| ಸ್ವಾಮಿ ಶಾಂತಿವ್ರತಾನಂದ
ಶ್ರೀರಾಮಕೃಷ್ಣ ಆಶ್ರಮ, ಮೈಸೂರು ಜಗನ್ಮಾತೆಯ ಒಂಬತ್ತನೇ ರೂಪವೇ ಸಿದ್ಧಿದಾತ್ರೀ. ಸಿದ್ಧಿದಾತ್ರೀ ಎಂದರೆ ಸಿದ್ಧಿ, ವಿಶೇಷ ಶಕ್ತಿಗಳನ್ನು ದಯಪಾಲಿಸುವಳು. ನಮಗೆ ಅಷ್ಟಸಿದ್ಧಿಗಳ ಕುರಿತು ತಿಳಿದಿದೆ. ಆದರೆ ಬ್ರಹ್ಮವೈವರ್ತ ಪುರಾಣದ ಪ್ರಕಾರ ಸಿದ್ಧಿಗಳು 18. ಅವು 1. ಅಣಿಮಾ 2. ಲಘಿಮಾ 3. ಪ್ರಾಪ್ತಿ 4. ಪ್ರಾಕಾಮ್ಯ 5. ಮಹಿಮಾ 6. ಈಶ್ವರ ವಶಿತ್ವ 7. ಸರ್ವಕಾಮಾನಸಾಯಿತಾ 8. ಸರ್ವಜ್ಞತ್ವ 9. ದೂರಶ್ರವಣ 10. ಪರಕಾಯಪ್ರವೇಶ 11. ವಾಕ್ಸಿದ್ಧಿ 12. ಕಲ್ಪವೃಕ್ಷ 13. ಸೃಷ್ಟಿ 14. ಸಂಹಾರಕರಣ 15. ಅಮರತ್ವ 16. ಸರ್ವನಾಯಕತ್ವ 17. ಭಾವನಾ 18. ಸಿದ್ಧಿ
ಸಿದ್ಧ ಗಂಧರ್ವ ಯಕ್ಷಾದೈರಸುರೈರಮರೈರಪಿ |
ಸೇವ್ಯಮಾನಾ ಸದಾ ಭೂಯಾತ್ ಸಿದ್ಧಿದಾ ಸಿದ್ಧಿದಾಯಿನೀ ||
ಸಾಧಕರಿಗೆ ಈ ಮೇಲಿನ ಎಲ್ಲ ಸಿದ್ಧಿಗಳನ್ನು ನೀಡುವವಳೇ ಸಿದ್ಧಿದಾತ್ರೀ. ದೇವಿಪುರಾಣದ ಪ್ರಕಾರ ಪರಶಿವನಿಗೂ ಈಕೆಯ ಕೃಪೆಯಿಂದಲೇ ಸಿದ್ಧಿಗಳು ದೊರೆತಿವೆ. ಸಿದ್ಧರು, ಗಂಧರ್ವರು, ಯಕ್ಷರು, ದೇವತೆಗಳೂ ಇವಳನ್ನು ಸಿದ್ಧಿಗಳಿಗಾಗಿ ಪೂಜಿಸುತ್ತಾರೆ. ಈಕೆಯ ವಾಹನ ಸಿಂಹ. ಕಮಲಪುಷ್ಪದ ಮೇಲೆ ಈಕೆ ಕುಳಿತಿದ್ದು, ಚತುರ್ಭಜವನ್ನು ಹೊಂದಿದ್ದಾಳೆ. ಮೇಲಿನ ಬಲಹಸ್ತದಲ್ಲಿ ಕಮಲ, ಕೆಳಗಿನ ಬಲಹಸ್ತದಲ್ಲಿ ಗದೆ, ಮೇಲಿನ ಎಡಹಸ್ತದಲ್ಲಿ ಶಂಖ, ಕೆಳಗಿನ ಎಡಹಸ್ತದಲ್ಲಿ ಕಮಲವನ್ನು ಹಿಡಿದಿದ್ದಾಳೆ. ನವಮಿ ತಿಥಿಯಂದು ಈಕೆಯನ್ನು ಭಕ್ತರು ಆರಾಧಿಸುತ್ತಾರೆ. ಸಿದ್ಧಿದಾತ್ರಿಯನ್ನು ಪೂಜಿಸುವ ಭಕ್ತನು ಸಂಸಾರದಲ್ಲಿ ನಿರ್ಲಿಪ್ತತೆ ಪಡೆದು, ಪರಮಫಲವಾದ ಮೋಕ್ಷವನ್ನು ಹೊಂದುತ್ತಾನೆ. ಭಗವತಿಯ ಪರಮಸಾನ್ನಿಧ್ಯ ದೊರೆತು, ಜನ್ಮ ಸಾರ್ಥಕವಾಗುತ್ತದೆ.
ವಿಜಯದಶಮಿ: ದಶಮಿ ಎಂದರೆ ಹತ್ತನೇ ದಿವಸ. ವಿಜಯ ಎಂದರೆ ಗೆಲ್ಲುವುದು. ಭಾರತ ಹಾಗೂ ನೇಪಾಳದಲ್ಲಿ ವಿಜಯದಶಮಿ ಪ್ರಮುಖ ಹಬ್ಬ. ಅಂದು ದುರ್ಗೆಯು ಚಾಮುಂಡಿ ರೂಪದಲ್ಲಿ ಮಹಿಷಾಸುರನ ಸಂಹಾರ ಮಾಡಿದಳು. ಶ್ರೀರಾಮನು ರಾವಣನ ಸಂಹಾರ ಮಾಡಿದ. ಈ ವಿಜಯೋತ್ಸವದ ಸಂಭ್ರಮವನ್ನು ಆಚರಿಸುವುದೇ ವಿಜಯದಶಮಿ. ಇಲ್ಲಿ ಮುಖ್ಯವಾಗಿ ದುಷ್ಟಶಕ್ತಿಗಳ ಸಂಹಾರ, ಮರ್ದನ ಉಂಟಾಯಿತು. ಸತ್ಯಮೇವ ಜಯತೇ ಎನ್ನುವಂತೆ, ಸತ್ಯಕ್ಕೆ, ಸಜ್ಜನಿಕೆಗೆ, ಸತ್ಶಕ್ತಿಗೆ ಜಯ ಲಭಿಸಿತು.
ಇದೇ ಸಮಯದಲ್ಲಿ, ಮಹಾಭಾರತದ ಪ್ರಕಾರ ಅರ್ಜುನನು ಒಂದು ಲಕ್ಷಕ್ಕಿಂತಲೂ ಹೆಚ್ಚಿನ ಸೈನಿಕರನ್ನು, ಅನೇಕ ಕೌರವರನ್ನು ಯುದ್ಧದಲ್ಲಿ ಸಂಹಾರ ಮಾಡಿದ. ಬಂಗಾಳದಲ್ಲಿ ಲಕ್ಷ್ಮೀ, ಸರಸ್ವತಿ, ದುರ್ಗೆ ವಿಗ್ರಹಗಳನ್ನು ಪೂಜಿಸಿ ವಿಜಯದಶಮಿಯಂದು ನೀರಿನಲ್ಲಿ ವಿಸರ್ಜಿಸುತ್ತಾರೆ. ರಾಮನು ರಾವಣನನ್ನು ಸಂಹಾರ ಮಾಡಿದ್ದರ ದ್ಯೋತಕವಾಗಿ ಉತ್ತರಭಾರತ, ಮಧ್ಯಭಾರತದಲ್ಲಿ ರಾವಣನ ಪ್ರತಿಕೃತಿಯನ್ನು ದಹನ ಮಾಡುತ್ತಾರೆ. ಮೈಸೂರಿನಲ್ಲಿ ಜಂಬೂಸವಾರಿ ವಿಶೇಷವಾಗಿ ಆಚರಿಸುವ ಸಂಗತಿ. ಕರ್ನಾಟಕದಲ್ಲಿ ವಿಜಯದಶಮಿಯಂದು ಹಿರಿಯರಿಗೆ ಕಿರಿಯರು ಬನ್ನಿಪತ್ರೆ ನೀಡಿ ನಮಸ್ಕರಿಸಿ, ಅವರ ಆಶೀರ್ವಾದ ಪಡೆಯುತ್ತಾರೆ. ಇದೊಂದು ಸಡಗರದ ಹಬ್ಬವೇ ಸರಿ.
ಅರ್ಚನಕಾಲೇ ರೂಪಗತಾ ಸಂಸ್ತುತಿಕಾಲೇ ಶಬ್ದಗತಾ |
ಚಿಂತನಕಾಲೇ ಪ್ರಾಣಗತಾ ತತ್ತ್ವವಿಚಾರೇ ಸರ್ವಗತಾ ||
ಹೂ-ಗಂಧಗಳಿಂದ ಅರ್ಚಿಸುವಾಗ ಜಗನ್ಮಾತೆ ದಿವ್ಯರೂಪದಲ್ಲಿಯೂ, ಅವಳನ್ನು ಸ್ತುತಿಸುವಾಗ ಪದಗಳ ಅರ್ಥಸೌಂದರ್ಯದಲ್ಲಿಯೂ, ಚಿಂತಿಸುವಾಗ ಹೃದಯಾಂತರಾಳದಲ್ಲಿಯೂ ನೆಲಸಿರುತ್ತಾಳೆ. ಸ್ವರೂಪವೂ ಅವಳೇ, ಸ್ತುತಿಯೂ ಅವಳೇ, ಸ್ತುತಿಯಲ್ಲಿನ ಅರ್ಥವೂ ಅವಳೇ, ಅರ್ಥಾನುಭವನಿಮಗ್ನವಾದ ಆಂತರ್ಯದಲ್ಲಿರುವವಳೂ ಅವಳೇ ಎಂಬ ತತ್ತ್ವ, ಮಹಾನ್ ಸತ್ಯ ಅರಿವಾದಾಗ ಎಲ್ಲೆಡೆ ಅವಳೇ ಕಾಣಿಸುತ್ತಾಳೆ. ಇದು ಪರಮ ಸತ್ಯ. ಆ ಗುರಿಯನ್ನು ನಾವು ಹೊಂದಬೇಕಾಗಿದೆ.