ಸೇವೆ ಮಾಡಿದ್ದಾರೆ. ವಿದ್ವಜ್ಜನರಿಗೆ ಉಪಕಾರ ಮಾಡಿದ್ದಾರೆ ಎಂದು ಶ್ರೀ ಸತ್ಯಾತ್ಮ ತೀರ್ಥರು ದಶಮ ಸ್ಕಂದ ಕುರಿತ ಪ್ರವಚನದಲ್ಲಿ ತಿಳಿಸಿದರು.