ನ್ಯೂಸ್

ಹೆಣ್ಣು ಬಾಳಿನ ಕಣ್ಣು: ಇಂದು ರಾಷ್ಟ್ರೀಯ ಹೆಣ್ಣುಮಕ್ಕಳ ದಿನ

ಸಮಾಜದಲ್ಲಿ ಹೆಣ್ಣುಮಕ್ಕಳಿಗೆ ಸಮಾನ ಗೌರವ, ಅವಕಾಶ ದೊರಕಬೇಕು ಎನ್ನುವ ನಿಟ್ಟಿನಲ್ಲಿ ಶತಮಾನಗಳಿಂದಲೂ ಪ್ರಯತ್ನಗಳು ನಡೆದೇ ಇವೆ. ‘ಮಹಿಳೆಯೊಬ್ಬಳು ಮಧ್ಯರಾತ್ರಿಯಲ್ಲಿ ನಿರ್ಭಿಡೆಯಿಂದ ನಡೆದು ಹೋಗುವಂತಾದರೆ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ್ದಕ್ಕೆ ಸಾರ್ಥಕ’ ಎಂದು ಮಹಾತ್ಮಾ ಗಾಂಧೀಜಿ ಹೇಳಿದ್ದರು. ಭಾರತದಲ್ಲಿ ಬಾಲ್ಯವಿವಾಹ, ಸತಿ ಪದ್ಧತಿಯಂಥ ಅನಿಷ್ಠಗಳನ್ನು ಹೋಗಲಾಡಿಸಲು ಸಮಾಜ ಸುಧಾರಕರು, ನೀತಿ ನಿರೂಪಕರು, ಧಾರ್ವಿುಕ ಮುಖಂಡರು ಶ್ರಮಿಸಿದ್ದಾರೆ. ವಿಶ್ವದ ಬುದ್ಧಿವಂತರೆಲ್ಲ ಸೇರಿ ನಿರ್ವಿುಸಿದ ರಾಷ್ಟ್ರ ಎನ್ನಲಾಗುವ ಅಮೆರಿಕದಲ್ಲಿ 1920ರವರೆಗೆ ಮಹಿಳೆಯರಿಗೆ ಮತದಾನದ ಹಕ್ಕು ಇರಲಿಲ್ಲ. ಅನೇಕ ದಶಕಗಳ ಹೋರಾಟದ ಫಲವಾಗಿ ಈ ಹಕ್ಕನ್ನು ಪಡೆಯಲಾಯಿತು. ಹೆಣ್ಣುಮಕ್ಕಳು ಹಾಗೂ ಮಹಿಳೆಯರಿಗೆ ಸಮಾನ ಅವಕಾಶ ನೀಡುವ ನಿಟ್ಟಿನಲ್ಲಿ ವಿಶ್ವಸಂಸ್ಥೆ ಪ್ರತಿ ವರ್ಷ ಅಕ್ಟೋಬರ್ 11ರಂದು ‘ಅಂತಾರಾಷ್ಟ್ರೀಯ ಹೆಣ್ಣುಮಗು ದಿನ’ವಾಗಿ ಆಚರಿಸುತ್ತದೆ. ಭಾರತದಲ್ಲಿ ಈ ಕುರಿತು ಮತ್ತಷ್ಟು ಜಾಗೃತಿ ಮೂಡಿಸುವ ಸಲುವಾಗಿ ಜನವರಿ 24ರಂದು (2008ರಿಂದ) ರಾಷ್ಟ್ರೀಯ ಹೆಣ್ಣುಮಗು ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ. ಇಷ್ಟೆಲ್ಲ ಬದಲಾವಣೆಗಳ ನಂತರವೂ ದೇಶದಲ್ಲಿ ಹೆಣ್ಣುಮಕ್ಕಳ ಸುರಕ್ಷತೆ ದೃಷ್ಟಿಯಿಂದ ಕೈಗೊಳ್ಳಬೇಕಾದ ಹೆಜ್ಜೆ, ಸಾಗಬೇಕಾದ ಮಾರ್ಗ ಬಹಳಷ್ಟಿದೆ.

ಫಲ ನೀಡುತ್ತಿರುವ ಜಾಗೃತಿ: ಹೆಣ್ಣು ಮತ್ತು ಗಂಡಿನ ನಡುವೆ ಲಿಂಗಾನುಪಾತ ಅಳೆಯಲು ಮಾನದಂಡವೊಂದಿದೆ. ದೇಶದಲ್ಲಿ ಪ್ರತಿ 1000 ಗಂಡುಮಕ್ಕಳಿಗೆ ಪ್ರತಿಯಾಗಿ ಎಷ್ಟು ಹೆಣ್ಣುಮಕ್ಕಳಿವೆ ಎನ್ನುವುದನ್ನು ವಿಶ್ವಾದ್ಯಂತ ಮಾನದಂಡವಾಗಿ ಪರಿಗಣಿಸಲಾಗುತ್ತದೆ. ಈ ಅಂಶ 2015-16ರಲ್ಲಿ ದೇಶದಲ್ಲಿ 991 ಇತ್ತು. ಇದೀಗ 2019-2021ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಲ್ಲಿ 1,020ಕ್ಕೆ ಹೆಚ್ಚಳವಾಗಿದೆ. ಅಂದರೆ ಗಂಡುಮಕ್ಕಳ ಸಂಖ್ಯೆಗಿಂತ ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಹೆಣ್ಣುಮಕ್ಕಳ ಅಭಿವೃದ್ಧಿಗಾಗಿ ಜಾರಿಗೊಳಿಸಿದ ಅನೇಕ ಯೋಜನೆಗಳು, ನೀತಿಯಲ್ಲಿನ ಬದಲಾವಣೆಗಳು ಹಾಗೂ ಸಾಮಾಜಿಕ ಜಾಗೃತಿಯ ಕಾರ್ಯಕ್ರಮಗಳು ಸಫಲವಾಗಿರುವುದು ಈ ಬದಲಾವಣೆಗೆ ಕಾರಣ. ಕೇಂದ್ರ ಸರ್ಕಾರವು ‘ಬೇಟಿ ಬಚಾವೋ ಬೇಟಿ ಪಢಾವೋ’ ಹೆಸರಿನಲ್ಲಿ ಹೆಣ್ಣುಮಕ್ಕಳನ್ನು ಉಳಿಸಿ ಮತ್ತು ಹೆಣ್ಣುಮಕ್ಕಳನ್ನು ಓದಿಸಲು ಯೋಜನೆ ರೂಪಿಸಿತು.

ಪರಿಸ್ಥಿತಿ ಸುಧಾರಿಸಬೇಕಿದೆ: ಹೆಣ್ಣುಮಕ್ಕಳ ಕುರಿತು ಅಸಮಾನತೆಯು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿದೆ. ಶಿಕ್ಷಿತರ ಸಂಖ್ಯೆ ಹೆಚ್ಚಾದಂತೆ ನಗರ ಪ್ರದೇಶದಲ್ಲಿ ಪರಿಸ್ಥಿತಿ ಉತ್ತಮಗೊಳ್ಳುತ್ತದೆ ಎಂಬ ಅಭಿಪ್ರಾಯಗಳು ಸಾಮಾನ್ಯವಾಗಿದ್ದವು. ಸದ್ಯ ದೇಶಾದ್ಯಂತ ಸಿಎಸ್​ಆರ್ 1,020 ಇದ್ದರೂ 13 ರಾಜ್ಯಗಳಲ್ಲಿ ಇನ್ನೂ ಹೆಣ್ಣುಮಕ್ಕಳ ಸಂಖ್ಯೆ ಕಡಿಮೆಯೇ ಇದೆ. ಅದರಲ್ಲೂ ಗ್ರಾಮೀಣ ಪ್ರದೇಶಕ್ಕಿಂತಲೂ ನಗರ ಪ್ರದೇಶದಲ್ಲಿ ಲಿಂಗಾನುಪಾತ ಕಡಿಮೆ ಇದೆ. ಗ್ರಾಮೀಣ ಪ್ರದೇಶದಲ್ಲಿ 1,037 ಇದ್ದರೆ ನಗರ ಪ್ರದೇಶಗಳಲ್ಲಿ 985 ಇದೆ. ವೈದ್ಯಕೀಯ ಸೌಲಭ್ಯಗಳು ಕಡಿಮೆ ಇರುವ ಗುಡ್ಡಗಾಡು ಹಾಗೂ ಹಿಂದುಳಿದ ಪ್ರದೇಶಗಳಲ್ಲಿ ಲಿಂಗಾನುಪಾತ ಉತ್ತಮವಾಗಿದೆ. ಅಂದರೆ, ಲಿಂಗಪತ್ತೆ ಮಾಡುವ ವಿಧಾನಗಳನ್ನು ನಿಷೇಧಿಸಲಾಗಿದೆಯಾದರೂ ವೈದ್ಯಕೀಯ ವ್ಯವಸ್ಥೆ ಉತ್ತಮಗೊಂಡಿರುವ ಪ್ರದೇಶಗಳಲ್ಲಿ ಇನ್ನೂ ಲಿಂಗಪತ್ತೆ, ಗರ್ಭಪಾತ ನಡೆದಿದೆಯೇ ಎಂಬ ಅನುಮಾನವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. ಸಮಾಧಾನದ ಸಂಗತಿ ಯೆಂದರೆ ಕರ್ನಾಟಕದಲ್ಲಿ ಗ್ರಾಮೀಣ ಹಾಗೂ ನಗರದ ನಡುವಣ ವ್ಯತ್ಯಾಸ ಅತ್ಯಲ್ಪ. ನಗರ ಪ್ರದೇಶದಲ್ಲಿ 1,034, ಗ್ರಾಮೀಣದಲ್ಲಿ 1,035 ಹಾಗೂ ಸರಾಸರಿ 1,034ರೊಂದಿಗೆ ದೇಶದ ಸರಾಸರಿಗಿಂತಲೂ ಉತ್ತಮ ಸ್ಥಿತಿಯಲ್ಲಿದೆ.

ಪ್ರಮುಖ ಉದ್ದೇಶಗಳು

  • ದೇಶದಲ್ಲಿ ಹೆಣ್ಣುಮಕ್ಕಳು ಎದುರಿಸುತ್ತಿರುವ ಅಸಮಾನತೆ ಕುರಿತು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವಿಕೆ.
  • ಹೆಣ್ಣುಮಕ್ಕಳ ಹಕ್ಕುಗಳ ಕುರಿತು ಅರಿವು ಮೂಡಿಸುವಿಕೆ
  • ಹೆಣ್ಣುಮಕ್ಕಳ ಶಿಕ್ಷಣ, ಆರೋಗ್ಯ ಹಾಗೂ ಪೌಷ್ಠಿಕತೆ ಕುರಿತು ಜಾಗೃತಿ ಹೆಚ್ಚಿಸುವಿಕೆ
  • ಹೆಣ್ಣು ಭ್ರೂಣಹತ್ಯೆ ತಡೆಯುವ ಮೂಲಕ ಆರೋಗ್ಯಕರ ಲಿಂಗಾನುಪಾತ ಕಾಪಾಡುವಿಕೆ
  • ಕುಟುಂಬ, ಕೆಲಸದ ಸ್ಥಳ, ಸಾರ್ವಜನಿಕ ಸ್ಥಳಗಳಲ್ಲಿ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ತಡೆಯುವಿಕೆ

ಜನನಪೂರ್ವ ಹಾಗೂ ನಂತರ

  1. ಹೆಣ್ಣುಮಕ್ಕಳ ಜೀವಕ್ಕೆ ಕುತ್ತು ಬರುತ್ತಿದ್ದದ್ದು ಪ್ರಮುಖವಾಗಿ, ಪ್ರಸವ ಪೂರ್ವದಲ್ಲೆ ಲಿಂಗ ಪತ್ತೆ ಮಾಡಿ ಗರ್ಭಪಾತ ಮಾಡಿಸುತ್ತಿದ್ದದ್ದರಿಂದ. ದೇಶದೆಲ್ಲೆಡೆ ಇದ್ದ ಖಾಸಗಿ ಸ್ಕಾ್ಯನಿಂಗ್ ಕೇಂದ್ರಗಳಲ್ಲಿ ಲಿಂಗ ಪತ್ತೆ ಮಾಡಿಸುತ್ತಿದ್ದ ಗರ್ಭಿಣಿಯ ಕುಟುಂಬದವರು, ಹೆಣ್ಣು ಮಗು ಎಂದು ತಿಳಿದರೆ ಅನಧಿಕೃತವಾಗಿ ಗರ್ಭಪಾತ ಮಾಡಿಸುತ್ತಿದ್ದರು. ಇದಕ್ಕಾಗಿ ಸ್ಕಾ್ಯನಿಂಗ್ ಕೇಂದ್ರಗಳಲ್ಲಿ ಲಿಂಗ ಪತ್ತೆ ಮಾಡುವುದನ್ನು ಸಂಪೂರ್ಣ ನಿಷೇಧಿಸಲಾಯಿತು. ಪತ್ತೆ ಮಾಡುವ ಲ್ಯಾಬ್ ಹಾಗೂ ಗರ್ಭಿಣಿಯ ಕುಟುಂಬದವರಿಗೂ ಕಠಿಣ ಶಿಕ್ಷೆ ಜಾರಿಗೊಳಿಸಲಾಯಿತು.
  2. ಜನನ ನಂತರದಲ್ಲಿ ಹೆಣ್ಣುಮಕ್ಕಳ ಬೆಳವಣಿಗೆಯನ್ನು ಹಾಗೂ ಪೌಷ್ಠಿಕತೆಯನ್ನು ಕಡೆಗಣಿಸುವುದು ಮತ್ತೊಂದು ಸಮಸ್ಯೆ. ಈ ಸಮಸ್ಯೆ ನೀಗಿಸಲು ಸರ್ಕಾರದ ವತಿಯಿಂದ ಪೋಷಣ ಅಭಿಯಾನದಂಥ ಯೋಜನೆಗಳನ್ನು ರೂಪಿಸಲಾಯಿತು. ಅಂಚೆ ಇಲಾಖೆಯಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ, ಕರ್ನಾಟಕದಲ್ಲಿ ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ, ಉಚಿತ ಸೈಕಲ್ ವಿತರಣೆಯಂಥ ಅನೇಕ ಕಾರ್ಯಕ್ರಮಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿರಂತರ ಕೈಗೊಂಡಿವೆ.
  3. ಹೆಣ್ಣುಮಕ್ಕಳ ಸುರಕ್ಷತೆ ಸಲುವಾಗಿ ಅನೇಕ ವರ್ಷಗಳಿಂದ ಕಾನೂನು ಬಿಗಿ ಮಾಡಲಾಗುತ್ತಿದೆ. ಆದರೆ 2012ರಲ್ಲಿ ನವದೆಹಲಿಯಲ್ಲಿ ನಡೆದ ‘ನಿರ್ಭಯಾ ಪ್ರಕರಣ’ದ ನಂತರ ಈ ನಿಟ್ಟಿನಲ್ಲಿ ಅನೇಕ ಬದಲಾವಣೆಗಳು ಉಂಟಾದವು. ಅತ್ಯಾಚಾರ ಪ್ರಕರಣಗಳಲ್ಲಿ ಅಪರಾಧಿಯ ವಯಸ್ಸು ಕಡಿಮೆಯಿದ್ದರೂ ಶಿಕ್ಷೆಗೆ ಒಳಪಡಿಸುವ, ಶಿಕ್ಷೆ ಪ್ರಮಾಣವನ್ನು ಹೆಚ್ಚಿಸುವ ಪ್ರಯತ್ನಗಳು ನಡೆದವು. ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಸಾರ್ವಜನಿಕ ಸಾರಿಗೆಯಲ್ಲಿ ಸಿಸಿಟಿವಿ ಅಳವಡಿಸುವ ಸಲುವಾಗಿ ನಿರ್ಭಯಾ ನಿಧಿ ಸ್ಥಾಪನೆ, ಮಹಿಳಾ ಪೊಲೀಸ್ ಠಾಣೆಗಳ ಆರಂಭದಂತಹ ಕ್ರಮಗಳನ್ನು ಕೈಗೊಳ್ಳಲಾಯಿತು.
  4. ಕೆಲಸದ ಸ್ಥಳದಲ್ಲಿ ಮಹಿಳೆಯರ ದುರು ಪಯೋಗ ಹಾಗೂ ದೌರ್ಜನ್ಯ ತಡೆಯಲು ಆಂತರಿಕ ಸಮಿತಿಗಳ ರಚನೆಯಂತಹ ಆದೇಶ ಗಳನ್ನು ಮಾಡಲಾಯಿತು. ನವದೆಹಲಿಯ ಸಾರ್ವಜನಿಕ ಬಸ್​ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವುದು, ಹರ್ಯಾಣದಲ್ಲಿ ವಿದ್ಯಾರ್ಥಿನಿಯರಿಗಾಗಿ ವಿದ್ಯಾವಾಹಿನಿ ಬಸ್ ಸೇವೆ ಸೇರಿ ಅನೇಕ ರಾಜ್ಯ ಸರ್ಕಾರಗಳು ಜಾಗೃತಿ ಕಾರ್ಯಕ್ರಮ ಮತ್ತು ಯೋಜನೆಗಳನ್ನು ಜಾರಿಗೊಳಿಸಿದವು.