ಮಧ್ಯ ಕರ್ನಾಟಕದ ಬೆಣ್ಣೆನಗರಿ ದಾವಣಗೆರೆ ಮತ್ತು ಕೋಟೆನಾಡು ಚಿತ್ರದುರ್ಗ ಜಿಲ್ಲೆಗಳ ಜನರ ಬೇಡಿಕೆಗಳಲ್ಲಿ ಬಹಳಷ್ಟು ಸಾಮ್ಯತೆಯಿದೆ. ದಾವಣಗೆರೆ-ತುಮಕೂರು ನೇರ ರೈಲು ಮಾರ್ಗ, ಭದ್ರಾ ಮೇಲ್ದಂಡೆ ಯೋಜನೆ, ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ, ಪ್ರತ್ಯೇಕ ಹಾಲು ಒಕ್ಕೂಟಕ್ಕೆ ಸಂಬಂಧಿಸಿದಂತೆ ಹಲವು ನಿರೀಕ್ಷೆಗಳಿವೆ. ವಾಣಿಜ್ಯಕ್ಕೆ ಹೆಸರಾದ ದಾವಣಗೆರೆ ಭಾಗದ ಮಂದಿ ವಿಮಾನ ನಿಲ್ದಾಣದ ಕನಸು ಕಾಣುತ್ತಿದ್ದಾರೆ. ಜತೆಗೆ ಕೃಷಿ ಕಾಲೇಜು, ಟ್ರಕ್ ಟರ್ವಿುನಲ್, ಫುಡ್ ಪಾರ್ಕ್ನಂಥ ಯೋಜನೆಗಳ ಕೊಡುಗೆ ಸಿಗಬಹುದು ಎಂದು ಕಾಯುತ್ತಿದ್ದಾರೆ. ಹೊಸ ತಾಲೂಕು ರಚನೆ, ಧರ್ಮಪುರ ಕೆರೆಗೆ ನೀರು ಸೇರಿ ಜಿಲ್ಲೆಯ ಕೃಷಿ, ತೋಟಗಾರಿಕೆ, ಕೈಗಾರಿಕೆ, ಶಿಕ್ಷಣ, ಆರೋಗ್ಯ ಮುಂತಾದ ಕ್ಷೇತ್ರಗಳ ಹಲವು ಬೇಡಿಕೆಗಳಿಗೆ ಸಿಎಂ ಸ್ಪಂದಿಸಬೇಕು ಎನ್ನುತ್ತಾರೆ ದುರ್ಗದ ಜನ.
1. ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಬೇಡಿಕೆ: ಶಿಕ್ಷಣ ಸಂಸ್ಥೆಗಳಿಗೆ ಹೆಸರಾದ ದಾವಣಗೆರೆಯಲ್ಲಿ ಖಾಸಗಿ ಸಂಸ್ಥೆಗಳೇ ಹೆಚ್ಚಾಗಿವೆ. ಎರಡು ಖಾಸಗಿ ವೈದ್ಯಕೀಯ ಕಾಲೇಜುಗಳೂ ಇವೆ. ಆದರೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯಾಗಬೇಕು; ಬಡ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅದರಿಂದ ಅನುಕೂಲವಾಗುತ್ತದೆ ಎಂಬ ಬೇಡಿಕೆ ಹಳೆಯದು. ಚಿತ್ರದುರ್ಗದಲ್ಲೂ ಕಳೆದ ದೀಪಾವಳಿ ವೇಳೆ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಮೂಡಿದ್ದ ಭರವಸೆ ನಂತರದಲ್ಲಿ ಕುಗ್ಗಿತ್ತು. ಈ ಬಾರಿಯಾದರೂ ಅದು ಈಡೇರಬಹುದು ಎಂಬ ನಿರೀಕ್ಷೆಯಿದೆ.
2. ನೇರ ರೈಲು ಮಾರ್ಗ: ಹಿಂದಿನ ಅಧಿಕಾರಾವಧಿಯಲ್ಲಿ (2011-12) ತಾವೇ ಮಂಜೂರು ಮಾಡಿಸಿದ್ದ 1801 ಕೋಟಿ ರೂ.ಗೂ ಅಧಿಕ ವೆಚ್ಚದ ದಾವಣಗೆರೆ -ಚಿತ್ರದುರ್ಗ- ತುಮಕೂರು ನೇರ ರೈಲು ಮಾರ್ಗ (198 ಕಿ.ಮೀ.) ಯೋಜನೆಯ ಅನುಷ್ಠಾನಕ್ಕೆ ಸಿಎಂ ಗ್ರೀನ್ ಸಿಗ್ನಲ್ ಕೊಡಬೇಕಿದೆ. ಈ ಯೋಜನೆಗೆ 3 ಜಿಲ್ಲೆಗಳಿಂದ 2165 ಎಕರೆಗಿಂತ ಹೆಚ್ಚು ಭೂಮಿಯ ಅಗತ್ಯವಿದೆ. ಚಿತ್ರದುರ್ಗ ಜಿಲ್ಲೆಯೊಂದರಲ್ಲೇ ಭೂಸ್ವಾಧೀನಕ್ಕೆ 1,000 ಕೋಟಿ ರೂ. ಬೇಕು. ತುಮಕೂರು ಜಿಲ್ಲೆಯಲ್ಲಿ 796, ದಾವಣಗೆರೆ ಜಿಲ್ಲೆಯಲ್ಲಿ 237 ಎಕರೆ ಜಮೀನು ಅಗತ್ಯವಿದೆ.
3. ಪ್ರತ್ಯೇಕ ಹಾಲು ಒಕ್ಕೂಟ: ದಾವಣಗೆರೆ-ಚಿತ್ರದುರ್ಗಕ್ಕೆ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆಯಾಗಬೇಕು ಎಂಬುದು ಪ್ರಮುಖ ಬೇಡಿಕೆ. ಪ್ರಸ್ತುತ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಮೂರೂ ಜಿಲ್ಲೆಗಳ ನಡುವೆ ಒಕ್ಕೂಟವಿದೆ (ಶಿಮುಲ್). ಪ್ರತ್ಯೇಕ ಹಾಲು ಒಕ್ಕೂಟ ರಚನೆಯಾದರೆ ಈ ಭಾಗದ ರೈತರಿಗೆ ಅನುಕೂಲವಾಗಲಿದೆ. ಮೆಗಾ ಡೇರಿ ಆಗುವುದರಿಂದ ಹೆಚ್ಚು ಉತ್ಪನ್ನಗಳನ್ನು ತಯಾರಿಸಲು ಸಾಧ್ಯವಾಗಲಿದೆ.
4. ಭದ್ರಾ ಮೇಲ್ದಂಡೆ ಯೋಜನೆ: ಭದ್ರಾ ಮೇಲ್ದಂಡೆ ಯೋಜನೆ ಆರಂಭವಾಗಿದ್ದರೂ ಅನುಷ್ಠಾನದಲ್ಲಿ ವಿಳಂಬವಾಗುತ್ತಿದ್ದು, ಬರದ ನಾಡೆಂಬ ಹಣೆಪಟ್ಟಿ ಹೊತ್ತ ಚಿತ್ರದುರ್ಗ ಜಿಲ್ಲೆಗೆ ಬಜೆಟ್ ಶಕ್ತಿ ತುಂಬಬಹುದೇ ಎಂದು ಜನರು ಕಾತರದಿಂದ ಕಾಯುತ್ತಿದ್ದಾರೆ. ಯೋಜನೆ ಕಾಮಗಾರಿ ಚುರುಕುಗೊಳಿಸಲು ಬಜೆಟ್ನಲ್ಲಿ ಏನಾದರೂ ಪ್ರಸ್ತಾಪವಾಗಬಹುದೇ ಎಂಬುದು ರೈತರ ನಿರೀಕ್ಷೆಯಾಗಿದೆ.
5. ವಿಮಾನ ನಿಲ್ದಾಣದ ಬೇಡಿಕೆ: ದಾವಣಗೆರೆಯು ವಾಣಿಜ್ಯ ನಗರಿಯಾಗಿದ್ದು ವ್ಯಾಪಾರ, ವಹಿವಾಟು ದೃಷ್ಟಿಯಿಂದ ಮಹತ್ವದ್ದಾಗಿದೆ. ಇಲ್ಲಿ ಉದ್ಯಮಿಗಳು, ವರ್ತಕರ ಸಮೂಹವೇ ಇದೆ. ಇಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ ಇನ್ನಿತರ ಕೋರ್ಸ್ಗಳಲ್ಲಿ ವ್ಯಾಸಂಗ ಮಾಡಲು ವಿವಿಧ ರಾಜ್ಯಗಳಿಂದ, ವಿದೇಶಗಳಿಂದಲೂ ವಿದ್ಯಾರ್ಥಿಗಳು ಬರುತ್ತಾರೆ. ವಿಶ್ವವಿದ್ಯಾಲಯವಿದೆ. ವಿವಿಧ ಕ್ಷೇತ್ರಗಳ ಜನರು ವಿಮಾನಯಾನವನ್ನು ಇಷ್ಟಪಡುತ್ತಾರೆ. ಇದರಿಂದ ಈ ಭಾಗದ ಜನಪ್ರತಿನಿಧಿಗಳಿಗೂ ಅನುಕೂಲವಾಗಲಿದೆ.