ನ್ಯೂಸ್

ಸಹೃದಯತೆಯ ನ್ಯಾಯಮೂರ್ತಿ ರಾಮಾ ಜೋಯಿಸ್

Webdesk - Ravikanth

ಜಾರ್ಖಂಡ್ ಮತ್ತು ಬಿಹಾರದ ರಾಜ್ಯಪಾಲರಾಗಿ, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ, ಕರ್ನಾಟಕದ ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಮಂಡಗದ್ದೆ ರಾಮಾ ಜೋಯಿಸರು (91) ಮಂಗಳವಾರ ಇಹಲೋಕ ತ್ಯಜಿಸಿದ್ದಾರೆ. ಬೆಂಗಳೂರಿನ ರಾಜಾಜಿನಗರದ ಸ್ವಗೃಹದಲ್ಲಿ ಜೋಯಿಸರಿಗೆ ಬೆಳಗ್ಗೆ 7.15ರ ಸುಮಾರಿಗೆ ಎದೆನೋವು ಕಾಣಿಸಿಕೊಂಡಿತು. ಆಸ್ಪತ್ರೆಗೆ ಕರೆದೊಯ್ಯುವ ಮುನ್ನವೇ 7.30ಕ್ಕೆ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದರು. ಪತ್ನಿ ವಿಮಲಾ ಜೋಯಿಸ್, ಪುತ್ರ ಎಂ.ಆರ್.ಶೈಲೇಂದ್ರ ಮತ್ತು ಪುತ್ರಿ ಎಂ.ಆರ್.ತಾರಾ ಹಾಗೂ ಮೂವರು ಮೊಮ್ಮಕ್ಕಳನ್ನು ಅಗಲಿದ್ದಾರೆ. ಸಂಜೆ 5.30ಕ್ಕೆ ಚಾಮರಾಜಪೇಟೆಯ ಹಿಂದೂ ರುದ್ರಭೂಮಿಯಲ್ಲಿ ಅಂತಿಮ ವಿಧಿ-ವಿಧಾನ ನೆರವೇರಿಸಲಾಯಿತು.

ನ್ಯಾಯಮೂರ್ತಿ, ರಾಜ್ಯಪಾಲರಾಗಿ ಸೇವೆ: ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಯಾಗಿ 1992ರ ಮೇ 3ರಂದು ನೇಮಕಗೊಂಡ ರಾಮಾ ಜೋಯಿಸರು 4 ತಿಂಗಳಲ್ಲಿ ನಿವೃತ್ತರಾದರು. ಬಳಿಕ ಹಲವು ಕಾಲೇಜುಗಳಲ್ಲಿ ಕಾನೂನು ಪ್ರಾಧ್ಯಾಪಕರಾಗಿ, ಸುಪ್ರೀಂ ಕೋರ್ಟ್​ನ ನ್ಯಾಯವಾದಿಯಾಗಿ ಸೇವೆ ಸಲ್ಲಿಸಿದರು. ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರವಿದ್ದಾಗ 2002ರಲ್ಲಿ ಜೋಯಿಸ್ ಅವರನ್ನು ಜಾರ್ಖಂಡ್ ರಾಜ್ಯಪಾಲರನ್ನಾಗಿ ನೇಮಕ ಮಾಡಿತು. ಒಂದು ವರ್ಷದ ಬಳಿಕ 2003ರಲ್ಲಿ ವರ್ಗಾವಣೆಗೊಂಡು ಬಿಹಾರದ ರಾಜ್ಯಪಾಲರಾಗಿ 2004 ಅಕ್ಟೋಬರ್​ವರೆಗೆ ಸೇವೆ ಸಲ್ಲಿಸಿ ನಿವೃತ್ತರಾದರು.

ಬದುಕಿನ ಹಾದಿ: ಎಂ.ರಾಮಾ ಜೋಯಿಸ್ ಮೂಲತಃ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆಯವರು. 1931ರಲ್ಲಿ ಜುಲೈ 27ರಂದು ನರಸಿಂಹ ಜೋಯಿಸ್-ಲಕ್ಷ್ಮೀದೇವಮ್ಮ ದಂಪತಿ ಪುತ್ರನಾಗಿ ಅರಗ ಗ್ರಾಮದಲ್ಲಿ ಜನಿಸಿದರು. ತಂದೆ ಮಂಡಗದ್ದೆಯಲ್ಲಿ ಪ್ರಾಥಮಿಕ ಶಾಲೆ ಶಿಕ್ಷಕರಾಗಿದ್ದರು. ಮಂಡಗದ್ದೆ ಮತ್ತು ತೀರ್ಥಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ, ಶಿವಮೊಗ್ಗದಲ್ಲಿ ಇಂಟರ್ ಮೀಡಿಯೆಟ್ ಮತ್ತು ಸಹ್ಯಾದ್ರಿ ಕಾಲೇಜಿನಲ್ಲಿ ಪದವಿ ಪೂರ್ಣಗೊಳಿಸಿದರು. ಅದಕ್ಕೂ ಮೊದಲು ತೀರ್ಥಹಳ್ಳಿ ಮುನ್ಸಿಪಲ್ ಕಚೇರಿಯಲ್ಲಿ ಕ್ಲರ್ಕ್ ಆಗಿದ್ದರು. ಆಗುಂಬೆಯ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿಯೂ ಕಾರ್ಯನಿರ್ವಹಿಸಿದರು. ನಂತರ ಬೆಂಗಳೂರಿಗೆ ತೆರಳಿ ಕಾನೂನು ಪದವಿ ಪಡೆದು ವಕೀಲರಾಗಿದ್ದರು. ನ್ಯಾಯಾಧೀಶರಾದ ಬಳಿಕ 1982ರ ಆಗಸ್ಟ್ 9ರಂದು ತೀರ್ಥಹಳ್ಳಿಗೆ ಬಂದಿದ್ದ ಅವರು ಕೋರ್ಟ್ ಕಟ್ಟಡ (ಈಗಿನ ಸಂಸ್ಕೃತಿ ಮಂದಿರ) ಉದ್ಘಾಟಿಸಿದ್ದರು.

ಮರತೂರನ್ನು ಮರೆಯದ ಊರನ್ನಾಗಿಸಿದರು!: ದಾರ್ಶನಿಕ ವಿಜ್ಞಾನೇಶ್ವರರ ಕಾರ್ಯಕ್ಷೇತ್ರ ಮರತೂರ (ಮರೆತ ಊರು)ನ್ನು ರಾಮಾ ಜೋಯಿಸರು ಮರೆಯಲಾರದ ಊರನ್ನಾಗಿಸಿದರು. ವಿಜ್ಞಾನೇಶ್ವರ ಪ್ರತಿಷ್ಠಾನ ಟ್ರಸ್ಟ್ (ಕಲಬುರಗಿ ಜಿಲ್ಲೆ) ಸಂಸ್ಥಾಪಕ ಅಧ್ಯಕ್ಷರಾಗಿದ್ದ ಅವರು ನ್ಯಾಯಾಂಗ ಕ್ಷೇತ್ರಕ್ಕೆ ವಿಜ್ಞಾನೇಶ್ವರನ ಕೊಡುಗೆಯನ್ನು ಇಡೀ ದೇಶಕ್ಕೆ ಪರಿಚಯಿಸಿದರು. ಮರತೂರಿನಲ್ಲಿ ವಿಜ್ಞಾನೇಶ್ವರ ಭವನ, ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ವಿಜ್ಞಾನೇಶ್ವರ ಪೀಠ, ಭಾರತೀಯ ನ್ಯಾಯದರ್ಶನ ಮತ್ತು ರಾಜಧರ್ಮ ಎಂಬ ಸ್ನಾತಕೋತ್ತರ ಕೋರ್ಸ್ ಸ್ಥಾಪನೆಗೆ ಕಾರಣೀಭೂತರು.

ಪ್ರಧಾನಿ ಸಂತಾಪ: ರಾಮಾ ಜೋಯಿಸ್ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ‘ನ್ಯಾಯಮೂರ್ತಿ (ನಿವೃತ್ತ) ಎಂ.ರಾಮಜೋಯಿಸ್ ಬುದ್ಧಿಜೀವಿ ಮತ್ತು ನ್ಯಾಯಶಾಸ್ತ್ರದ ಶಿಖರವಾಗಿದ್ದರು. ಭಾರತದ ಪ್ರಜಾಪ್ರಭುತ್ವವನ್ನು ಬಲಪಡಿಸುವಲ್ಲಿ ಅವರು ತಮ್ಮ ಶ್ರೀಮಂತ ಜ್ಞಾನಶಕ್ತಿ ಮತ್ತು ಕೊಡುಗೆಗಳಿಂದಾಗಿ ಮೆಚ್ಚುಗೆಗೆ ಪಾತ್ರರಾಗಿದ್ದರು. ಅವರ ನಿಧನದಿಂದ ದುಃಖಿತನಾಗಿದ್ದೇನೆ’ ಎಂದು ಟ್ವೀಟ್​ನಲ್ಲಿ ತಿಳಿಸಿದ್ದಾರೆ.

ನ್ಯಾಯಮೂರ್ತಿ, ರಾಜ್ಯಪಾಲರಾಗಿ ಸೇವೆ: ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಯಾಗಿ 1992ರ ಮೇ 3ರಂದು ನೇಮಕಗೊಂಡ ರಾಮಾ ಜೋಯಿಸರು 4 ತಿಂಗಳಲ್ಲಿ ನಿವೃತ್ತರಾದರು. ಬಳಿಕ ಹಲವು ಕಾಲೇಜುಗಳಲ್ಲಿ ಕಾನೂನು ಪ್ರಾಧ್ಯಾಪಕರಾಗಿ, ಸುಪ್ರೀಂ ಕೋರ್ಟ್​ನ ನ್ಯಾಯವಾದಿಯಾಗಿ ಸೇವೆ ಸಲ್ಲಿಸಿದರು. ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರವಿದ್ದಾಗ 2002ರಲ್ಲಿ ಜೋಯಿಸ್ ಅವರನ್ನು ಜಾರ್ಖಂಡ್ ರಾಜ್ಯಪಾಲರನ್ನಾಗಿ ನೇಮಕ ಮಾಡಿತು. ಒಂದು ವರ್ಷದ ಬಳಿಕ 2003ರಲ್ಲಿ ವರ್ಗಾವಣೆಗೊಂಡು ಬಿಹಾರದ ರಾಜ್ಯಪಾಲರಾಗಿ 2004 ಅಕ್ಟೋಬರ್​ವರೆಗೆ ಸೇವೆ ಸಲ್ಲಿಸಿ ನಿವೃತ್ತರಾದರು.

ಸಕ್ರಿಯ ಸಹಭಾಗಿತ್ವ: ಕರ್ನಾಟಕದಿಂದ 2008ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿ, ಸಂಸತ್ ಕಲಾಪ, ಹಾಜರಾತಿ ಮತ್ತು ಚರ್ಚೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಈ ವೇಳೆ ಸಂಸತ್ತಿನ ಬಾಗಿಲುಗಳು, ಎತ್ತರದ ಗೋಡೆಗಳ ಮೇಲೆ ಸಂಸ್ಕೃತದಲ್ಲಿ ಬರೆಯಲಾಗಿದ್ದ ಶ್ಲೋಕ ಹಾಗೂ ಬರಹಗಳನ್ನು ಗುರುತಿಸಿ ಅಧ್ಯಯನ ಮಾಡಿದರು. ನಂತರ ಎಲ್ಲ ಶ್ಲೋಕಗಳನ್ನು ಭಾಷಾಂತರಿಸಿ, ಪುಸ್ತಕ ಹೊರತಂದರು.

ಪ್ರಮುಖ ಕೃತಿಗಳು

  • ಸರ್ವೀಸ್ ಅಂಡರ್ ಸ್ಟೇಟ್
  • ಹಿಸ್ಟಾರಿಕಲ್ ಬ್ಯಾಟಲ್
  • ನೀಡ್ ಫಾರ್ ಅಮೆಂಡಿಂಗ್ ದಿ ಕಾನ್ಸಿ್ಟಟ್ಯೂಷನ್
  • ರಾಜಧರ್ಮ ವಿತ್ ದಿ ಲೆಸೆನ್ಸ್ ಆಫ್ ರಾಜನೀತಿ
  • ಕಾನೂನು ಮತ್ತು ಸಾಂವಿಧಾನಿಕ ಭಾರತದ ಇತಿಹಾಸ
  • ಪ್ರಾಚೀನ ಭಾರತದ ಕಾನೂನು: ಮನುಸ್ಮೃತಿಯಲ್ಲಿರುವ ಶಾಶ್ವತ ಮೌಲ್ಯಗಳು
  • ತ್ರಿವರ್ಗ ಸಿದ್ದಾಂತ
  • ಕೋಡ್ ಆಫ್ ಕಂಡಕ್ಟ್ ಫಾರ್ ರೂಲರ್ಸ್
  • ಸಂವಿಧಾನವನ್ನು ತಿದ್ದುಪಡಿ ಮಾಡುವ ಅವಶ್ಯಕತೆ

ರಾಜಾರಾಮ್ ಬುಕ್​ಹೌಸ್: 65 ವರ್ಷಗಳ ಹಿಂದೆ ಓದುಗರ ಹಂಬಲ ತಣಿಸಲು ಶಿವಮೊಗ್ಗದ ಗಾಂಧಿ ಬಜಾರ್​ನಲ್ಲಿ ರಾಮಾ ಜೋಯಿಸರು ಪುಸ್ತಕದ ಮಳಿಗೆ ಆರಂಭಿಸಿದರು. ಅವರ ಒಡನಾಡಿ, ಆರೆಸ್ಸೆಸ್ ಕಾರ್ಯಕರ್ತ ಕೆ. ನಾಗರಾಜರಾವ್ ಅವರ ದ್ವಿತೀಯಾರ್ಧ ಮತ್ತು ರಾಮಜೋಯಿಸರ ಪೂರ್ವಾಧ ಸೇರಿಸಿ ‘ರಾಜಾರಾಮ್ ಬುಕ್​ಹೌಸ್ ಎಂದು ಹೆಸರಿಟ್ಟರು. ಇದು ಇಂದಿಗೂ ಜಿಲ್ಲೆಯ ಸಾಹಿತ್ಯಾಸಕ್ತರ ಮೆಚ್ಚಿನ ಆಕರವಾಗಿದೆ ಎಂದು ರಾಮ ಜೋಯಿಸರ ಸೇವೆಯನ್ನು ಆರೆಸ್ಸೆಸ್ ಮುಖಂಡರಾದ ದತ್ತಾತ್ರೇಯ ಹೊಸಬಾಳೆ, ವಿ. ನಾಗರಾಜ್ ಸ್ಮರಿಸಿದ್ದಾರೆ.

ನ್ಯಾಯಮೂರ್ತಿ ಎಂ. ರಾಮಾ ಜೋಯಿಸರ ನಿಧನದಿಂದ ತೀವ್ರ ದುಃಖವಾಗಿದೆ. ಶಿವಮೊಗ್ಗ ಜಿಲ್ಲೆಯವರೇ ಆದ ಜೋಯಿಸರು ಮುಖ್ಯ ನ್ಯಾಯಮೂರ್ತಿಗಳಾಗಿ, ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಕಾನೂನು ಮತ್ತು ಸಂವಿಧಾನದ ಬಗ್ಗೆ ಅನೇಕ ಪುಸ್ತಕಗಳನ್ನು ಬರೆದ ಒಬ್ಬ ಮಹಾನ್ ವಿದ್ವಾಂಸರನ್ನು ಕಳೆದುಕೊಂಡಿದ್ದೇವೆ. ದೇವರು ಅವರ ಕುಟುಂಬಕ್ಕೆ ನೋವು ಸಹಿಸುವ ಶಕ್ತಿ ಕೊಡಲಿ.

| ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ

ರಾಮಾ ಜೋಯಿಸರು ಕರ್ನಾಟಕ ಉಚ್ಚನ್ಯಾಯಾಲಯ ಪೂರ್ಣಪೀಠದ ನೇತೃತ್ವವಹಿಸಿ ಗೋಕಾಕ್ ವರದಿ ಕುರಿತು 1989ರಲ್ಲಿ ನೀಡಿದ ತೀರ್ಪು ಪ್ರೌಢಶಾಲಾ ಹಂತದವರೆಗೆ ಕನ್ನಡವು ಒಂದು ಭಾಷೆಯಾಗಿ ಕಡ್ಡಾಯವಾಗಲು ಕಾರಣವಾಯಿತು.

| ಡಾ. ಮನು ಬಳಿಗಾರ್ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು