ಭಾರತ ಕಟ್ಟುವ ಕೆಲಸಕ್ಕೆ ಅದೆಷ್ಟೋ ಜನರನ್ನು ಸ್ವಾಮಿ ವಿವೇಕಾನಂದರು ಪ್ರೇರೆಪಿಸಿದರು. ನಾವು ಮಾಡುವ ಕೆಲಸದಲ್ಲಿ ಇಚ್ಛಾಶಕ್ತಿ ಇರಬೇಕು. ದುರ್ಬಲರೆಂದು ಯೋಚಿಸಿದರೆ ದುರ್ಬಲವಾಗುವಿರಿ, ಶಕ್ತಿವಂತರೆಂದು ಯೋಚಿಸಿದರೆ ಶಕ್ತಿವಂತರಾಗುವಿರಿ ಎಂದು ಪ್ರತಿಪಾದಿಸಿದ್ದರು. ಇಂತಹ ನುಡಿಗಳನ್ನು ಅರಿಯಲು ನಾವು ಸೋತಿದ್ದೇವೆ ಅನಿಸುತ್ತದೆ. ಭಾರತವನ್ನು ಬಲಿಷ್ಠಗೊಳಿಸಲು ಇಂತಹ ಚಿಂತನೆಯ ಅನಿವಾರ್ಯತೆ ಇದೆ.
‘ನಿಮ್ಮ ದೇವರ ಕೋಣೆಯಲ್ಲಿರುವ ಎಲ್ಲ ದೇವರ ಭಾವಚಿತ್ರಗಳನ್ನು ಗಂಟುಮೂಟೆ ಕಟ್ಟಿ ಮೂಲೆಯಲ್ಲಿಡಿ, ಮುಂದಿನ ಒಂದಿಷ್ಟು ವರ್ಷಗಳ ಕಾಲ ಭಾರತಮಾತೆಯನ್ನು ಮಾತ್ರ ಆರಾಧಿಸಿ, ನಾನು ನಿಮಗೆ ಸ್ವಾತಂತ್ರ್ಯನ್ನು ಕೊಡಿಸುತ್ತೇನೆ’.
ಎಂತಹ ಉದಾತ್ತ ಚಿಂತನೆ ಇದು. ಸ್ವಾತಂತ್ರ್ಯ್ಕಾಗಿ ಈ ರೀತಿಯಲ್ಲಿ ಪ್ರೇರಣೆ ಕೊಡುವ ಜತೆಗೆ ಭಾರತದ ಆತ್ಮ ಆಧ್ಯಾತ್ಮ ಎಂಬುದನ್ನು ಸಾರಿದ ಸ್ವಾಮಿ ವಿವೇಕಾನಂದರನ್ನು ಭಾರತವಷ್ಟೇ ಅಲ್ಲ ಇಡೀ ಜಗತ್ತು ಮರೆಯಲು ಸಾಧ್ಯವಿಲ್ಲ. ವಿಶ್ವ ವೇದಿಕೆಯಲ್ಲಿ ನಿಂತು ಭಾರತದ ಪರವಾದ ಕೆಲವೇ ಕೆಲವು ಮಾತುಗಳನ್ನು ಆಡಿ ಇಡೀ ಜಗತ್ತೇ ಅವರ ಪಾದದಡಿಯಲ್ಲಿ ಕುಳಿತುಕೊಳ್ಳುವಂತೆ ಮಾಡಿದ ಕೀರ್ತಿ ಅವರದ್ದು. ಆದರೆ, ’ಚಿಕಾಗೋದ ವಿಶ್ವ ಧರ್ಮ ಸಮ್ಮೇಳನದಲ್ಲಿ ನಾನು ಆಡಿದ ಮಾತು ಯಾವುದು ನನ್ನದಲ್ಲ, ಅವುಗಳನ್ನು ನನ್ನ ಗುರುದೇವ ರಾಮಕೃಷ್ಣರು ನನ್ನ ನಾಲಿಗೆಯಿಂದ ಆಡಿಸಿದ್ದು’ ಎಂಬ ಮಾತು ಅವರನ್ನು ಇಂದಿಗೂ ನೆನಪಿನಲ್ಲಿ ಉಳಿಯುವಂತೆ ಮಾಡಿದೆ.
ಸ್ವಾಮಿ ವಿವೇಕಾನಂದರು ಬದುಕಿದ್ದು 39 ವರ್ಷ ಮಾತ್ರ. ಆದರೆ, ಜೀವಮಾನದ ಸಮಸ್ತ ಕಾರ್ಯಗಳನ್ನು ಅವರ ಅಲ್ಪಾವಧಿಯಲ್ಲಿ ಮುಗಿಸಿದರು. ವಿಶ್ವವನ್ನು ಸುತ್ತಿದ್ದರು, ಭಾರತದ ಬಗ್ಗೆ ಜೀವನದ ಪ್ರತಿಯೊಂದು ಕ್ಷಣವೂ ಚಿಂತಿಸಿದರು. ಅವರ ಜೀವನವೇ ನಿತ್ಯ ಭಾರತಕ್ಕೆ ಬದುಕಿದ್ದು ಅಕ್ಷರಶಃ ಸತ್ಯ.
ಮನೆಯಲ್ಲಿ ಶುರುವಾದ ಅವರ ನೈತಿಕ ಶಿಕ್ಷಣ ನರೇಂದ್ರನಿಂದ ಸ್ವಾಮಿ ವಿವೇಕಾನಂದ ಆಗುವವರೆಗೆ ಬಲವಾಗಿ ಅವರನ್ನು ಗಟ್ಟಿಗೊಳ್ಳಿಸಿತ್ತು. ತಂದೆಯ ವಿದ್ವತ್ತು ಕೂಡಾ ಚಿಕ್ಕ ವಯಸ್ಸಿನಲ್ಲಿಯೇ ನರೇಂದ್ರನ ಮೇಲೆ ಪರಿಣಾಮ ಬೀರಿತು. ಅಮೆರಿಕಾದ ನೆಲದಲ್ಲಿ ಸ್ವಾಮಿ ವಿವೇಕಾನಂದರ ಮಾತುಗಳಿಗೆ ಜನರು ಮನಸೋತು ಅವರನ್ನು ಗುರುಗಳನ್ನಾಗಿ ಸ್ವೀಕರಿಸಿದ ಅನೇಕ ಉದಾಹರಣೆಗಳು ಕಣ್ಮುಂದೆ ಇವೆ. ಅನೇಕ ರಾಷ್ಟ್ರಗಳಲ್ಲಿ ಅವರು ಉಪನ್ಯಾಸ ನೀಡಿದರು. ಐರ್ಲೆಂಡಿನ ಮಾರ್ಗರೆಟ್ ನೋಬೆಲ್ ಎಂಬ ಮಹಿಳೆ ಸ್ವಾಮಿ ವಿವೇಕಾನಂದರ ಚಿಂತನೆಗಳಿಗೆ ಮಾರು ಹೋಗಿ ಅವರ ಅನುಯಾಯಿ ಆದರು. ಮಾರ್ಗರೆಟ್ ನೋಬೆಲ್ ಭಾರತಕ್ಕೆ ಬಂದು ಈ ನೆಲದ ಸೇವೆಗೆ ತನ್ನನ್ನು ತಾನು ಅರ್ಪಿಸಿಕೊಂಡು ಸೋದರಿ ನಿವೇದಿತಾ ಆದಳು.
ಜೆಮಶೆಡ್ ಟಾಟಾ ಅವರಿಗೆ ತಂತ್ರಜ್ಞಾನ ಮತ್ತು ವಿಜ್ಞಾನದ ಕುರಿತು ಸಂಸ್ಥೆ ಸ್ಥಾಪಿಸಲು ಪ್ರೇರಣೆ ಕೊಟ್ಟವರು ವಿವೇಕಾನಂದರು. ಭಾರತ ಕಟ್ಟುವ ಕೆಲಸಕ್ಕೆ ಅದೆಷ್ಟೋ ಜನರನ್ನು ಪ್ರೇರೆಪಿಸಿದರು. ಸ್ವಾಮಿ ವಿವೇಕಾನಂದರು ಹೇಳಿದಂತೆ, ನಾವು ಮಾಡುವ ಕೆಲಸದಲ್ಲಿ ಇಚ್ಛಾಶಕ್ತಿ ಇರಬೇಕು. ದುರ್ಬಲರೆಂದು ಯೋಚಿಸಿದರೆ ದುರ್ಬಲವಾಗುವಿರಿ, ಶಕ್ತಿವಂತರೆಂದು ಯೋಚಿಸಿದರೆ ಶಕ್ತಿವಂತರಾಗುವಿರಿ. ಇಂತಹ ನುಡಿಗಳನ್ನು ಅರಿಯಲು ನಾವು ಸೋತಿದ್ದೇವೆ ಅನಿಸುತ್ತದೆ. ಭಾರತವನ್ನು ಬಲಿಷ್ಠಗೊಳಿಸಲು ಇಂತಹ ಚಿಂತನೆಯ ಅನಿವಾರ್ಯತೆ ಇದೆ.
ಯುವಜನತೆ ಅದೆಷ್ಟೋ ಕಾರ್ಯಗಳನ್ನು ಸ್ವತಃ ಮಾಡುವಷ್ಟು ಸಮರ್ಥರಾಗಿದ್ದಾರೆ. ಸ್ವಾತಂತ್ರ್ಯಾ ನಂತರದಲ್ಲಿ ಒಂದಿಷ್ಟು ಬದಲಾವಣೆ ಆಗುತ್ತಿದೆ. ಯುವಜನತೆ ಸಮರ್ಥವಾಗಿ ದೇಶದ ಎಲ್ಲಾ ಕ್ಷೇತ್ರಕ್ಕೂ ಕೊಡುಗೆ ನೀಡುವಷ್ಟು ಬಲ ಹೊಂದಿರುವುದು ಸತ್ಯ.
ಅದಕ್ಕಾಗಿಯೇ ಸ್ವಾಮಿ ವಿವೇಕಾನಂದರು ಹೇಳುತ್ತಿದ್ದರು, ತೇಜಸ್ವಿ, ಶ್ರದ್ಧಾಸಂಪನ್ನ, ಕೊನೆಯವರೆಗೆ ನಿಷ್ಕಪಟಿಗಳಾದ ಯುವಕರು ಬೇಕಾಗಿದ್ದಾರೆ ಎಂದು. ಇಂತಹ ನೂರು ಜನರು ಸಿಕ್ಕಿದರೆ ಪ್ರಪಂಚವನ್ನೇ ಬದಲಾಯಿಸಬಹುದು. ಇಂದು ಅಂತಹ ಸಾವಿರಾರು ಯುವಕರು ಸಿಗಬಹುದು. ನಮ್ಮ ಇಚ್ಛಾಶಕ್ತಿ ಗರಿಷ್ಟ ಮಟ್ಟದಲ್ಲಿ ಬದಲಾಗಬೇಕಿದೆ. ದೇಶಕ್ಕಾಗಿ ಮಿಡಿಯುವ, ದುಡಿಯುವ ಚಿಂತನೆಯನ್ನು ಮನೆಮನೆಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ ಪಸರಿಸುವ ಕೆಲಸವಾಗಬೇಕಿದೆ.
ವಿವೇಕಾನಂದರು ರಾಮಕೃಷ್ಣ ಮಿಷನ್ ಶುರು ಮಾಡಿದ ನಂತರ ತಮ್ಮ ಅನೇಕ ಶಿಷ್ಯಂದಿರಿಗೆ ಉದ್ಯಮ ಸೃಷ್ಟಿಸುವ ಸಲಹೆ ನೀಡಿದರು. ಉದ್ಯಮಕ್ಕೆ ಬೇಕಾದ ಅನೇಕ ಸೂತ್ರಗಳನ್ನು ಅಂದೇ ವಿವೇಕಾನಂದರು ನೀಡಿದ್ದಾರೆ. ಅದರ ಪ್ರತಿರೂಪವೇ ಇಂದಿನ ಸ್ಟಾರ್ಟ್ ಅಪ್ ಇಂಡಿಯಾ ಮತ್ತು ಸ್ಟಾ್ಯಂಡ್ ಅಪ್ ಇಂಡಿಯಾ.
ಸ್ವಾಮಿ ವಿವೇಕಾನಂದರು ಕೇವಲ ಹಿಂದೂ ಧರ್ಮದ ಪ್ರತಿಪಾದಕರಷ್ಟೇ ಅಗಿರಲಿಲ್ಲ, ಸಮಸ್ತ ಭಾರತವನ್ನು ಎಲ್ಲ ಧರ್ಮದ ಸಮನ್ವಯದಡಿಯಲ್ಲಿ ಬೆಳಗಿಸಬೇಕೆಂಬ ಉದಾತ್ತ ದೃಷ್ಟಿಕೋನವನ್ನು ಹೊಂದಿದ್ದರು. ಅಂದು ನರೇಂದ್ರ ಮಾಡಿದ ಅದ್ಭುತ ಕಾರ್ಯ ವಿಶ್ವದಲ್ಲೇ ಬೆಳಗಿ ಗುರುವಿನ ಸ್ಥಾನ ಪಡೆದಿತ್ತು. ಇಂದು ಪ್ರಧಾನಮಂತ್ರಿಗಳಾದ ನರೇಂದ್ರ ಅವರಿಂದ ಕೂಡಾ ಅಂತಹ ಕೆಲಸಗಳು ಆಗುತ್ತಿವೆ. ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವದಿನವನ್ನಾಗಿ ಆಚರಿಸಲಾಗುತ್ತದೆ. ವಿವೇಕಾನಂದರ ಜೀವನ, ಸಂದೇಶ, ತತ್ವಚಿಂತನೆಗಳು ಆದರ್ಶವಾಗಲಿ ಎಂಬುದು ಉದ್ದೇಶ.
ಈ ಬಾರಿ ಯುವಜನೋತ್ಸವ ಹುಬ್ಬಳ್ಳಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಳ್ಳುತ್ತಿದೆ. ಇಲ್ಲಿ ಯುವಜನಾಂಗ ಪ್ರತಿಭೆ, ಚಿಂತನೆಗಳನ್ನು ಪರಸ್ಪರ ಹಂಚಿಕೊಳ್ಳಲಿದ್ದಾರೆ. ಶಕ್ತಿಯುತ ಯುವಜನತೆಯನ್ನು ನಿರ್ವಿುಸುವ, ದೇಶವನ್ನು ವಿಶ್ವಗುರುವಾಗಿಸುವ ಕೆಲಸಕ್ಕೆ ಇಂತಹ ಕಾರ್ಯಕ್ರಮಗಳು ವೇದಿಕೆಯಾಗಲಿ. ಸ್ವಾಮಿ ವಿವೇಕಾನಂದರು ಹೇಳಿದಂತೆ ಶಕ್ತಿಯೇ ಜೀವನ, ದುರ್ಬಲತೆಯ ಮರಣ ಎಂಬ ಸಂದೇಶ ಸರ್ವ ಯುವಹೃದಯಗಳಲ್ಲಿ ನೆಲ ನಿಲ್ಲಲ್ಲಿ.
(ಲೇಖಕರು ರಾಜ್ಯ ಉಪಾಧ್ಯಕ್ಷರು, ಬಿಜೆಪಿ ಯುವಮೋರ್ಚಾ ಕರ್ನಾಟಕ)