ಯುವ ಸಮೂಹದ ಅಪೇಕ್ಷೆ ಮತ್ತು ನಿರೀಕ್ಷೆ ಇಂದಿನ ಕಾಲಘಟ್ಟದಲ್ಲಿ ಅಗಾಧವಾಗಿದೆ. ದೇಶದಲ್ಲಿ ಶೇ. 40ರಷ್ಟು ಇರುವ ಯುವ ಸಮೂಹ ಹೊಸ ಕಾಲಮಾನದ ಆಧುನಿಕ ಅಭಿವೃದ್ಧಿಯ ನಿರೀಕ್ಷೆಯನ್ನು ಇಟ್ಟುಕೊಂಡಿದೆ. ಡಿಜಿಟಲ್ ಯುಗದ ಅಪೇಕ್ಷೆಯನ್ನು ಬಯಸುತ್ತದೆ.
ದೇಶದ ಸಮಗ್ರ ಇತಿಹಾಸದ ಭವಿಷ್ಯದ ಭಾರತವನ್ನು ಯುವ ಪೀಳಿಗೆಗೆ ಕಟ್ಟಿಕೊಡುವ ಕೆಲಸವನ್ನು ಯುವ ಮುಖಂಡರಾದವರು ಮಾಡಬೇಕಾಗುತ್ತದೆ. ವಿಶ್ವದಲ್ಲಿ ಬಹುದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ಮಹಾನ್ ರಾಷ್ಟ್ರ ಎನಿಸಿಕೊಂಡ ಭಾರತದ ಯುವ ಸಮುದಾಯದಲ್ಲಿ ಅಗಾಧವಾದ ಶಕ್ತಿ ಇದೆ. ಆದರೆ, ಬೇರೆ ಬೇರೆ ಕಾರಣಕ್ಕೆ ರಾಜಕೀಯದಿಂದ ಯುವ ಪೀಳಿಗೆ ದೂರ ಸರಿಯುತ್ತಿದೆ ಎಂಬುದು ಇಲ್ಲಿ ಗಮನಾರ್ಹ ಸಂಗತಿ.
ರಾಷ್ಟ್ರ ನಿರ್ವಣದಲ್ಲಿ ಯುವ ಸಮೂಹದ ಪಾತ್ರ ಮಹತ್ತರವಾದದ್ದು. ಯುವಕರಲ್ಲಿ ಸುಪ್ತ ಪ್ರತಿಭೆ ಸಹ ಇರುತ್ತವೆ. ಅವುಗಳನ್ನು ಹೊರ ತೆಗೆಯುವ ಕೆಲಸ ಆಗಬೇಕಾಗಿದೆ. ಶಿಕ್ಷಣ, ಉದ್ಯೋಗದಲ್ಲಿ ಹೆಚ್ಚು ಅವಕಾಶ ಸಿಗಬೇಕು. ಬದುಕಿನ ಶಿಕ್ಷಣ, ನೈತಿಕ ಶಿಕ್ಷಣ ದೊರೆಯುವಂತಾಗಬೇಕು.
ವಿಶ್ವವಿದ್ಯಾಲಯಗಳು ಯುವ ಸಮುದಾಯದ ಅಪೇಕ್ಷೆ, ನಿರೀಕ್ಷೆಯನ್ನು ಪೂರೈಸುವ ನೆಲೆಗಟ್ಟಿನಲ್ಲಿ ಪೂರಕವಾಗಿ ಸ್ಪಂದಿಸಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಗೆಲುವಿನ ದಾಪುಗಾಲು ಇಡುವ ನಿಟ್ಟಿನಲ್ಲಿ ಯುವ ಸಮೂಹವನ್ನು ಸಜ್ಜುಗೊಳಿಸುವ ಕೆಲಸಗಳಾಗಬೇಕು. ಈ ನಿಟ್ಟಿನಲ್ಲಿ ಪ್ರಭುತ್ವದ ಆದ್ಯತೆ ಯುವಕರ ಅಪೇಕ್ಷೆ, ನಿರೀಕ್ಷೆಗೆ ಪೂರಕವಾಗಿದ್ದರೆ ದೇಶದ ಅಭಿವೃದ್ಧಿ ಸಾಧ್ಯವಾದೀತು.
ನವ ಭಾರತದ ಕಲ್ಪನೆ ಯುವ ಪೀಳಿಗೆಯ ಆಶಯವಾಗಿದೆ. ಹಳೇ ಬೇರಿನ ಜತೆ ಹೊಸ ಚಿಗುರು ಸಾಗಬೇಕಾಗುತ್ತದೆ. ಹೊಸ ನಾಯಕತ್ವ, ಹೊಸ ತಲೆಮಾರಿನ ನಾಯಕರು ಹೊರ ಬರಬೇಕು. ಯಾವುದೇ ಪಕ್ಷದಲ್ಲಿರಲಿ, ಯುವ ಜನರು ಅಧಿಕಾರದ ಚುಕ್ಕಾಣಿ ಹಿಡಿಯುವಂತಾಗಬೇಕು. ಹಿರಿಯರ ಸಲಹೆ, ಮಾರ್ಗದರ್ಶನದೊಂದಿಗೆ ಹೊಸ ತಲೆಮಾರಿನ ನಾಯಕತ್ವದ ಸೂತ್ರದಂತೆ ನಡೆಯಬೇಕು.
ಯುವ ನಾಯಕತ್ವವು ಪ್ರಜಾಪ್ರಭುತ್ವದಲ್ಲಿ ಯಾವ ರೀತಿಯಾಗಿಯೂ ವಿಭಿನ್ನವಾಗಿ ಕಾಣಿಸಿಕೊಳ್ಳುವ ಅಗತ್ಯವಿಲ್ಲ. ಜನರ ಸೇವೆ, ಜನಪರ ಹೋರಾಟ, ಜನರ ಕಷ್ಟಕ್ಕೆ ಸ್ಪಂದಿಸಿದರೆ ಜನರು ನಮ್ಮನ್ನು ಗುರುತಿಸುತ್ತಾರೆ.
ಕೋವಿಡ್ ಸಂಕಷ್ಟ ಸಂದರ್ಭದಲ್ಲಿ ಉತ್ತರ ಭಾರತದಲ್ಲಿ ಜನರು ಸಂಕಷ್ಟಕ್ಕೀಡಾದಾಗ ನಮ್ಮ ತಂದೊಂದಿಗೆ ನಿರಂತರ ಸೇವೆ ಮಾಡಿದಾಗ, ಆಮ್ಲಜನಕ ಸರಬರಾಜು ಮಾಡಿದಾಗ ನಮ್ಮನ್ನು ಜನರು ವಿಭಿನ್ನವಾಗಿ ಗುರುತಿಸಿದರು. ಅದೇ ರೀತಿ ರೈತರು ಹೋರಾಟಕ್ಕಿಳಿದಾಗ ಅವರ ಪರವಾಗಿ ನಿಂತು ಸೌಲಭ್ಯ ಒದಗಿಸಿದ್ದು ಕಷ್ಟದ ಕೆಲಸ ಎನಿಸಿದರೂ ರೈತ ಸಮುದಾಯ ನಮ್ಮನ್ನು ಗುರುತಿಸಿದ್ದು ನೆಮ್ಮದಿ ತಂದಿತು.
ಇತ್ತೀಚಿನ ದಿನಗಳಲ್ಲಿ ರಾಜಕೀಯ ಕಲುಷಿತಗೊಂಡಿದೆ. ಆದರೆ, ಯುವಕರಾದ ನಾವು ಕಲುಷಿತಗೊಳ್ಳಬಾರದು. ನಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕು.
ಇನ್ನು ಯುವ ಸಮುದಾಯವನ್ನು ಸರಿದಾರಿಗೆ ತರುವ ಮಾರ್ಗದರ್ಶನ ಖಂಡಿತಾ ಇದೆ. ಯುವಕರಿಗೆ ಮಾರ್ಗದರ್ಶನ ಅತ್ಯಂತ ಮುಖ್ಯ.
ಕಂಪ್ಯೂಟರ್ ಯುಗದಲ್ಲಿ ಯುವ ಸಮುದಾಯ ದಾರಿ ತಪ್ಪುತ್ತಿದೆ ಎಂಬ ಆತಂಕ ಕೂಡ ಇದೆ. ಮೊಬೈಲ್ ಗೀಳು, ದುಶ್ಚಟಕ್ಕೆ ದಾಸರಾಗುವ, ಕ್ಷಣಿಕ ಆಸೆಗಳಿಗೆ ಆಕರ್ಷಿತರಾಗಿ ಜೀವನವನ್ನು ಹಾಳುಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ ಮಾರ್ಗದರ್ಶಕರ ಅಗತ್ಯ ಎದ್ದು ಕಾಣಿಸುತ್ತಿದೆ.
ಪ್ರಬಲವಾಗಿ ಯುವ ಸಮುದಾಯದ ಮೇಲೆ ದಾಳಿ ನಡೆಸಿ ನಮ್ಮ ಸಂಸ್ಕೃತಿಯನ್ನು ಹಾಳು ಮಾಡುವ ಹುನ್ನಾರ ನಿರಂತರವಾಗಿ ನಡೆಯುತ್ತಿದೆ. ಸೂಕ್ತ ಶಿಕ್ಷಣ ನೀಡಿ ಬದುಕಿನ ಮೌಲ್ಯ ಕಲಿಸಿ ಅವರನ್ನು ಸರಿದಾರಿಗೆ ತರುವ ಕೆಲಸದ ತುರ್ತು ಅಗತ್ಯವಿದೆ. ಇಂದಿನ ಯುವ ಶಕ್ತಿ ದೇಶದ ಶಕ್ತಿ. ಅದನ್ನು ರೂಪಿಸಬೇಕಾದ ಹೊಣೆಗಾರಿಕೆ ನಮ್ಮ ಮೇಲಿದೆ.
ಯುವಕರಿಗೆ ಒಂದು ಮಾದರಿ ಅತ್ಯಗತ್ಯ. ಮಹಾತ್ಮ ಗಾಂಧಿ, ನೆಹರೂ ಸದಾ ಕಾಲಕ್ಕೂ ಮಾಡೆಲ್ಗಳೇ. ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯಲು ಮಾಡಿದ ಹೋರಾಟ ಹಾಗೂ ಸ್ವಾತಂತ್ರ್ಯ ನಂತರ ದೇಶವನ್ನು ಕಟ್ಟಿದ ಪರಿ ನಮಗೆ ಮಾದರಿಯಾಗಿ ಕಾಣಿಸುತ್ತಿದೆ.
ಗಾಂಧೀಜಿ ಸರಳತೆಯಲ್ಲಿ ಏಕತೆ ಕಂಡುಕೊಂಡರು. ನೆಹರೂ ಅವರು ತಮ್ಮ ಆಗರ್ಭ ಶ್ರೀಮಂತಿಕೆ ತೊರೆದು ದೇಶ ಕಟ್ಟುವಲ್ಲಿ ತೊಡಗಿಕೊಂಡು ಬಡ- ಜಡ ಭಾರತವನ್ನು ಜಾಗತಿಕ ಮಟ್ಟದಲ್ಲಿ ನಿಲ್ಲಿಸಿದರು. ಹಸಿವಿನಿಂದ ಮುಕ್ತಗೊಳಿಸಿದರು. ಉದ್ಯೋಗ- ಶಿಕ್ಷಣಕ್ಕೆ ಬುನಾದಿ ಹಾಕಿದರು. ಈ ರೀತಿ ಸಾವಿರಾರು ಆದರ್ಶ ಪುರುಷರು ನಮ್ಮ ಕಣ್ಣ ಮುಂದಿದ್ದು ಅವರೆಲ್ಲರೂ ನಮಗೆ ಮಾಡೆಲ್ ಆಗಿರಬೇಕಾಗುತ್ತದೆ.
(ಲೇಖಕರು ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರು)