ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸೆಲೂನ್‌ಗಳು, ಸ್ಪಾ, ಮಸಾಜ್ ಕೇಂದ್ರಗಳು, ಬ್ಯೂಟಿ ಪಾರ್ಲರ್‌ಗಳು, ಯುನಿಸೆಕ್ಸ್ ಸಲೂನ್‌ಗಳು ಹಾಗೂ ಜಿಮ್ನೇಷಿಯಂಗಳ ನಿಯಂತ್ರಣಕ್ಕಾಗಿ ಪ್ರತ್ಯೇಕ ಕಾನೂನು ಜಾರಿಗೆ ತರಲು ಕರ್ನಾಟಕ ಕಾನೂನು ಆಯೋಗ ಸರ್ಕಾರಕ್ಕೆ ಮಹತ್ವದ ಶಿಫಾರಸು ಮಾಡಿದೆ. 
ನ್ಯೂಸ್

ಸೆಲೂನ್, ಸ್ಪಾ ಮತ್ತು ಬ್ಯೂಟಿ ಪಾರ್ಲರ್‌ಗಳಿಗೆ ವಿಶೇಷ ಕಾನೂನು

ಮಂಗಳೂರು: ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸೆಲೂನ್‌ಗಳು, ಸ್ಪಾ, ಮಸಾಜ್ ಕೇಂದ್ರಗಳು, ಬ್ಯೂಟಿ ಪಾರ್ಲರ್‌ಗಳು, ಯುನಿಸೆಕ್ಸ್ ಸಲೂನ್‌ಗಳು ಹಾಗೂ ಜಿಮ್ನೇಷಿಯಂಗಳ ನಿಯಂತ್ರಣಕ್ಕಾಗಿ ಪ್ರತ್ಯೇಕ ಕಾನೂನು ಜಾರಿಗೆ ತರಲು ಕರ್ನಾಟಕ ಕಾನೂನು ಆಯೋಗ ಸರ್ಕಾರಕ್ಕೆ ಮಹತ್ವದ ಶಿಫಾರಸು ಮಾಡಿದೆ. ಮಂಗಳೂರಿನ ಮಾಜಿ ಸರ್ಕಾರಿ ವಕೀಲ ಮನೋರಾಜ್ ರಾಜೀವ ಅವರು ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಿ ಆಯೋಗ ತನ್ನ 76ನೇ ವರದಿಯಲ್ಲಿ ಈ ಶಿಫಾರಸುಗಳನ್ನು ನೀಡಿದೆ.
ಪ್ರಸ್ತುತ ರಾಜ್ಯದಲ್ಲಿ ಸ್ಪಾ ಮತ್ತು ಮಸಾಜ್ ಕೇಂದ್ರಗಳ ಕಾರ್ಯನಿರ್ವಹಣೆಯನ್ನು ನೇರವಾಗಿ ನಿಯಂತ್ರಿಸುವ ಸ್ಪಷ್ಟ ಕಾನೂನು ಇಲ್ಲ. ಈ ಹಿನ್ನೆಲೆಯಲ್ಲಿ ಆಯೋಗವು ದೇಶ-ವಿದೇಶಗಳ ಕಾನೂನು ಮಾದರಿಗಳನ್ನು ಅಧ್ಯಯನ ನಡೆಸಿದ್ದು, ವಿಶೇಷವಾಗಿ ಸಿಂಗಾಪುರ್, ಅಮೆರಿಕದ ಹಲವು ರಾಜ್ಯಗಳು ಹಾಗೂ ಫಿಲಿಪ್ಪೀನ್ಸ್‌ನಲ್ಲಿ ಜಾರಿಯಲ್ಲಿರುವ ನಿಯಮಾವಳಿಗಳನ್ನು ಪರಿಶೀಲಿಸಿದೆ. ಕಾನೂನು ಆಯೋಗವು 2024ರ ಕಾಯಿದೆಯೊಂದಕ್ಕೆ ತಿದ್ದುಪಡಿ ತಂದು, ಆಯುರ್ವೇದ ಆರೋಗ್ಯ ಕೇಂದ್ರಗಳು, ಸ್ಪಾ, ಯುನಿಸೆಕ್ಸ್ ಸಲೂನ್‌ಗಳು, ಬ್ಯೂಟಿ ಪಾರ್ಲರ್‌ಗಳು ಮತ್ತು ಜಿಮ್‌ಗಳಿಗೆ ಕಡ್ಡಾಯ ಪರವಾನಗಿ ವ್ಯವಸ್ಥೆ ಜಾರಿಗೆ ತರಲು ಶಿಫಾರಸು ಮಾಡಿದೆ. ಪರವಾನಗಿ ಷರತ್ತುಗಳನ್ನು ಉಲ್ಲಂಘಿಸಿದರೆ 10 ಸಾವಿರ ರೂಪಾಯಿವರೆಗೆ ದಂಡ ವಿಧಿಸುವ ಹಾಗೂ ಮರು ಉಲ್ಲಂಘನೆಯಾದರೆ ಪರವಾನಗಿಯನ್ನು ರದ್ದುಪಡಿಸುವ ಅಧಿಕಾರವನ್ನು ಸ್ಥಳೀಯಾಡಳಿತಕ್ಕೆ ನೀಡುವಂತೆ ಸಲಹೆ ನೀಡಲಾಗಿದೆ.
*ಹೊಸ ನಿಯಮಾವಳಿ ಪ್ರಸ್ತಾಪ
ಪ್ರಸ್ತಾವಿತ ಮಾದರಿ ನಿಯಮಾವಳಿಗಳ ಪ್ರಕಾರ, ಸ್ಪಾ ಕೇಂದ್ರಗಳಲ್ಲಿ ಯಾವುದೇ ರೀತಿಯ ಲೈಂಗಿಕ ಚಟುವಟಿಕೆ ಸಂಪೂರ್ಣ ನಿಷೇಧವಾಗಿರಲಿದೆ. ಪುರುಷ ಮತ್ತು ಮಹಿಳೆಯರ ವಿಭಾಗಗಳನ್ನು ಪ್ರತ್ಯೇಕವಾಗಿ ನಿರ್ವಹಿಸಬೇಕು. ಗ್ರಾಹಕರ ಗುರುತಿನ ಚೀಟಿ ದಾಖಲೆ ಕಡ್ಡಾಯವಾಗಿದ್ದು, ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಕನಿಷ್ಠ ಮೂರು ತಿಂಗಳು ದೃಶ್ಯಾವಳಿಗಳನ್ನು ಸಂರಕ್ಷಿಸಬೇಕು. ಬೆಳಗ್ಗೆ 9ರಿಂದ ರಾತ್ರಿ 9 ಗಂಟೆಯವರೆಗೆ ಮಾತ್ರ ಕಾರ್ಯಾಚರಣೆಗೆ ಅವಕಾಶ ನೀಡುವ ಪ್ರಸ್ತಾಪವೂ ಇದೆ. ಇದರ ಜೊತೆಗೆ, ಮಸಾಜ್ ಸೇವೆ ನೀಡುವ ಸಿಬ್ಬಂದಿಗೆ ಮಾನ್ಯತೆ ಪಡೆದ ಪ್ರಮಾಣಪತ್ರ ಅಥವಾ ಡಿಪ್ಲೊಮಾ ಹೊಂದಿರುವುದು ಕಡ್ಡಾಯವಾಗಲಿದೆ. ಮಾಲೀಕರು ಹಾಗೂ ಸಿಬ್ಬಂದಿಗೆ ಪೊಲೀಸ್ ಪರಿಶೀಲನೆ ಮತ್ತು ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರ ಅಗತ್ಯವಾಗಲಿದೆ.
ಕಾನೂನು ಆಯೋಗದ ಪ್ರಕಾರ, ಈ ಕ್ರಮಗಳಿಂದ ಉದ್ಯಮದಲ್ಲಿ ಪಾರದರ್ಶಕತೆ ಹೆಚ್ಚುವುದರ ಜೊತೆಗೆ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಬೀಳಲಿದೆ. ಅಲ್ಲದೆ, ಯೋಗ, ಆಯುರ್ವೇದ, ನೈಸರ್ಗಿಕ ಚಿಕಿತ್ಸೆ ಹಾಗೂ ಫಿಸಿಯೋಥೆರಪಿ ಕ್ಷೇತ್ರದ ಪರಿಣಿತರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.