ನ್ಯೂಸ್

ವಿಶೇಷ ಸಂಪಾದಕೀಯ: ಸುದ್ದಿ ಪರಾಮರ್ಶಿತ, ಪತ್ರಿಕೆ ಸುರಕ್ಷಿತ

lakshmihegde

ಪ್ರಿಯ ಓದುಗರೇ...

ದಿನಪತ್ರಿಕೆಗಳು, ನಿಯತಕಾಲಿಕೆಗಳು ನಾಗರಿಕ ಜಗತ್ತಿನ ಅವಿಭಾಜ್ಯ ಅಂಗ. ಹೊಣೆಗಾರಿಕೆಯ ಪ್ರತೀಕ. ಸೇವೆಯ ದ್ಯೋತಕ. ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಇವತ್ತಿನ ಕರೊನಾ ಆಪತ್ತಿನ ತನಕ ಜನರಿಗೆ ಅಗತ್ಯ-ಅಧಿಕೃತ ಸುದ್ದಿ ಮುಟ್ಟಿಸುವಲ್ಲಿ ದಿನಪತ್ರಿಕೆಗಳು ಮಹತ್ವದ ಪಾತ್ರ ವಹಿಸಿವೆ. ಅರವತ್ತರ ದಶಕದಲ್ಲಿ ಹರಡಿದ ಪ್ಲೇಗ್ ಮಹಾಮಾರಿ, ಮಾರಣಾಂತಿಕ ಎಬೋಲಾ ಇತ್ಯಾದಿ ಕಾಯಿಲೆಗಳಿಂದ ಹಿಡಿದು ಈವರೆಗೆ ಹತ್ತು ಹಲವು ಸವಾಲು, ಸಂಕಷ್ಟಗಳನ್ನು ಎದುರಿಸಿ ಗೆದ್ದಿವೆ. ಈಗಲೂ ನಾವು ಅಂಥದ್ದೇ ಗಟ್ಟಿ ಸಂಕಲ್ಪ ಮಾಡಿ ಅಂತಿಮ ಗೆಲುವಿನ ಕಡೆ ದಾಪುಗಾಲಿಡುವ ತೀರ್ಮಾನ ಮಾಡಬೇಕಿದೆ.

ನಾಳಿನ ಒಳಿತಿಗಾಗಿ ಇಡೀ ದೇಶ ಭಾನುವಾರ ಜನತಾ ಕರ್ಫ್ಯೂಗೆ ಓಗೊಟ್ಟಿದೆ. ಮಾ.31ರವರೆಗೆ ಕಠಿಣ ನಿರ್ಬಂಧ ಮುಂದುವರಿಸಲು ರಾಜ್ಯ ಸರ್ಕಾರ ತೀರ್ವನಿಸಿದೆ. ನಮ್ಮ ಜೀವರಕ್ಷಣೆ ಮತ್ತು ದೇಶದ ಹಿತರಕ್ಷಣೆಗಾಗಿ ಇದೊಂದು ತುರ್ತು ಸಂದರ್ಭವೆಂದು ಭಾವಿಸಿ ನಾವೆಲ್ಲ ಸರ್ಕಾರದ ಆದೇಶ ಪಾಲಿಸಲೇಬೇಕಿದೆ. ಪ್ರಧಾನಿ ನರೇಂದ್ರ ಮೋದಿ ಅವರು ವೈದ್ಯರು, ಮಿಲಿಟರಿ, ಪೊಲೀಸ್ ಸಮೂಹದ ಜತೆ ಮಾಧ್ಯಮದವರನ್ನೂ ಅಗತ್ಯ ಸೇವಕರೆಂದು ಘೊಷಿಸಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಸಹ ಮಾಧ್ಯಮವನ್ನು ಅಗತ್ಯ ಸೇವೆಗಳ ಪಟ್ಟಿಗೆ ಸೇರಿಸಿದ್ದಾರೆ.

ಯುದ್ಧ, ಅತಿವೃಷ್ಟಿ, ಅನಾವೃಷ್ಟಿಯಂಥ ವಿಷಮ ಸಂದರ್ಭಗಳಲ್ಲೂ ಜೀವದ ಹಂಗು ತೊರೆದು ಕಾರ್ಯ ನಿರ್ವಹಿಸುವುದು ಮಾಧ್ಯಮದ ಜಾಯಮಾನ ಮತ್ತು ಕರ್ತವ್ಯ. ಆದರೆ ಕರೊನಾದಂತಹ ಮಾರಣಾಂತಿಕ ಕಾಯಿಲೆ ಸಂದರ್ಭದಲ್ಲಿ ಕೇವಲ ಕೆಚ್ಚು ಇದ್ದರೆ ಸಾಲದು, ಮುನ್ನೆಚ್ಚರಿಕೆಯೂ ಬೇಕೆಂಬ ಅರಿವು ನಮಗಿದೆ. ಈಗಾಗಲೇ ನಮ್ಮ ಪತ್ರಿಕಾಲಯಗಳು, ಪ್ರಿಂಟಿಂಗ್ ಪ್ರೆಸ್​ಗಳು ಅತ್ಯಾಧುನಿಕ, ಹೈಟೆಕ್ ತಂತ್ರಜ್ಞಾನವನ್ನು ಬಳಕೆಗೆ ತಂದಿವೆ. ಮನುಷ್ಯನ ಕೈ ಸ್ಪರ್ಶವೇ ಇಲ್ಲದೆ ಪತ್ರಿಕೆಗಳು ಮುದ್ರಣಗೊಂಡು ಕೊನೆಯ ವಿತರಣಾ ಕೇಂದ್ರದವರೆಗೆ ತಲುಪಿಸುವ ವ್ಯವಸ್ಥೆ ಜಾರಿಯಾಗುತ್ತಿದೆ. ಕೊನೆಯ ವಿತರಣಾ ಕೇಂದ್ರದಿಂದ ವಿತರಕರು ಬರಿಗೈನಲ್ಲಿ ಪತ್ರಿಕೆಯನ್ನು ಮುಟ್ಟದೇ ವಿತರಣೆ ಮಾಡುವ ವ್ಯವಸ್ಥೆಯನ್ನು ರೂಪಿಸುತ್ತಿದ್ದೇವೆ. ಆಸ್ಪತ್ರೆಯಲ್ಲಿ ವೈದ್ಯರು ಎಷ್ಟು ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳಬಹುದೋ ಪತ್ರಿಕಾ ಸಂಸ್ಥೆಗಳೂ ಪತ್ರಿಕೆಗಳ ವಿತರಣೆಗೆ ಅಷ್ಟೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿವೆ. ಪತ್ರಿಕೆಗಳಿಂದ ಕರೊನಾ ಹರಡುವ ಸಾಧ್ಯತೆಗಳು ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ಸ್ಪಷ್ಟಪಡಿಸಿದೆ.

ಪತ್ರಿಕೆಗಳಿಂದ ಯಾವುದೇ ವೈರಸ್ ಹರಡಿದ ಒಂದೇ ಒಂದು ಉದಾಹರಣೆ ಇಲ್ಲ. ಇದೇ ಮೊದಲ ಬಾರಿ ಪತ್ರಿಕೆಗಳು ಇಂಥ ಸುಳ್ಳು ವದಂತಿಯ ಅಪಾಯಎದುರಿಸುತ್ತಿವೆ. ಕರೊನಾದಂತಹ ತುರ್ತು ಸಂದರ್ಭಗಳಲ್ಲಿ ಖಚಿತ ಮಾಹಿತಿ ಪಡೆಯುವ ವಿಶ್ವಾಸಾರ್ಹ ಮಾಧ್ಯಮವೆಂದರೆ ಅವು ಪತ್ರಿಕೆಗಳು ಎನ್ನುವುದನ್ನು ಮರೆಯಬಾರದು.

ಅನಗತ್ಯ ಭಯ ಬಿತ್ತಿ, ಸುಳ್ಳು ಸುದ್ದಿಗಳನ್ನು ಹರಡಿ ಸೋಷಿಯಲ್ ಮೀಡಿಯಾಗಳು, ವಾಟ್ಸ್​ಆಪ್ ಸಂದೇಶಗಳು ಜನರ ಜೀವನವನ್ನು ದುರ್ಭರಗೊಳಿಸುತ್ತಿರುವ ಇವತ್ತಿನ ಸಂದರ್ಭಗಳಲ್ಲಿ ಖಚಿತ, ವಿಶ್ವಾಸಾರ್ಹ, ಪರಾಮರ್ಶೆ ಮಾಡಿದ ಸುದ್ದಿಗಳನ್ನು ಪಡೆಯುವ ಸುರಕ್ಷಿತ ಮಾರ್ಗ ಪತ್ರಿಕೆಗಳನ್ನು ಬಿಟ್ಟರೆ ಬೇರೆ ಯಾವುದಿದೆ? ಹೀಗಾಗಿ ಪತ್ರಕರ್ತರು, ಮುದ್ರಣ ತಂತ್ರಜ್ಞರು ಮತ್ತು ಮಳೆ, ಗಾಳಿ, ಚಳಿಗೆ ಜಗ್ಗದೆ ನಿಮ್ಮ ಮನೆ ಬಾಗಿಲಿಗೆ ಪತ್ರಿಕೆ ಹೊತ್ತು ತರುವ ವಿತರಣಾ ಸೇನಾನಿಗಳು ಅಗತ್ಯ ಸೇವೆಗೆ ಬದ್ಧರಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಿಯ ಓದುಗರೇ, ನಾವು ಗರಿಷ್ಠ ಹೊಣೆಗಾರಿಕೆಯಿಂದ ಕೆಲಸ ಮಾಡುವ ಸಂಕಲ್ಪ ಮಾಡಿದ್ದೇವೆ. ವದಂತಿಗಳಿಗೆ ಕಿವಿಗೊಡಬೇಡಿ. ನಾವು ನೀವು ಸೇರಿ ಯುದ್ಧ ಮತ್ತು ಶಾಂತಿಯ ಕಾಲಗಳೆರಡರಲ್ಲೂ ಮನುಕುಲದ ಹಿತ ಕಾಯುವ ಕೆಲಸ ಮಾಡೋಣ. ಕರೊನಾ ಮಣಿಸೋಣ, ದೇಶವನ್ನು ಗೆಲ್ಲಿಸೋಣ... ಸುದ್ದಿ ಮಾಧ್ಯಮ ಒಂದು ಹೊಣೆಗಾರಿಕೆ, ಮುದ್ರಣ ಒಂದು ಪ್ರಮಾಣ...

ಸಂಪಾದಕರು

ವಿಜಯವಾಣಿ, ವಿಜಯ ಕರ್ನಾಟಕ, ಪ್ರಜಾವಾಣಿ, ಉದಯವಾಣಿ, ಕನ್ನಡಪ್ರಭ, ವಿಶ್ವವಾಣಿ, ಸಂಯುಕ್ತ ಕರ್ನಾಟಕ, ಹೊಸದಿಗಂತ

ಕರೊನಾ ಸಂಬಂಧ ಜಾಗೃತಿ ಮೂಡಿಸುವಲ್ಲಿ ಮಾಧ್ಯಮ ಜಗತ್ತು ಬಹುದೊಡ್ಡ ಪಾತ್ರ ವಹಿಸಿದೆ. ಕಾರ್ಯಕ್ಷೇತ್ರಕ್ಕಿಳಿದು ವರದಿಗಾರಿಕೆ ಮಾಡುವ ಮತ್ತು ಸುದ್ದಿಮನೆಯಲ್ಲಿರುವ ಎಲ್ಲ ಪತ್ರಕರ್ತರಿಗೆ ನಮನಗಳನ್ನು ಸಲ್ಲಿಸುತ್ತೇನೆ. ಮಾಧ್ಯಮಗಳು ಕೂಡ ತಮ್ಮ ಸಿಬ್ಬಂದಿಗೆ ವರ್ಕ್ ಫ್ರಮ್ ಹೋಮ್ ವ್ಯವಸ್ಥೆ ಮಾಡಿರುವುದು ಕಂಡು ಖುಷಿಯಾಯಿತು.

| ನರೇಂದ್ರ ಮೋದಿ ಪ್ರಧಾನಿ